ಉಡುಪಿ: ಫೆ.16ರಿಂದ 23ರ ವರೆಗೆ ಪಿಯು, ಕಾಲೇಜು, ಪಾಲಿಟೆಕ್ನಿಕ್‌ಗಳ ಸುತ್ತಮುತ್ತ ನಿಷೇಧಾಜ್ಞೆ ಜಾರಿ
ಉಡುಪಿ, ಫೆ.15: ಪ್ರಸ್ತುತ ಜಿಲ್ಲೆಯಲ್ಲಿ ನಡೆಯುತ್ತಿರುವ ಕೇಸರಿ ಶಾಲು- ಹಿಜಾಬ್ ವಿವಾದದ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಉಡುಪಿ ಜಿಲ್ಲೆಯ ಎಲ್ಲಾ ಪದವಿ ಪೂರ್ವ ಕಾಲೇಜು, ಪದವಿ ಕಾಲೇಜು ಹಾಗೂ ಪಾಲಿಟೆಕ್ನಿಕ್‌ಗಳ ವ್ಯಾಪ್ತಿಯಲ್ಲಿ ಫೆ.16ರಿಂದ ಫೆ.23ರ ಸಂಜೆ 6:00ಗಂಟೆಯವರೆಗೆ ಕಲಂ 144ರ ಪ್ರತಿಬಂಧಕಾಜ್ಞೆಯನ್ನು ಜಾರಿಗೊಳಿಸಿ ಉಡುಪಿ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ. ಅವರು ಆದೇಶ ಹೊರಡಿಸಿದ್ದಾರೆ.
ಉಡುಪಿ ಜಿಲ್ಲೆಯ ಮೂರು ಪೊಲೀಸ್ ಉಪವಿಭಾಗಾಧಿರಿಗಳು ಮಾಡಿಕೊಂಡ ಮನವಿ ಮೇರೆಗೆ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವ ದೃಷ್ಟಿಯಿಂದ ಫೆ.16ರ ಬೆಳಗ್ಗೆ 6:00ರಿಂದ ಫೆ.23ರ ಸಂಜೆ 6:00ರವರೆಗೆ ಜಿಲ್ಲೆಯ ಎಲ್ಲಾ ಪದವಿ ಪೂರ್ವ, ಪಾಲಿಟೆಕ್ನಿಕ್ ಹಾಗೂ ಪದವಿ ಕಾಲೇಜುಗಳ ಸುತ್ತಮುತ್ತ 200ಮೀ. ವ್ಯಾಪ್ತಿ ಪ್ರದೇಶದಲ್ಲಿ ನಿಷೇಧಾಜ್ಞೆಯನ್ನು ವಿಧಿಸಿ ಆದೇಶ ಹೊರಡಿಸಿದ್ದಾರೆ.
ಈ ನಿಷೇಧಾಜ್ಞೆ ಜಾರಿಯಲ್ಲಿರುವ ಅವಧಿಯಲ್ಲಿ ಈ ಪ್ರದೇಶದಲ್ಲಿ ಕಾನೂನು ಭಂಗ ಮಾಡುವ ಉದ್ದೇಶದಿಂದ ಐದು ಅಥವಾ ಅದಕ್ಕಿಂತ ಹೆಚ್ಚು ಜನರು ಗುಂಪಾಗಿ ಸೇರುವುದನ್ನು ನಿರ್ಭಂಧಿಸಲಾಗಿದೆ. ಸಾರ್ವಜನಿಕ ನೈತಿಕತೆಗೆ ಬಾದಕ ಉಂಟುಮಾಡುವ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ.
ಈ ಅವಧಿಯಲ್ಲಿ ಅವಹೇಳನಕಾರಿಯಾದ ಯಾವುದೇ ಘೋಷಣೆಗಳು, ಭಾಷಣಗಳು, ಪ್ರಕಟಣೆಗಳು, ಅವಾಚ್ಯ ಶಬ್ದಗಳ ಬಳಕೆ, ಪ್ರಚೋದನಕಾರಿ ಭಾಷಣ ಇತ್ಯಾದಿ ಚಟುವಟಿಕೆಗಳನ್ನು ನಿಷೇಧಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಹೈಕೋರ್ಟ್ ಮಧ್ಯಂತರ ಆದೇಶ ಅನುಷ್ಠಾನದಲ್ಲಿನ ಗೊಂದಲ ನಿವಾರಿಸಿ: ಯು.ಟಿ.ಖಾದರ್