ಅಕ್ಷರ ದಾಸೋಹ ನೌಕರರಿಗೆ ಬಜೆಟ್‌ನಲ್ಲಿ ವೇತನ ಹೆಚ್ಚಳಕ್ಕೆ ಆಗ್ರಹ: ನೌಕರರ ಸಂಘದಿಂದ ಡಿಸಿ ಕಚೇರಿ ಎದುರು ಧರಣಿ

Update: 2024-12-21 15:21 GMT

ಉಡುಪಿ, ಡಿ.21: ಅಕ್ಷರ ದಾಸೋಹ ನೌಕರರ ಸಂಘದ (ಸಿಐಟಿಯು) ಉಡುಪಿ ವಲಯ ಸಮಿತಿ ನೇತೃತ್ವದಲ್ಲಿ ಇಂದು ಮಣಿಪಾಲದಲ್ಲಿರುವ ಜಿಲ್ಲಾಧಿಕಾರಿ ಕಛೇರಿ ಮುಂದೆ ತಮ್ಮ 21 ಪ್ರಮುಖ ಬೇಡಿಕೆಗಳನ್ನು ಈಡೇರಿಸುವಂತೆ ಒತ್ತಾಯಿಸಿ ಧರಣಿ ನಡೆಸಲಾಯಿತು.

ಧರಣಿಯ ಕೊನೆಯಲ್ಲಿ ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಡಾ.ಕೆ. ವಿದ್ಯಾಕುಮಾರಿ ಅವರ ಮುಖಾಂತರ ಪ್ರಧಾನ ಮಂತ್ರಿ ಹಾಗೂ ಮುಖ್ಯಮಂತ್ರಿ ಅವರಿಗೆ ಮನವಿಯನ್ನು ಸಲ್ಲಿಸಿ ಅಕ್ಷರ ದಾಸೋಹ ನೌಕರರಿಗೆ ರಾಜ್ಯ ಹಾಗೂ ಕೇಂದ್ರದ ಮುಂಬ ರುವ ಬಜೆಟ್‌ಗಳಲ್ಲಿ ವೇತನ ಹೆಚ್ಚಳಕ್ಕೆ ಹಣ ಮೀಸಲಿಡುವಂತೆ ಒತ್ತಾಯಿಸಲಾಯಿತು.

ಧರಣಿಕಾರರ ಪ್ರಮುಖ ಬೇಡಿಕೆಗಳು: ಮಧ್ಯಾಹ್ನದ ಬಿಸಿಯೂಟ ಯೋಜನೆ ಪ್ರಾರಂಭಗೊಂಡು 24 ವರ್ಷಗಳು ಕಳೆದಿವೆ. 2014ರಿಂದ ಕೇಂದ್ರ ಸರಕಾರ ಯಾವುದೇ ಗೌರವಧನ ಹೆಚ್ಚಳ ಮಾಡಿಲ್ಲ. ಕೇಂದ್ರ ಸರಕಾರ ನಮ್ಮ ವೇತನವನ್ನು 26,000ರೂ.ಗಳಿಗೆ ಹೆಚ್ಚಿಸಬೇಕು.ಅದುವರೆಗೆ ಕೇರಳ, ಪಾಂಡಿಚೇರಿ, ತಮಿಳುನಾಡು, ಹರಿಯಾಣ ರಾಜ್ಯಗಳಲ್ಲಿರುವಂತೆ 7ರಿಂದ 12ಸಾವಿರ ರೂ.ವೇತನ ನೀಡಬೇಕು.

*ಈಗಾಗಲೇ ಹಣಕಾಸು ಇಲಾಖೆ ಒಪ್ಪಿಕೊಂಡಿರುವ ನಿವೃತ್ತಿಯಾದವರಿಗೆ ಇಡಿಗಂಟು ಕೂಡಲೇ ಜಾರಿಗೊಳ್ಳಬೇಕು. *ಜಂಟಿ ಖಾತೆ ಜವಾಬ್ದಾರಿಯನ್ನು ಮುಖ್ಯ ಅಡುಗೆ ನೌಕರರಿಂದ ಎಸ್‌ಡಿಎಂಸಿಗೆ ವರ್ಗಾವಣೆ ಮಾಡಿರುವ ಕ್ರಮವನ್ನು ಹಿಂಪಡೆಯಬೇಕು.

*ಉತ್ತರ ಪ್ರದೇಶ, ಪಂಜಾಬ್ ರಾಜ್ಯ ಹೈಕೋರ್ಟ್‌ಗಳು ನೀಡಿರುವ ತೀರ್ಪಿನಂತೆ ವರ್ಷದ 12ತಿಂಗಳು ಕೆಲಸ ಹಾಗೂ ಕನಿಷ್ಠ ಕೂಲಿ ನೀಡಬೇಕು. ಎಂಜಿಎಂ ಯೋಜನೆಗೆ ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸಬೇಕು. ಕ್ಲಸ್ಟರ್ ಸಭೆಗಳನ್ನು ಕಡ್ಡಾಯವಾಗಿ ಪ್ರತಿ ಜಿಲ್ಲೆಯಲ್ಲಿ ಮಾಡಬೇಕು.

*ಕೆಲಸದ ಅವಧಿಯನ್ನು 4ಗಂಟೆಯಿಂದ 6ಗಂಟೆಗೆ ಅಕ್ಷರ ದಾಸೋಹ ಕೈಪಿಡಿಯಲ್ಲಿ ಬದಲಾಯಿಸಬೇಕು. ಈ ಯೋಜನ ಸಂಪೂರ್ಣವಾಗಿ ಶಿಕ್ಷಣ ಇಲಾಖೆಯ ಅಡಿಯಲ್ಲೇ ಕಾರ್ಯನಿರ್ವಹಿಸಬೇಕು. ಕೆಲಸದ ಸ್ಥಳದಲ್ಲಿ ಮರಣ ಹೊಂದಿದೆ 25 ಲಕ್ಷ ರೂ.ಪರಿಹಾರ ನೀಡಬೇಕು. ಅಪಘಾತದಿಂದ ಮರಣ ಹೊಂದಿದ ಅಡುಗೆ ಸಿಬ್ಬಂದಿಗಳ ಕುಟುಂಬದವರಿಗೆ ಕೆಲಸ ನೀಡಬೇಕು.

*2023ರ ವಿಧಾನಸಭಾ ಚುನಾವಣೆಯ ಸಂದರ್ಭದಲ್ಲಿ ಘೋಷಣೆ ಮಾಡಿದ 6000ರೂ.ಗಳ ಗೌರವಧನ ಹೆಚ್ಚಿಸಬೇಕು. ಹಾಜರಾತಿ ಆಧಾರದಲ್ಲಿ ಕೆಲಸದಿಂದ ತೆಗೆಯುವ ಕ್ರಮ ನಿಲ್ಲಬೇಕು. ಬಿಸಿಯೂಟ ಯೋಜನೆಯನ್ನು ಖಾಯಂ ಗೊಳಿಸ ಬೇಕು. ಇದನ್ನು ಯಾವುದೇ ಖಾಸಗಿ ಸಂಸ್ಥೆಗಳಿಗೆ ಯಾವುದೇ ಸ್ವರೂಪದಲ್ಲಿ ಕೊಡಬಾರದು. ಬೇಸಗೆ ಹಾಗೂ ದಸರಾ ರಜೆಗಳ ವೇತನವನ್ನು ಕಡ್ಡಾಯವಾಗಿ ನೀಡಬೇಕು.

ಪ್ರತಿಭಟನೆಯಲ್ಲಿ ಅಕ್ಷರ ದಾಸೋಹ ನೌಕರರ ಸಂಘದ ಜಿಲ್ಲಾ ಕಾರ್ಯದರ್ಶಿ ಸುನಂದ, ಉಡುಪಿ ತಾಲೂಕು ಅಧ್ಯಕ್ಷರಾದ ರತ್ನ, ಕಾರ್ಯದರ್ಶಿ ಸುಲೋಚನ, ಕೋಶಾಧಿಕಾರಿ ಮಂಜುಳಾ, ಶಿಖಾಮಣಿ, ಕಲಾವತಿ, ಕುಸುಮ ಕಾಪು, ಸಿಐಟಿಯು ಉಡುಪಿ ಜಿಲ್ಲಾ ಉಪಾಧ್ಯಕ್ಷರಾದ ಬಾಲಕೃಷ್ಣ ಶೆಟ್ಟಿ, ಕಾರ್ಯದರ್ಶಿ ಸುರೇಶ್ ಕಲ್ಲಾಗಾರ, ಕೋಶಾಧಿಕಾರಿ ಶಶಿಧರ ಗೊಲ್ಲ, ಸಿಐಟಿಯು ಜಿಲ್ಲಾ ಸಮಿತಿ ಸದಸ್ಯರಾದ ಚಿಕ್ಕಮೊಗವೀರ ಸಿಐಟಿಯು ಉಡುಪಿ ವಲಯ ಸಂಚಾಲಕರಾದ ಕವಿರಾಜ್ ಎಸ್. ಕಾಂಚನ್, ಸಿಐಟಿಯು ಮುಖಂಡರಾದ ನಾಗೇಶ್ ಉಪಸ್ಥಿತರಿದ್ದರು.






 


 


Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News