ಉಡುಪಿ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಆರೋಪಿ ಬಂಧನ
ಉಡುಪಿ: 15 ವರ್ಷಗಳಿಂದ ತಲೆಮರೆಸಿಕೊಂಡಿದ್ದ ಎಲ್‌ಪಿಸಿ ವಾರಂಟ್ ಆರೋಪಿಯನ್ನು ಪೊಲೀಸರು ಬಂಧಿಸಿದ್ದಾರೆ.
2009ರ ನ.18ರಂದು ಬೆಳಗ್ಗೆ 6:30ಕ್ಕೆ ಉಡುಪಿ ಇಂದ್ರಾಳಿ ರೈಲ್ವೆ ನಿಲ್ದಾಣ ಬಳಿ ಅಕ್ರಮವಾಗಿ ಗೋವಾ ಮದ್ಯವನ್ನು ಮಾರಾಟ ಮಾಡಲು ಪ್ರಯತ್ನಿಸುತ್ತಿದ್ದ ಕೇರಳ ರಾಜ್ಯದ ತ್ರಿಶ್ಶೂರು ಜಿಲ್ಲೆಯ ಚಾಲಕುಡಿ ನಿವಾಸಿ ದಯಾನಂದ ಎಂಬಾತನನ್ನು ಅಂದಿನ ಉಡುಪಿ ಜಿಲ್ಲಾ ಅಬಕಾರಿ ಮತ್ತು ಲಾಟರಿ ನಿಷೇಧ ದಳದ ಇನ್‌ಸ್ಪೆಕ್ಟರ್ ಸಿ.ಇ.ತಿಮ್ಮಯ್ಯ ಮತ್ತು ಸಿಬ್ಬಂದಿ ಬಂಧಿಸಿ ಆತನಿಂದ 50,000 ರೂ. ಮೌಲ್ಯದ ಅಕ್ರಮ ಮದ್ಯದ ಬಾಟಲಿಗಳನ್ನು ವಶಪಡಿಸಿಕೊಂಡು ಪ್ರಕರಣ ದಾಖಲಿಸಿದ್ದರು.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು ಬಳಿಕ ಆರೋಪಿ ನ್ಯಾಯಾಲಯದಿಂದ ಜಾಮೀನು ಪಡೆದು ಮುಂದೆ ನ್ಯಾಯಾಲಯದ ವಿಚಾರಣಾ ಸಮಯದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೆ ತಲೆಮರೆಸಿ ಕೊಂಡಿದ್ದ. ಇದರಿಂದ ನ್ಯಾಯಾಲಯ ಆರೋಪಿ ವಿರುದ್ಧ ಎಲ್‌ಪಿಸಿ ವಾರಂಟ್ ಹೊರಡಿಸಿತ್ತು.
ಉಡುಪಿ ಸೆನ್ ಪೊಲೀಸ್ ಠಾಣಾ ನಿರೀಕ್ಷಕರಾದ ರಾಮಚಂದ್ರ ನಾಯಕ್ ಮತ್ತು ಪಿಎಸ್‌ಐ ಪವನ್ ಕುಮಾರ್, ಪಡುಬಿದ್ರಿ ಪೊಲೀಸ್ ಠಾಣೆಯ ಎಎಸ್‌ಐ ರಾಜೇಶ್ ಅವರನ್ನೊಳಗೊಂಡ ತಂಡ ಆರೋಪಿ ದಯಾನಂದ ನನ್ನು ಆತನ ಮನೆಯಾದ ಕೇರಳ ರಾಜ್ಯದ ತ್ರಿಶ್ಯೂರು ಜಿಲ್ಲೆಯ ಚಾಲಕುಡಿ ಎಂಬಲ್ಲಿ ವಶಕ್ಕೆಪಡೆದು ನ್ಯಾಯಾಲಯಕ್ಕೆ ಹಾಜುಪಡಿಸಿದರು. ನ್ಯಾಯಾಲಯ ಆತನಿಗೆ ಡಿ.30ರವರೆಗೆ ನ್ಯಾಯಾಂಗ ಬಂಧನ ವಿಧಿಸಿದೆ.