ಉಡುಪಿ ಸಿಕಾಸಾಗೆ ಅತ್ಯುತ್ತಮ ಶಾಖಾ ಪ್ರಶಸ್ತಿ
ಉಡುಪಿ, ಫೆ.17: ಭಾರತೀಯ ಲೆಕ್ಕ ಪರಿಶೋಧಕರ ಸಂಸ್ಥೆಯ ಉಡುಪಿ ಸಿಕಾಸಾಗೆ ದಕ್ಷಿಣ ಭಾರತದ ಪ್ರಾದೇಶಿಕ ಮಂಡಳಿಯ 2021ನೇ ಸಾಲಿನ ಸಣ್ಣ ಶಾಖೆಯ ವಿಭಾಗದಲ್ಲಿ ಅತ್ಯುತ್ತಮ ಶಾಖೆ ಪ್ರಶಸ್ತಿ ಲಭಿಸಿದೆ.
ಸಿಕಾಸಾ ಸಮಿತಿಯು ಭಾರತೀಯ ಲೆಕ್ಕಪರಿಶೋಧಕ ಸಂಸ್ಥೆಯ ಮಾನದಂಡ ದಂತೆ ಸಿಎ ವಿದ್ಯಾರ್ಥಿಗಳಿಗೆ ವೃತ್ತಿಪರ ವಿಕಸನಗೊಳಿಸುವ ಪೂರಕವಾದ ಚಟುವಟಿಕೆಗಳನ್ನು ಅತ್ಯುತ್ತಮವಾಗಿ ನಿರ್ವಹಿಸುತ್ತಿರುವ ಕಾರಣ ಶಾಖೆಗೆ ಪ್ರಶಸ್ತಿ ಲಭಿಸಿದೆ ಎಂದು ಉಡುಪಿಯ ಸಿಎ ವಿದ್ಯಾರ್ಥಿ ಸಂಘದ ಅಧ್ಯಕ್ಷ ಸಿಎ. ನರಸಿಂಹ ನಾಯಕ್ ಪತ್ರಿಕಾ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
201ರಿಂದ 500 ವಿದ್ಯಾರ್ಥಿಗಳ ಸಣ್ಣ ಶಾಖಾ ವಿಭಾಗದಲ್ಲಿ ಉಡುಪಿ ಪ್ರಥಮ ಸ್ಥಾನ ಪಡೆದಿದ್ದು, ಹುಬ್ಬಳ್ಳಿ ದ್ವಿತೀಯ ಸ್ಥಾನ ಪಡೆದಿದೆ. ಮೀಡಿಯಂ ವಿಭಾಗದಲ್ಲಿ (501ರಿಂದ 1000) ತ್ರಿಶೂರ್ ಮತ್ತು ಮಧುರೈ ಶಾಖೆ ಗಳು ಹಾಗೂ ದೊಡ್ಢ ಶಾಖಾ ವಿಭಾಗದಲ್ಲಿ (1001ರಿಂದ 2500) ವಿಜಯವಾಡ ಮತ್ತು ಬೆಂಗಳೂರು ಶಾಖೆಗಳು ಮೊದಲೆರಡು ಸ್ಥಾನ ಪಡೆದಿವೆ ಎಂದು ಪ್ರಕಟಣೆ ತಿಳಿಸಿದೆ.