ಜಮ್ಮು ಕಾಶ್ಮೀರದಲ್ಲಿ ಕಂದಕಕ್ಕೆ ಉರುಳಿದ ಸೇನಾ ಟ್ರಕ್: ಕುಂದಾಪುರ ಬೀಜಾಡಿ ಮೂಲದ ಯೋಧ ಅನೂಪ್ ಪೂಜಾರಿ ಹುತಾತ್ಮ
ಕುಂದಾಪುರ: ಜಮ್ಮು ಮತ್ತು ಕಾಶ್ಮೀರದ ಪೂಂಚ್ ಜಿಲ್ಲೆಯ ಗಡಿ ನಿಯಂತ್ರಣ ರೇಖೆಯ ಬಳಿ ಯೋಧರು ಪ್ರಯಾಣಿಸುತ್ತಿದ್ದ ವಾಹನ ಕಣಿವೆಗೆ ಉರುಳಿ ಸಂಭವಿಸಿದ ಭೀಕರ ಅಪಘಾತದಲ್ಲಿ ಕುಂದಾಪುರ ತಾಲೂಕಿನ ಕೋಟೇಶ್ವರ ಸಮೀಪದ ಬೀಜಾಡಿಯ ಯೋಧ ಅನೂಪ್ ಪೂಜಾರಿ(33) ಹುತಾತ್ಮರಾಗಿದ್ದಾರೆ.
ಬೀಜಾಡಿ ಕೊಳದ ರಸ್ತೆ ನಿವಾಸಿ ಚಂದು ಪೂಜಾರಿ ಹಾಗೂ ನಾರಾಯಣ ಪೂಜಾರಿ ದಂಪತಿ ಪುತ್ರ ಅನೂಪ್ ಪೂಜಾರಿ 13 ವರ್ಷಗಳ ಹಿಂದೆ ಸೇನೆಗೆ ಸೇರಿದ್ದು, ಪ್ರಸ್ತುತ ಅವರು ಮರಾಠ ಲೈಟ್ ಇನ್ಫೆಂಟ್ರಿ ಬಟಾಲಿಯನ್‌ನಲ್ಲಿ ಸೇವೆ ಸಲ್ಲಿಸುತ್ತಿದ್ದರು.
ಮುಗಿಲುಮುಟ್ಟಿದ ಆಕ್ರಂದನ: ಯೋಧ ಅನೂಪ್ ಪೂಜಾರಿ ಅಪಘಾತ ದಲ್ಲಿ ಹುತಾತ್ಮರಾದ ಸುದ್ದಿಯನ್ನು ಅವರೊಂದಿಗೆ ಸೇವೆಯಲ್ಲಿ ಜೊತೆಗಿದ್ದು ಸದ್ಯ ರಜೆಯಲ್ಲಿ ತನ್ನ ಊರಾದ ಹಲಿಯಾಳದಲ್ಲಿದ್ದ ಯೋಧ ಆಂಜನೇಯ ಪಾಟೀಲ್ ತಿಳಿಸಿದರು.
ಆಂಜನೇಯ ಪಾಟೀಲ್ ತನ್ನ ಸಹೋದರನೊಂದಿಗೆ ತಡರಾತ್ರಿ ಹೊರಟು ಬಂದು ಬೆಳಿಗ್ಗೆ ಮೃತ ಯೋಧನ ಮನೆಗೆ ಮರಣದ ಕುರಿತು ಮಾಹಿತಿ ನೀಡಿದರು. ವಿಚಾರ ತಿಳಿಯುತ್ತಿದ್ದಂತೆಯೇ ಮನೆಯಲ್ಲಿ ಕುಟುಂಬಿಕರ ಆಕ್ರಂಧನ ಮುಗಿಲು ಮುಟ್ಟಿತ್ತು. ಮಗನನ್ನು ಕಳೆದುಕೊಂಡ ಅನಾರೋಗ್ಯ ಪೀಡಿತ ತಾಯಿ ಹಾಗೂ ಸೋದರಿಯ ರೋಧನ ಮನಕಲ ಕುವಂತಿತ್ತು.
‘ಇನ್ನೇನು ಮೂರು ತಿಂಗಳಿನಲ್ಲಿ ಗುಜರಾತ್ ಭಾಗದಲ್ಲಿ ಸೇವೆಗೆ ಬರುತ್ತೇನೆ ಎಂದಿದ್ದ. ಅಕ್ಕಂದಿರ ಮದುವೆ ಮಾಡಿಸಿದ್ದ ನನ್ನ ತಮ್ಮ ದೇಶಕ್ಕಾಗಿ ಮಡಿದ ಎಂದು ಸಹೋದರಿ ವೀಣಾ ಕಣ್ಣೀರಿಟ್ಟರು.
ಸೇನೆ ಸೇರುವ ಕನಸು: ಬಡ ಕುಟುಂಬದ ಅನೂಪ್ ಕೋಟದ ವಿವೇಕ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುವಾಗಲೇ ಎನ್‌ಸಿಸಿ ಸೇರಿದ್ದರು. ಬಹಳ ಚುರುಕಿನ ವ್ಯಕ್ತಿತ್ವದ ಇವರು, 26/11ರ ಮುಂಬೈ ಭಯೋತ್ಪಾಕರ ದಾಳಿ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತಾನೂ ಸೇನೆ ಸೇರಿ ದೇಶ ಸೇವೆ ಮಾಡುವ ಕನಸು ಹೊತ್ತಿದ್ದರು.
ದ್ವಿತೀಯ ಪಿಯುಸಿ ಮುಗಿಯುತ್ತಿರುವಾಗಾಲೇ ನೇರ ಸಂದರ್ಶನದಲ್ಲಿ ಸೈನ್ಯಕ್ಕೆ ಆಯ್ಕೆಯಾಗಿದ್ದರು. ಶಾಲಾ ಜೀವನದಲ್ಲಿ ಕಲಿಕೆಯಲ್ಲೂ ಮುಂದಿದ್ದ ಇವರು, ಉತ್ತಮ ಹಾಡುಗಾರರಾಗಿದ್ದರು. ಕೊಳದ ರಸ್ತೆಯಲ್ಲಿ ಇವರ ಕೂಡು ಕುಟುಂಬ ವಾಸವಿದೆ.
ಶಾಲೆಯಲ್ಲಿ ಅಂತಿಮ ದರ್ಶನ: ಡಿ.26ರ ನಸುಕಿನ ವೇಳೆ ಒಂದು ಗಂಟೆ ಸುಮಾರಿಗೆ ಅನೂಪ್ ಪೂಜಾರಿ ಪಾರ್ಥೀವ ಶರೀರ ಮಂಗಳೂರು ವಿಮಾನ ನಿಲ್ದಾಣದ ಮೂಲಕ ತೆಕ್ಕಟ್ಟೆಗೆ ಆಗಮಿಸಲಿದ್ದು, ತೆಕ್ಕಟ್ಟೆಯಿಂದ ತೆರೆದ ವಾಹನದಲ್ಲಿ ಕೋಟೇಶ್ವರ, ಬೀಜಾಡಿ ಫಿಶರೀಸ್ ರಸ್ತೆಯ ಮೂಲಕವಾಗಿ ಮೆರವಣಿಗೆ ನಡೆಸಿ ಹುಟ್ಟೂರಾದ ಬೀಜಾಡಿಗೆ ಕರೆತಲಾಗುತ್ತದೆ.
ಮನೆಯಲ್ಲಿ ವಿಧಿಗಳನ್ನು ಪೂರೈಸಿದ ಬಳಿಕ ಅನೂಪ್ ಓದಿದ ಮನೆಯಿಂದ ಅನತಿ ದೂರದಲ್ಲಿರುವ ಬೀಜಾಡಿ ಪಡುಶಾಲೆ ಯಲ್ಲಿ ಅಂತಿಮ ದರ್ಶನಕ್ಕೆ ಮಧ್ಯಾಹ್ನದವರೆಗೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಬಳಿಕ ಇವರು ಆಡಿ ಬೆಳೆದ ಬೀಜಾಡಿ ಸಮುದ್ರ ಕಿನಾರೆ ಬಳಿಯ ಸಕಲ ಗೌರವಗಳೊಂದಿಗೆ ಅಂತ್ಯಕ್ರಿಯೆ ನಡೆಸಲು ಸಿದ್ಧತೆ ಮಾಡಿಕೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ.
ಶಾಸಕ ಕೊಡ್ಗಿ, ಎಸಿ ಭೇಟಿ: ಹುತಾತ್ಮ ಅನೂಪ್ ಪೂಜಾರಿ ಮನೆಗೆ ಬುಧವಾರ ಕುಂದಾಪುರ ಶಾಸಕ ಕಿರಣ್ ಕುಮಾರ್ ಕೊಡ್ಗಿ ಹಾಗೂ ಕುಂದಾಪುರ ಸಹಾಯಕ ಆಯುಕ್ತ ಮಹೇಶ್ಚಂದ್ರ ಮತ್ತು ತಹಶೀಲ್ದಾರ್ ಶೋಭಾಲಕ್ಷ್ಮೀ ಇವರ ನೇತೃತ್ವದ ತಂಡ ಭೇಟಿ ನೀಡಿ ಕುಟುಂಬಿಕರಿಗೆ ಸಾಂತ್ವಾನ ಹೇಳಿದರು.
ಕುಂದಾಪುರ ಠಾಣಾಧಿಕಾರಿ ನಂಜನಾಯ್ಕ್, ಸಂಚಾರಿ ಠಾಣಾಧಿಕಾರಿ ಪ್ರಸಾದ್, ಸಾಮಾಜಿಕ ಕಾರ್ಯಕರ್ತ ಅಶೋಕ್ ಪೂಜಾರಿ ಬೀಜಾಡಿ, ಬೀಜಾಡಿ ಗ್ರಾಪಂ ಅಧ್ಯಕ್ಷ ಪ್ರಕಾಶ್ ಪೂಜಾರಿ, ಮಾಜಿ ಅಧ್ಯಕ್ಷೆ ಸುಮತಿ ನಾಗರಾಜ್, ಸದಸ್ಯರಾದ ಶೇಖರ ಚಾತ್ರಬೆಟ್ಟು, ವಾದಿರಾಜ್ ಹೆಬ್ಬಾರ್, ಅನಿಲ್ ಚಾತ್ರಬೆಟ್ಟು, ವಿಶ್ವನಾಥ ಮೊಗವೀರ, ಪಿಡಿಒ ಗಣೇಶ್, ಗ್ರಾಮಾ ಆಡಳಿತಾಧಿಕಾರಿ ಬಸವ ಮೊಗವೀರ, ಊರಿನ ಹಿರಿಯರಾದ ಹೆರಿಯಣ್ಣ ಚಾತ್ರಬೆಟ್ಟು, ಬಾಬಣ್ಣ ಪೂಜಾರಿ, ಬೀಜಾಡಿ ಮೀನುಗಾರ ಸಹಕಾರಿ ಸಂಘದ ಕಾರ್ಯನಿರ್ವಹಣಾಧಿಕಾರಿ ರಮೇಶ್ ಕಾಂಚನ್, ಬಿಲ್ಲವ ಸಮಾಜದ ಮುಖಂಡರಾದ ರಾಜೇಶ್ ಕಡ್ಗಿಮನೆ, ಸಂದೇಶ ಪೂಜಾರಿ, ಸ್ಥಳೀಯ ವಿವಿಧ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಸ್ಥಳದಲ್ಲಿ ಮೊಕ್ಕಾಂ ಹೂಡಿದ್ದರು.
3 ದಿನಗಳ ಹಿಂದೆ ಊರಿನಿಂದ ತೆರಳಿದ್ದರು!
ಅನೂಪ್ ಅವರಿಗೆ 3 ವರ್ಷಗಳ ಹಿಂದೆ ವಿವಾಹವಾಗಿದ್ದು 2 ವರ್ಷದ ಹೆಣ್ಣು ಮಗುವಿದೆ. ಜನವರಿಯಲ್ಲಿ ಸಿಗಬೇಕಿದ್ದ ರಜೆ ಮೊದಲೇ ಸಿಕ್ಕಿದ್ದರಿಂದ ಡಿಸೆಂಬರ್ ಮೊದಲ ವಾರದಲ್ಲಿ ಇವರು ಊರಿಗೆ ಬಂದಿದ್ದರು.
ಹಿಂದಿನ ತಿಂಗಳು ನಡೆದಿದ್ದ ಮಗಳ ಹುಟ್ಟುಹಬ್ಬವನ್ನು ಕುಟುಂಬಿಕರು, ಮಗಳೊಂದಿಗೆ ಇವರು ಆಚರಿಸಿದ್ದರು. ಅಲ್ಲದೆ ಕರಾವಳಿಯ ಪ್ರಮುಖ ಜಾತ್ರೆಯಾದ ಡಿ.15ರಂದು ಕೋಟೇಶ್ವರದಲ್ಲಿ ನಡೆದ ಕೊಡಿ ಹಬ್ಬದಲ್ಲಿ ಪಾಲ್ಗೊಂಡಿದ್ದರು. ಡಿ.21ರಂದು ಮರಳಿ ಕರ್ತವ್ಯಕ್ಕೆ ತೆರಳಿದ್ದರು.
ಸೇವೆಗೆ ವಾಪಾಸ್ಸಾದ ಮೂರೇ ದಿನದಲ್ಲಿ ಈ ದುರ್ಘಟನೆ ಸಂಭವಿಸಿದೆ. ಹುತಾತ್ಮ ಯೋಧ ತಾಯಿ, ಇಬ್ಬರು ಹಿರಿಯ ಸಹೋದರಿಯರು, ಪತ್ನಿ, ಪುತ್ರಿ ಹಾಗೂ ಅಪಾರ ಬಂಧು-ಮಿತ್ರರನ್ನು ಅಗಲಿದ್ದಾರೆ.
ಇಂದು ತಡರಾತ್ರಿ ಮಂಗಳೂರಿಗೆ ತಲುಪುವ ನಿರೀಕ್ಷೆ
ಭಾರತೀಯ ಸೇನೆಯ ಮರಾಠ ಲೈಟ್ ಇನ್ಫೆಂಟ್ರಿ ಬೆಟಾಲಿಯನ್‌ನ ಯೋಧ ಕುಂದಾಪುರದ ಅನುಪ್ ಪೂಜಾರಿ ಅವರ ಪಾರ್ಥಿವ ಶರೀರ ಡಿ. 26ರಂದು ಬೆಳಗಿನ ಜಾವ 1 ಗಂಟೆಗೆ ಐಎಎಫ್ ಎಎನ್-23 ವಿಮಾನದಲ್ಲಿ ಬೆಳಗಾವಿಯಿಂದ ಮಂಗಳೂರು ಅಂತರ್‌ರಾಷ್ಟ್ರೀಯ ವಿಮಾನ ನಿಲ್ದಾಣವನ್ನು ತಲುಪುವ ನಿರೀಕ್ಷೆ ಇದೆ.
ಡಿ.24 ರಂದು ಜಮ್ಮು ಮತ್ತು ಕಾಶ್ಮೀರದ ಪೊಂಛ್ ಜಿಲ್ಲೆಯ ಗಡಿ ನಿಯಂತ್ರಣಾ ರೇಖೆ ಬಳಿ ಕಂದಕಕ್ಕೆ ಸೇನಾ ವಾಹನ ಪಲ್ಟಿಯಾಗಿದ್ದು, ಅಪಘಾತದಲ್ಲಿ ಕರ್ನಾಟಕದ ಯೋಧರಾದ ಬೆಳಗಾವಿಯ ಸಾಂಬ್ರಾ ಗ್ರಾಮದ ಸುಬೇದಾರ್ ದಯಾನಂದ, ಕುಂದಾಪುರದ ಬಿಜಾಡಿಯ ಅನೂಪ್, ಮಹಾಲಿಂಗಪುರದ ಮಹೇಶ್ ಮರಿಗೊಂಡ ಹುತಾತ್ಮರಾಗಿದ್ದರು.