ರಂಗಶಿಕ್ಷಣದಿಂದ ಮಕ್ಕಳ ಪ್ರತಿಭೆಯ ಅನಾವರಣ: ಶಾಸಕ ಯಶಪಾಲ್
ಉಡುಪಿ: ರಂಗಭೂಮಿ ಉಡುಪಿ ಪ್ರಸ್ತುತ ಉಡುಪಿ ಆಸುಪಾಸಿನ ಶಾಲಾ ಕಾಲೇಜುಗಳಲ್ಲಿ ಪ್ರಾರಂಭಿಸಿರುವ ‘ರಂಗ ಶಿಕ್ಷಣ’ ಅಭಿಯಾನದಿಂದ ಜಿಲ್ಲೆಯ ಮಕ್ಕಳ ಪ್ರತಿಭೆಯ ಅನಾವರಣಕ್ಕೆ ವೇದಿಕೆ ದೊರಕಿದಂತಾಗಿದೆ ಎಂದು ಉಡುಪಿ ಶಾಸಕ ಯಶಪಾಲ್ ಸುವರ್ಣ ಅಭಿಪ್ರಾಯ ಪಟ್ಟಿದ್ದಾರೆ.
ಶನಿವಾರ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದಲ್ಲಿ ರಂಗಭೂಮಿ ಉಡುಪಿ ನಗರದ ಶಾಲಾ ಕಾಲೇಜು ಗಳಲ್ಲಿ ಪ್ರಾರಂಭಿಸಿರುವ ‘ರಂಗ ಶಿಕ್ಷಣ’ ತರಬೇತಿ ಪಡೆದ ಮಕ್ಕಳಿಂದ ಆಯೋಜಿಸಿರುವ ‘ಮಕ್ಕಳ ನಾಟಕೋತ್ಸವ’ವನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಯಕ್ಷಗಾನ ಕಲಾರಂಗ ಜಿಲ್ಲೆಯಲ್ಲಿ ಈ ಹಿಂದೆ ಆರಂಭಿಸಿರುವ ‘ಯಕ್ಷ ಶಿಕ್ಷಣ’ದ ಮೂಲಕ ಶಾಲಾ ಮಕ್ಕಳು ಯಕ್ಷಗಾನ ತರಬೇತಿ ಪಡೆದು ಇಂದು ನಾಡಿಗೆ ಮಾದರಿಯಾಗಿದ್ದಾರೆ. ಈ ಮಾದರಿಯಲ್ಲೇ ರಂಗ ಶಿಕ್ಷಣ ಕೂಡಾ ಯಶಸ್ವಿಯಾಗುವು ದರಲ್ಲಿಸಂಶಯವಿಲ್ಲ ಎಂದವರು ಮೆಚ್ಚುಗೆ ವ್ಯಕ್ತಪಡಿಸಿದರು.
ಮಾಜಿ ಶಾಸಕ ಕೆ.ರಘುಪತಿ ಭಟ್ ಮಾತನಾಡಿ, ಯಕ್ಷಗಾನ ಕರಾವಳಿ ಜಿಲ್ಲೆಗಳಿಗೆ ಸೀಮಿತವಾಗಿದ್ದರೆ, ರಂಗಭೂಮಿಗೆ ಎಲ್ಲೆಯಿಲ್ಲ. ಈ ಅಭಿಯಾನ ವನ್ನು ರಾಜ್ಯದ ಎಲ್ಲಾ 224 ವಿಧಾನಸಭಾ ಕ್ಷೇತ್ರಗಳಲ್ಲೂ ಹಮ್ಮಿಕೊಳ್ಳ ಬಹುದು.ಆದರೆ ಆರ್ಥಿಕ ಬೆಂಬಲಕ್ಕಾಗಿ ನಾಡಿನ ಮುಜರಾಯಿ ದೇವಾಲಯ ಗಳು, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯಂತಹ ಸರಕಾರಿ ಇಲಾಖೆಗಳನ್ನು ಆಶ್ರಯಿಸಿದರೆ ಹೆಚ್ಚಿನ ಯಶಸ್ಸನ್ನು ಸಾಧಿಸಬಹುದು ಎಂದರು.
ರಂಗಭೂಮಿ ಉಡುಪಿ ಅಧ್ಯಕ್ಷ ಡಾ.ತಲ್ಲೂರು ಶಿವರಾಮ ಶೆಟ್ಟಿ ಅಧ್ಯಕ್ಷತೆ ವಹಿಸಿ ಮಾತನಾಡಿ, ಯಕ್ಷಗಾನ, ರಂಗಭೂಮಿ ನಾಟಕಗಳಿಂದ ಮಕ್ಕಳ ಸರ್ವಾಂಗೀಣ ಅಭಿವ್ಥದ್ಧಿಯಾಗುವುದರಲ್ಲಿ ಸಂಶಯವಿಲ್ಲ. ಶಾಲೆಗಳಲ್ಲಿ ಯಕ್ಷಗಾನವನ್ನು ಕಲಿಸುವ ಮೂಲಕ ಭವಿಷ್ಯದಲ್ಲಿ ಯಕ್ಷಗಾನಕ್ಕೆ ಪ್ರೇಕ್ಷಕರು ಹಾಗೂ ಕಲಾವಿದರ ಕೊರತೆಯಾಗುವುದನ್ನು ತಪ್ಪಿಸಿದೆ. ಇದೇ ಮಾದರಿ ಯಲ್ಲಿ ರಂಗಭೂಮಿ ಶಿಕ್ಷಣದಿಂದ ಉತ್ತಮ ನಟರು, ನಾಟಕಾಸಕ್ತರು ಹುಟ್ಟಿಕೊಳ್ಳುವುದರಲ್ಲಿ ಸಂಶಯವಿಲ್ಲ ಎಂದರು.
ಕಾರ್ಯಕ್ರಮದಲ್ಲಿ ತಮ್ಮ ಸಂಸ್ಥೆಯಲ್ಲಿ ರಂಗಶಿಕ್ಷಣ ಆರಂಭಿಸಿದ ಶಾಲಾ ಮುಖ್ಯಸ್ಥರನ್ನು ಗೌರವಿಸಲಾಯಿತು. ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಎಂಜಿಎಂ ಕಾಲೇಜಿನ ಪ್ರಾಂಶುಪಾಲ ಪ್ರೊ.ಲಕ್ಷ್ಮೀ ನಾರಾಯಣ ಕಾರಂತ, ಉದ್ಯಮಿ ರಂಜನ್ ಕಲ್ಕೂರ ಶುಭ ಹಾರೈಸಿದರು. ರಂಗಭೂಮಿ ಉಡುಪಿ ಉಪಾಧ್ಯಕ್ಷ ಎನ್. ರಾಜಗೋಪಾಲ್ ಬಲ್ಲಾಳ್ ಉಪಸ್ಥಿತರಿದ್ದರು.
ರಂಗಶಿಕ್ಷಣದ ಸಂಚಾಲಕ ಯು.ವಿದ್ಯಾವಂತ ಆಚಾರ್ಯ ಪ್ರಾಸ್ತಾವಿಕ ಮಾತುಗಳೊಂದಿಗೆ ಸ್ವಾಗತಿಸಿದರು. ಸಹ ಸಂಚಾಲಕ ರವಿರಾಜ್ ನಾಯಕ್ ಕಾರ್ಯಕ್ರಮ ನಿರೂಪಿಸಿದರೆ, ಪ್ರಧಾನ ಕಾರ್ಯದರ್ಶಿ ಪ್ರದೀಪ್‌ಚಂದ್ರ ಕುತ್ಪಾಡಿ ವಂದಿಸಿದರು.
ಇಂದು ನಾಟಕೋತ್ಸದ ಮೊದಲ ದಿನ ರಂಗ ಶಿಕ್ಷಣ ತರಬೇತಿ ಪಡೆದ 5 ಪ್ರೌಢಶಾಲೆಗಳ ಮಕ್ಕಳಿಂದ 5 ನಾಟಕಗಳು ಪ್ರಸ್ತುತಗೊಂಡವು. ಡಿ.28ರಂದು ಮತ್ತೆ 7 ಶಾಲೆಗಳಿಂದ ನಾಟಕಗಳು ಪ್ರದರ್ಶನಗೊಳ್ಳಲಿವೆ. ಒಟ್ಟು 12 ಶಾಲೆಗಳು ಈ ಬಾರಿಯ ರಂಗಶಿಕ್ಷಣದಲ್ಲಿ ಪಾಲ್ಗೊಂಡಿವೆ.