‘ಚಾತುರ್ವಣ್ಯವನ್ನು ತಿದ್ದುವುದಲ್ಲ ಅದನ್ನು ಸಂಪೂರ್ಣ ತೊಲಗಿಸಬೇಕು’
ಹಿರಿಯಡ್ಕ, ಡಿ.25: ನಮ್ಮ ಪ್ರಜಾಸತ್ತೆಯ ಬದುಕಿಗೆ ದಾರಿದೀಪವಾದ ಸಂವಿಧಾನವನ್ನು ರಚಿಸಿಕೊಟ್ಟ ಬಾಬಾಸಾಹೇಬ್ ಅಂಬೇಡ್ಕರರು ಈ ನೆಲದ ರೋಗಗಳ ಮೂಲವಾದ ಜಾತಿಯ ವಿನಾಶದಲ್ಲೇ ಈ ದೇಶದ ಏಳಿಗೆ ಇದೆ ಎಂದರೆ,ಕನ್ನಡದ ನಿಜದನಿಯಾದ ಕುವೆಂಪು ಕೂಡಾ ‘ಚಾತುರ್ವಣ್ಯವನ್ನು ತಿದ್ದುವುದಲ್ಲ, ಅದನ್ನು ಸಂಪೂರ್ಣವಾಗಿ ತೊಲಗಿಸಬೇಕು’ ಎಂದೇ ಪ್ರತಿಪಾದಿಸಿದ್ದರು ಎಂದು ಖ್ಯಾತ ವಿಮರ್ಶಕ, ಸಾಹಿತಿ ಪ್ರೊ.ಮುರಳೀಧರ ಉಪಾಧ್ಯಾಯ ಹಿರಿಯಡಕ ಹೇಳಿದ್ದಾರೆ.
ಕುವೆಂಪು ಭಾವಚಿತ್ರಕ್ಕೆ ಪುಷ್ಪಾರ್ಚನೆಯ ಮಾಡುವ ಮೂಲಕ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಿರಿಯಡಕ ಸರಕಾರಿ ಪದವಿಪೂರ್ವ ಕಾಲೇಜಿನಲ್ಲಿ ಆಯೋಜಿಸಿದ್ದ ‘ಚಕೋರ- ಸಾಹಿತ್ಯ ವಿಚಾರ ವೇದಿಕೆ ಉಡುಪಿ’ ಇದನ್ನು ಉದ್ಘಾಟಿಸಿ ಅವರು ಮಾತನಾಡುತಿದ್ದರು.
ಇದೇ ಸಂದರ್ಭದಲ್ಲಿ ‘ಕುವೆಂಪು ಕೃತಿಗಳಲ್ಲಿ ಸಮಾನತೆಯ ಆಶಯ’ ಎಂಬ ವಿಷಯದ ಮೇಲೆ ವಿಶೇಷ ಉಪನ್ಯಾಸ ನೀಡಿದ ಕುಂದಾಪುರದ ಪ್ರಾಧ್ಯಾಪಕಿ ಡಾ. ರೇಖಾ ಬನ್ನಾಡಿ ‘ಜಲಗಾರ’ ನಾಟಕ ಪಠ್ಯವನ್ನು ವಿಶ್ಲೇಷಿಸುತ್ತಾ, ಕುವೆಂಪು ‘ಮನುಷ್ಯ ಜಾತಿ ತಾನೊಂದೆ ವಲಂ’ ಎಂದ ಪಂಪನಿಂದ ತೊಡಗಿ, ಕಾಯಕ ಸಮಾನತೆಯ ಮೂಲಕವೇ ಮನುಷ್ಯ ಸಮಾನತೆಯನ್ನು ಸಾರಿದ ಶರಣರು, ತತ್ವ ಪದಕಾರರುಗಳ ನಿಜ ವಾರಸುದಾರರು ಮಾತ್ರವಲ್ಲ ನೆಲದ ಸಮುದಾಯ ಗಳೆಲ್ಲವನ್ನೂ ತಾಯ್ತನದ ಕರುಳಿಂದಲೇ ಪ್ರೀತಿಸಿದ ಗಾಂಧೀ ಮತ್ತು ಅಂಬೇಡ್ಕರ್ ಬಯಸಿದ ಅರ್ಥಪೂರ್ಣ ಪ್ರಜಾಸತ್ತೆಯ ಕನಸನ್ನು ಕಂಡ ಮನುಷ್ಯಲೋಕದ ಮಹತ್ವದ ಆಸ್ತಿಯೂ ಹೌದೆಂದರು.
ಪ್ರಾಸ್ತಾವಿಕ ಮಾತುಗಳನ್ನಾಡಿದ ಹಿರಿಯಡಕ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಹಾಗೂ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಸದಸ್ಯ ಪ್ರೊ. ಜಯಪ್ರಕಾಶ್ ಶೆಟ್ಟಿ, ಅಕಾಡೆಮಿಯ ಕನಸಿನ ಕೂಸಾದ ‘ಚಕೋರ’ದ ಕಾರ‌್ಯಚಟು ವಟಿಕೆಗಳ ಸ್ವರೂಪ ಮತ್ತು ಆಶಯಗಳನ್ನು ಪರಿಚಯಿಸಿ ಇದು ಕುವೆಂಪು ಹುಟ್ಟಿದ ತಿಂಗಳಾದ್ದರಿಂದ ಅವರ ನುಡಿನಮನ ದೊಂದಿಗೇ ಆರಂಭಗೊಳ್ಳುತ್ತಿದೆ ಎಂದರು.
ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಮಂಜುನಾಥ ಭಟ್ ಅಧ್ಯಕ್ಷತೆ ವಹಿಸಿದ್ದ ಕಾರ‌್ಯಕ್ರಮದಲ್ಲಿ ಉಪಪ್ರಾಂಶುಪಾಲ ಪ್ರಕಾಶ್ ಪ್ರಭು, ವಿದ್ಯಾರ್ಥಿ ನಾಯಕ ಪ್ರಶಾಂತ ಉಪಸ್ಥಿತರಿದ್ದರು. ರಾಜ್ಯಶಾಸ್ತ್ರ ಉಪನ್ಯಾಸಕ ದೇವದಾಸ ಪ್ರಭು ವಂದಿಸಿ, ಉಡುಪಿ ಜಿಲ್ಲೆಯ ಚಕೋರ ಬಳಗದ ಸಂಚಾಲಕಿ ಶಾಲಿನಿ ಯು.ಬಿ. ಕಾರ್ಯಕ್ರಮ ನಿರೂಪಿಸಿದರು.