ಹಂಚಿ ಬಾಳುವುದೇ ನಿಜವಾದ ಕ್ರಿಸ್ಮಸ್: ವಂ.ಡೆನಿಸ್ ಡೆಸಾ

Update: 2024-12-21 15:28 GMT

ಮಲ್ಪೆ: ಸಂತೋಷವನ್ನು ಪರಸ್ಪರ ಹಂಚಿ ಬಾಳುವುದೇ ಕ್ರಿಸ್ಮಸ್ ಹಬ್ಬದ ನಿಜವಾದ ಅರ್ಥವಾಗಿದೆ ಎಂದು ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಧರ್ಮಗುರು ವಂ. ಡೆನಿಸ್ ಡೆಸಾ ಹೇಳಿದ್ದಾರೆ.

ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಇದರ ಆಶ್ರಯದಲ್ಲಿ ಮಲ್ಪೆ ಸಿಎಸ್‌ಐ ಚರ್ಚಿನಲ್ಲಿ ಶುಕ್ರವಾರ ಆಯೋಜಿಸಿದ್ದ ಕ್ರಿಸ್ಮಸ್ ಸಂಭ್ರಮ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಕ್ರಿಸ್ಮಸ್ ಹಬ್ಬದ ಸಮಯದಲ್ಲಿ ಪರಸ್ಪರ ಶುಭಾಶಯಗಳನ್ನು, ಸಿಹಿತಿಂಡಿಗಳನ್ನು ಹಂಚಿಕೊಂಡರೆ ಸಾಲದು. ಪರಸ್ಪರ ಸಹಬಾಳ್ವೆಯ ಜೀವನವನ್ನು ಬಾಳುವುದರೊಂದಿಗೆ ಅದನ್ನು ಪ್ರತಿಯೊಬ್ಬರು ಜೀವನದಲ್ಲಿ ಅನುಕರಣೆ ಮಾಡಿದಾಗ ಮಾತ್ರ ಹಬ್ಬದ ಆಚರಣೆ ಸಾರ್ಥಕತೆ ಪಡೆಯುತ್ತದೆ ಎಂದರು.

ಯೇಸುಸ್ವಾಮಿ ನಮ್ಮ ನೆರೆಯವರ ಹೃದಯದಲ್ಲಿ ಜನಿಸಿದಾಗ ಹಬ್ಬಕ್ಕೆ ನಿಜವಾದ ಅರ್ಥ ನೀಡಿದಂತಾಗುತ್ತದೆ. ಪ್ರತಿ ಯೊಂದು ಧರ್ಮಗಳು ತನ್ನ ಅನುಯಾಯಿಗಳಿಗೆ ನೀಡುವ ಸಂದೇಶ ನಿನ್ನ ನೆರೆಯವರಿಗೆ ಒಳಿತನ್ನು ಮಾಡು ಎಂಬುದು. ಪ್ರತಿಯೊಂದು ಧರ್ಮವನ್ನು ಪ್ರೀತಿಸಿ, ಗೌರವಿಸಿ ಬಾಳುವ ಮನೋಸ್ಥಿತಿಯನ್ನು ಬೆಳೆಸಿಕೊಳ್ಳಬೇಕು. ಈ ಮೂಲಕ ಸೌಹಾರ್ದ ಸಮಾಜ ಕಟ್ಟಲು ಎಲ್ಲರೂ ಕೈಜೋಡಿಸಬೇಕು ಎಂದರು.

ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ಅಧ್ಯಕ್ಷರಾದ ರಮೇಶ್ ತಿಂಗಳಾಯ ಮಾತನಾಡಿ, ಎಲ್ಲಾ ಧರ್ಮಗಳ ಆಚರಣೆ ಯಲ್ಲಿ ಸಾಮ್ಯತೆಗಳಿದ್ದು ಪ್ರತಿಯೊಬ್ಬರು ತಮ್ಮ ಧರ್ಮದ ನಂಬಿಕೆಯ ಮೇಲೆ ಪ್ರಾರ್ಥಿಸುವಾಗ ಪ್ರತಿಯೊಬ್ಬರಿಗೂ ಒಳ್ಳೆಯ ದನ್ನೇ ಮಾಡು ಎಂದು ಪ್ರಾರ್ಥಿಸುತ್ತಾರೆ. ನಮ್ಮ ನೆರೆಯವರನ್ನು ಗೌರವಿಸಿ ನಡೆದಾಗ ಸೌಹಾರ್ದ ಸಮಾಜ ನಿರ್ಮಾಣ ಗೊಳ್ಳುವುದರಲ್ಲಿ ಸಂದೇಹವಿಲ್ಲ ಎಂದರು.

ಕಾರ್ಯಕ್ರಮದಲ್ಲಿ ಕಿಡ್ನಿ ಸಮಸ್ಯೆಯಿಂದ ಬಳಲುತ್ತಿರುವ ಮಲ್ಪೆ ನೆರ್ಗಿಯ ಕೃಷ್ಣಪ್ಪ ಹಾಗೂ ಯಶೋಧ ದಂಪತಿಯ ಪುತ್ರಿ ಶ್ರುತಿ ಅವರಿಗೆ ಸಮನ್ವಯ ಸರ್ವಧರ್ಮ ಸಮಿತಿ ತೊಟ್ಟಂ ವತಿಯಿಂದ 25,000ರೂ. ಧನಸಹಾಯವನ್ನು ಹಸ್ತಾಂತರಿ ಸುವ ಮೂಲಕ ಕ್ರಿಸ್ಮಸ್ ಆಚರಣೆ ಸಾರ್ಥಕಗೊಳಿಸಲಾಯಿತು.

ವೇದಿಕೆಯಲ್ಲಿ ಯುಬಿಎಂ ಚರ್ಚ್ ಮಲ್ಪೆ ಸಭಾಪಾಲಕರಾದ ಪಾಸ್ಟರ್ ಕುಮಾರ್ ಸಾಲಿನ್ಸ್, ಸಮಿತಿಯ ಪದಾಧಿಕಾರಿ ಗಳಾದ ವನಿತಾ ಫೆರ್ನಾಂಡಿಸ್, ಶಬೀರ್, ಸೀರಾಝ್, ತೊಟ್ಟಂ ಸಂತ ಅನ್ನಮ್ಮ ಚರ್ಚಿನ ಪಾಲನ ಮಂಡಳಿ ಉಪಾಧ್ಯಕ್ಷ ಸುನೀಲ್ ಫೆರ್ನಾಂಡಿಸ್ ಉಪಸ್ಥಿತರಿದ್ದರು.

ಸಿಎಸ್‌ಐ ಚರ್ಚ್ ಮಲ್ಪೆ ಸಭಾಪಾಲಕರಾದ ಪಾಸ್ಟರ್ ಎಡ್ವಿನ್ ಜೊಸೇಫ್ ಸ್ವಾಗತಿಸಿಗಾಡ್ವಿನ್ ವಂದಿಸಿದರು. ಗ್ಲೋರಿಯಾ ಕಾರ್ಯಕ್ರಮ ನಿರೂಪಿಸಿದರು. ಸಭಾ ಕಾರ್ಯಕ್ರಮದ ಬಳಿಕ ವಿವಿಧ ಸಿಎಸ್‌ಐ, ಯುಬಿಎಂ ಚರ್ಚ್ ಮಲ್ಪೆ, ತೊಟ್ಟಂ ಸಂತ ಅನ್ನಮ್ಮ ಚರ್ಚಿನ ವತಿಯಿಂದ ಕ್ರಿಸ್ಮಸ್ ಸಂಬಂಧಿತ ವಿವಿಧ ಮನೋರಂಜನಾ ಕಾರ್ಯಕ್ರಮಗಳು ಜರುಗಿದವು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News