ಉಚ್ಛ ನ್ಯಾಯಾಲಯದ ತೀರ್ಪುಗಳ ಕನ್ನಡ ಭಾಷಾಂತರವೂ ಲಭ್ಯ: ನ್ಯಾ. ಸೂರಜ್ ಗೋವಿಂದರಾಜ್
ಉಡುಪಿ: ದೇಶದ ಸುಪ್ರೀಂಕೋರ್ಟಿನ 37,036, ವಿವಿಧ ಹೈಕೋರ್ಟ್‌ಗಳ 1.56 ಕೋಟಿ ಹಾಗೂ ಕರ್ನಾಟಕ ಹೈಕೋರ್ಟಿನ 7.59ಲಕ್ಷ ತೀರ್ಪುಗಳು ಆನ್‌ಲೈನ್ (ಇಎಸ್‌ಇಆರ್)ನಲ್ಲಿ ಉಚಿತವಾಗಿ ಲಭ್ಯವಿದ್ದು, ತೀರ್ಪುಗಳ ಕನ್ನಡ ಭಾಷಾಂತರವೂ ಪ್ರಗತಿಯಲ್ಲಿದೆ ಎಂದು ಕರ್ನಾಟಕ ಉಚ್ಛ ನ್ಯಾಯಾಲಯದನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಹೇಳಿದ್ದಾರೆ.
ಉಡುಪಿ ವಕೀಲರ ಸಂಘವು ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ಸಹಯೋಗದಲ್ಲಿ ಉಡುಪಿ ನ್ಯಾಯಾಲಯದ ಆವರಣದಲ್ಲಿ ಶನಿವಾರ ಆಯೋಜಿಸಿದ ಉಚಿತ ಆರೋಗ್ಯ ತಪಾಸಣೆ ಹಾಗೂ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಈಗಾಗಲೇ ರಾಜ್ಯ ಹೈಕೋರ್ಟ್ ಹಾಗೂ ಸುಪ್ರೀಂಕೋರ್ಟಿನ 3,000ಕ್ಕೂ ಅಧಿಕ ತೀರ್ಪುಗಳು ಕನ್ನಡಕ್ಕೆ ಭಾಷಾಂತರ ಗೊಂಡಿವೆ. ಮುಂದಿನ ಮೂರ್ನಾಲ್ಕು ವರ್ಷಗಳಲ್ಲಿ ನ್ಯಾಯಾಲಯದ ತೀರ್ಪುಗಳ ಕನ್ನಡ ಭಾಷಾಂತರ ಪೂರ್ಣ ವಾಗಲಿದೆ ಎಂದು ಸದಸ್ಯರಿಗೆ ಸಾಂಕೇತಿಕವಾಗಿ ವಿಶೇಷ ಆರೋಗ್ಯ ಕಾರ್ಡ್- ಉಡುಪಿ ಲಾಯರ್ಸ್ ಪ್ರಿವಿಲೆಜ್ ಕಾರ್ಡ್- ವಿತರಿಸಿದ ಅವರು ಹೇಳಿದರು.
ಇಂಡಿಯಾ ಕೋಡ್‌ನ ವಿವಿಧ ಸೆಕ್ಷನ್, ಕಾನೂನು ತಿದ್ದುಪಡಿ, ಸುತ್ತೋಲೆ ಗಳೂ ಶೀಘ್ರವೇ ಉಚಿತವಾಗಿ ಕನ್ನಡದಲ್ಲೂ ಸಿಗಲಿದೆ. ಆನ್‌ಲೈನ್‌ನಲ್ಲಿ ತೀರ್ಪುಗಳ ಲಭ್ಯತೆಯಿಂದ ವಕೀಲರು ತೀರ್ಪುಗಳ ಅಧ್ಯಯನಕ್ಕಾಗಿ ಮಾಡುವ ಖರ್ಚು ಉಳಿತಾಯವಾಗಲಿದೆ ಎಂದರು.
ರಕ್ತದಾನದಿಂದ ಅನ್ಯರ ಜೀವ ಉಳಿಸಬಹುದು. ಹೊಸ ರಕ್ತ ಉತ್ಪತ್ತಿಯಿಂದ ರಕ್ತದಾನಿಗಳಿಗೂ ಒಳಿತಾಗಲಿದೆ. ಮಧು ಮೇಹ, ರಕ್ತದೊತ್ತಡ ವಕೀಲರನ್ನು ಹೆಚ್ಚು ಕಾಡುತ್ತಿದ್ದು ಮಾನಸಿಕ, ದೈಹಿಕ ಆರೋಗ್ಯಕ್ಕೆ ಗಮನ ಕೊಡಿ ಎಂದು ನ್ಯಾ. ಸೂರಜ್ ಗೋವಿಂದರಾಜ್ ವಕೀಲರು ಮತ್ತು ನ್ಯಾಯಾಧೀಶರಿಗೆ ಕಿವಿ ಮಾತು ಹೇಳಿದರು.
ಮಾಹೆ ವಿವಿ ಸಹಕುಲಾಧಿಪತಿ ಡಾ. ಎಚ್. ಎಸ್. ಬಲ್ಲಾಳ್ ಮಾತನಾಡಿ, ಬದಲಾದ ಜೀವನ ಪದ್ಧತಿಯಿಂದಾಗಿ ಪ್ರಾಣಾಂತಿಕ ಕಾಯಿಲೆಗಳನ್ನು ತಡೆಯಲು ನಿತ್ಯ ವ್ಯಾಯಾಮ ಬಲು ಮುಖ್ಯ ಎಂದರು. ಮಣಿಪಾಲ ಕಸ್ತೂರ್ಬಾ ಆಸ್ಪತ್ರೆಯ ವೈದ್ಯಕೀಯ ಅಧೀಕ್ಷಕ ಡಾ. ಅವಿನಾಶ್ ಶೆಟ್ಟಿ ಮಾತನಾಡಿದರು.
ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ ಎಸ್.ಗಂಗಣ್ಣವರ್ ಅಧ್ಯಕ್ಷತೆ ವಹಿಸಿದ್ದರು. ಶಾಂಭವಿ ಪ್ರಾರ್ಥಿಸಿದರು. ಉಡುಪಿ ವಕೀಲರ ಸಂಘದ ಅಧ್ಯಕ್ಷ ರೆನೋಲ್ಡ್ ಪ್ರವೀಣ ಕುಮಾರ್ ಸ್ವಾಗತಿಸಿದರು. ನ್ಯಾಯವಾದಿ ಸಹನಾ ಕುಂದರ್ ಕಾರ್ಯಕ್ರಮ ನಿರೂಪಿಸಿ, ಸಂಘದ ಪ್ರಧಾನ ಕಾರ್ಯದರ್ಶಿ ರಾಜೇಶ್ ಎ.ಆರ್. ವಂದಿಸಿದರು.