​ಶಾಂತಿ ಕದಡುವ ಕೆಲಸ ಬಿಟ್ಟು ಮಹಿಳಾ ಆಸ್ಪತ್ರೆ ಸಿಬಂದಿಗಳ ವೇತನ ನೀಡುವತ್ತ ಗಮನ ನೀಡಿ: ಶಾಸಕರಿಗೆ ಯುವ ಕಾಂಗ್ರೆಸ್ ಕರೆ

Update: 2022-02-24 13:39 GMT

ಉಡುಪಿ, ಫೆ.24: ಕೂಸಮ್ಮ ಶಂಭು ಶೆಟ್ಟಿ ಸರಕಾರಿ ಮಹಿಳಾ ಮತ್ತು ಮಕ್ಕಳ ಆಸ್ಪತ್ರೆಯ ಪ್ರಸ್ತುತ ಸ್ಥಿತಿಗತಿ ಶಾಸಕ ರಘುಪತಿ ಭಟ್ ಅವರಿಗೆ ಆರೋಗ್ಯದ ವಿಚಾರದಲ್ಲಿ ಇರುವ ಕಾಳಜಿಯನ್ನು ತೋರಿಸುತ್ತದೆ. ಅವರ ನಿರ್ಲಕ್ಷ್ಯದ ಪರಿಣಾಮ ಇಂದು ಅಲ್ಲಿನ ಸಿಬಂದಿಗಳು ಕಷ್ಟ ಪಡುವಂತಾಗಿದೆ ಎಂದು ಉಡುಪಿ ಜಿಲ್ಲಾ ಯುವ ಕಾಂಗ್ರೆಸ್ ಕಾರ್ಯದರ್ಶಿ ಡಿಯೋನ್ ಡಿಸೋಜಾ ಆರೋಪಿಸಿದ್ದಾರೆ.

ಜಿಲ್ಲೆಯ ಮಹಿಳೆಯರಿಗೆ ಮತ್ತು ಮಕ್ಕಳಿಗೆ ಉಚಿತವಾಗಿ ಉತ್ತಮ ಆರೋಗ್ಯ ಸವಲತ್ತುಗಳು ಸಿಗಬೇಕು ಎಂಬ ಉದ್ದೇಶದಿಂದ ಮಾಜಿ ಸಚಿವರಾದ ಪ್ರಮೋದ್ ಮಧ್ವರಾಜ್ ಪ್ರಯತ್ನದಿಂದ ನಿರ್ಮಾಣಗೊಂಡ ಆಸ್ಪತ್ರೆ ಇಂದು ರಾಜಕೀಯ ಆಟಕ್ಕೆ ಬಲಿಯಾಗುತ್ತಿರುವುದು ವಿಪರ್ಯಾಸ. ಪ್ರಸ್ತುತ ಸರಕಾರ ಆರೋಗ್ಯ ಕಾರ್ಯಕರ್ತರನ್ನು ಯಾವ ರೀತಿ ನಡೆಸಿಕೊಳ್ಳುತ್ತದೆ ಎನ್ನುವುದಕ್ಕೆ ಇದು ಉತ್ತಮ ಉದಾಹರಣೆ ಎಂದವರು ಹೇಳಿಕೆಯಲ್ಲಿ ದೂರಿದ್ದಾರೆ.

ಉಡುಪಿಯ ಶಾಸಕರು ವಸ್ತ್ರ ಸಂಹಿತೆಯ ವಿಚಾರವನ್ನು ಎತ್ತಿಕೊಂಡು ಶಾಂತಿಯನ್ನು ಹಾಳು ಮಾಡುವ ವಿಚಾರದಲ್ಲಿ ಮಗ್ನರಾಗಿದ್ದಾರೆ ವಿನಹ ಆರೋಗ್ಯ ಕಾರ್ಯಕರ್ತರ ನೋವುಗಳನ್ನು ಸಂಪೂರ್ಣವಾಗಿ ಮರೆತಿದ್ದಾರೆ. ಕಳೆದ ನಾಲ್ಕು ದಿನಗಳಿಂದ ಆಸ್ಪತ್ರೆಯ ಎಲ್ಲಾ ಸಿಬಂದಿಗಳು ಪ್ರತಿಭಟನೆಯಲ್ಲಿ ನಿರತರಾಗಿದ್ದರೂ ಶಾಸಕರು ದಿವ್ಯ ಮೌನ ವಹಿಸಿರುವುದು ನಾಚಿಕೇಗೇಡಿನ ಸಂಗತಿ ಎಂದವರು ಹೇಳಿದ್ದಾರೆ.

15,000ಕ್ಕೂ ಅಧಿಕ ಹೆರಿಗೆಗಳನ್ನು ಯಶಸ್ವಿಯಾಗಿ ನಡೆಸಿ ಉತ್ತಮ ಬಡ ಜನರಿಗೆ ಉತ್ತಮ ಸೇವೆ ನೀಡಿರುವ ಆಸ್ಪತ್ರೆಯ ಸಿಬಂದಿಗಳ ವೇತನವನ್ನು ತಡೆ ಹಿಡಿದಿರುವುದು ನಿರ್ಲಕ್ಷ್ಯ ಮತ್ತು ಅಮಾನವೀಯ ವರ್ತನೆಯಾಗಿದ್ದು ಜಿಲ್ಲಾ ಯುವ ಕಾಂಗ್ರೆಸ್ ಸರಕಾರದ ಧೋರಣೆಯನ್ನು ಖಂಡಿಸುತ್ತದೆ. ಸರಕಾರ ಕೂಡಲೇ ಮಧ್ಯಪ್ರವೇಶಿಸಿ ಸಿಬಂದಿಗಳಿಗೆ ಬಾಕಿ ಇರುವ ವೇತನವನ್ನು ಪಾವತಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News