ಕುಂದಾಪುರ ತಾಲೂಕು ಮಟ್ಟದ ವಿಕಲಚೇತನರ ಸಮಾವೇಶ

Update: 2024-12-21 14:17 GMT

ಕುಂದಾಪುರ: ವಿಶೇಷ ಚೇತನರನ್ನು ಎಲ್ಲಾ ಕಡೆ ಸಮಾನವಾಗಿ ಕಾಣಬೇಕು. ಅವರು ಗೌರವಯುತ ಜೀವನ ನಡೆಸಲು ಹಾಗೂ ಅವರ ಹಕ್ಕುಗಳಿಗೂ ರಕ್ಷಣೆ ನೀಡಬೇಕಾಗಿದೆ ಎಂಬ ಮೂಲಭೂತ ಕಾನೂನು ನಮ್ಮ ಸಂವಿಧಾನದಲ್ಲಿದೆ. ಎಲ್ಲ ವಿಶೇಷ ಚೇತನರಿಗೂ ನಮ್ಮ ದೇಶದಲ್ಲಿ ಕಾನೂನಿನ ರಕ್ಷಣೆಯಿದೆ. ಅದನ್ನು ಯಾರಾದರೂ ಉಲ್ಲಂಘಿಸಿದರೆ ಅಂತವರಿಗೆ ದಂಡ ವಿಧಿಸುವ ಅವಕಾಶವೂ ಇದೆ ಎಂದು ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ಹಾಗೂ ಹಿರಿಯ ಸಿವಿಲ್ ನ್ಯಾಯಾಧೀಶ ಪಿ.ಆರ್. ಯೋಗೀಶ್ ಹೇಳಿದ್ದಾರೆ.

ಶನಿವಾರ ಇಲ್ಲಿನ ಆರ್.ಎನ್. ಶೆಟ್ಟಿ ಸಭಾಂಗಣದಲ್ಲಿ ರಾಜ್ಯ ಅಂಗವಿಕಲರ ಹಾಗೂ ಪಾಲಕರ ಒಕ್ಕೂಟದ ಉಡುಪಿ ಜಿಲ್ಲಾ ಸಮಿತಿ ಕುಂದಾಪುರ - ಬೈಂದೂರು ತಾಲೂಕು ವಿಶೇಷ ಚೇತನರ ಪುನರ್ವಸತಿ ಕಾರ್ಯಕರ್ತರ ಒಕ್ಕೂಟ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ನಡೆದ ಬೈಂದೂರು ಹಾಗೂ ಕುಂದಾಪುರ ತಾಲೂಕು ಮಟ್ಟದ ದಿವ್ಯಾಂಗರ ಸಮಾವೇಶ, ಸಾಧಕರಿಗೆ ಸಮ್ಮಾನ ಹಾಗೂ ಪ್ರತಿಭಾ ಪ್ರದರ್ಶನ ಕಾರ್ಯಕ್ರಮವನ್ನು ಉದ್ಘಾಟಿಸಿ ಅವರು ಮಾತನಾಡಿದರು.

ಅಂಗವಿಕಲತೆಯಿದ್ದರೂ, ಶಿಕ್ಷಣದಿಂದ ಅದನ್ನು ಮೆಟ್ಟಿ ನಿಲ್ಲಲು ಸಾಧ್ಯವಿದೆ. ಅದರಿಂದ ನೀವು ನಿಮ್ಮ ಜೀವನವನ್ನು ಉತ್ತಮಪಡಿಸಿಕೊಳ್ಳಲು ಸಾಧ್ಯವಿದೆ. ಸರಕಾರದಿಂದ ಸಿಗುವ ಎಲ್ಲ ಸವಲತ್ತುಗಳನ್ನು ಎಲ್ಲರಿಗೂ ಸಿಗುವಂತೆ ಎಲ್ಲರ ಮನೋಭಾವ ಇರಲಿ ಎಂದವರು ಹೇಳಿದರು.

ಬೈಂದೂರು ಶಾಸಕ ಗುರುರಾಜ್ ಗಂಟಿಹೊಳೆ ಮಾತನಾಡಿ, ಜಿಲ್ಲೆಯಲ್ಲಿ ವಿಶೇಷ ಚೇತನರ ಸಂಘಟನೆ ಬಹಳಷ್ಟು ಸಕ್ರಿಯವಾಗಿದೆ. ಸಂಘಟನೆಗಳು ಇರುವುದೇ ಕಾಳಜಿಗಾಗಿ. ವಿಶೇಷ ಚೇತನರ ಆರೈಕೆದಾರರಿಗೆ 1 ಸಾವಿರ ರೂ. ಸರಕಾರದಿಂದ ಗೌರವಧನ ಆರಂಭಗೊಂಡಿರುವುದು ಒಳ್ಳೆಯ ಸಂಗತಿ. ಬದುಕನ್ನು ಯಾರಿಗೂ ಹೊರೆಯಾಗದ ರೀತಿ ಬದುಕಿ ತೋರಿಸುತ್ತಿರುವ ಅನೇಕ ಮಂದಿ ನಿಜಕ್ಕೂ ಶ್ರೇಷ್ಠರು. ಬೈಂದೂರು ಕ್ಷೇತ್ರದಲ್ಲಿ ಯಾರಾದರೂ ವ್ಯವಹಾರ, ಅಂಗಡಿ ಮೂಲಕ ಸ್ವಾವಲಂಬನೆ ಮಾಡುವ ಆಸಕ್ತಿಯಿರು ವವರಿಗೆ ನಮ್ಮಿಂದಾಗುವ ನೆರವು ನೀಡಲಾಗುವುದು ಎಂದರು.

ಜಿಲ್ಲೆಯಲ್ಲಿ 12 ರಿಂದ 15 ಸಾವಿರದಷ್ಟು ಮಂದಿ ವಿಶೇಷ ಚೇತನರಿದ್ದಾರೆ. ಆದರೆ ಈ ಕಾರ್ಯಕ್ರಮಗಳಿಗೆ ಬರುವುದು ಮಾತ್ರ ಕೆಲವೇ ಕೆಲವರು. ಹೆಚ್ಚೆಚ್ಚು ಜನ ಒಟ್ಟುಗೂಡಿದಾಗ ಸರಕಾರದಿಂದ ಇನ್ನಷ್ಟು ಪ್ರಯೋಜನ ಪಡೆಯಲು ಸಾಧ್ಯ. ಜಿಲ್ಲೆಯಲ್ಲಿ ದಿವ್ಯಾಂಗರಿಗೆ ಭವನ ಆಗಬೇಕಾಗಿದೆ ಎಂದು ಕೊಡವೂರು ದಿವ್ಯಾಂಗರ ರಕ್ಷಣಾ ಸಮಿತಿಯ ಸಂಚಾಲಕ ವಿಜಯ್ ಕೊಡವೂರು ಹೇಳಿದರು.

ವಿಶೇಷ ಸಾಧಕರಾದ ವಿಲ್ಸನ್ ಪಿ.ಕೆ. ಹಂಗಳೂರು, ನಿಶ್ಚಿತಾ ವಿ.ಹೊಸೂರು, ಸೃಜನಾ ಎಸ್.ಪಿ., ನೀರಜ್ ಕಿರಿಮಂಜೇಶ್ವರ, ದಿನಕರ ಶೆಟ್ಟಿ ಹರ್ಕಾಡಿ, ರಂಜಿತ್ ತಲ್ಲೂರು, ರಾಘವೇಂದ್ರ ಹಕ್ಲಾಡಿ, ವನಿತಾ ಶಂಕರನಾರಾಯಣ, ಅನಿತಾ ಬಿ.ಎಸ್. ಪಡುವರಿ, ನಾಗರಾಜ್ ತಲ್ಲೂರು ಅವರನ್ನು ಸಮ್ಮಾನಿಸಲಾಯಿತು.

ವಿಶೇಷ ಚೇತನರ - ಹಿರಿಯ ನಾಗರಿಕರ ಸಬಲೀಕರಣ ಇಲಾಖೆ ನಿವೃತ್ತ ಸಹಾಯಕ ನಿರ್ದೇಶಕ ನಿರಂಜನ್ ಭಟ್ ದಿಕ್ಸೂಚಿ ಭಾಷಣ ಮಾಡಿದರು. ಜಿಲ್ಲಾ ವಿಶೇಷ ಚೇತನರ ಹಾಗೂ ಹಿರಿಯ ನಾಗರೀಕರ ಸಬಲೀಕರಣಾಧಿಕಾರಿ ರತ್ನಾ, ಶಿಶು ಅಭಿವೃದ್ಧಿ ಇಲಾಖೆಯ ಮೇಲ್ವಿಚಾರಕಿ ಸಿಂಧು ಕುಮಾರಿ ಪಿ.ಆರ್., ಕುಂದಾಪುರ - ಬೈಂದೂರು ರಾಜ್ಯ ಅಂಗವಿಕಲರ - ಪಾಲಕರ ಒಕ್ಕೂಟದ ಅಧ್ಯಕ್ಷ ಸಂತೋಷ ದೇವಾಡಿಗ, ಸ್ಥಾಪಕ ಗೌರವಾಧ್ಯಕ್ಷ ವೆಂಕಟೇಶ್ ಕೋಣಿ ಮತ್ತಿತರರು ಉಪಸ್ಥಿತರಿದ್ದರು.

ಅಧ್ಯಕ್ಷತೆ ವಹಿಸಿದ್ದ ರಾಜ್ಯ ಅಂಗವಿಕಲರ- ಪಾಲಕರ ಒಕ್ಕೂಟದ ಜಿಲ್ಲಾಧ್ಯಕ್ಷ ಮಂಜುನಾಥ್ ಹೆಬ್ಬಾರ್ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಜನತಾ ಕಾಲೇಜಿನ ಉಪನ್ಯಾಸಕ ಉದಯ ನಾಯ್ಕ್ ನಿರೂಪಿಸಿದರು.

ಇದಕ್ಕೆ ಮೊದಲು ಕುಂದೇಶ್ವರ ದೇವಸ್ಥಾನದ ಬಳಿಯಿಂದ ಆರಂಭಗೊಂಡ ಜಾಥಾಗೆ ಕುಂದಾಪುರ ತಾ.ಪಂ. ಕಾರ್ಯನಿರ್ವಾಹಣಾಧಿಕಾರಿ ಡಾ. ರವಿಕುಮಾರ್ ಗಂಗಪ್ಪ ಹುಕ್ಕೇರಿ ಚಾಲನೆ ನೀಡಿದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News