ಉಡುಪಿ ಜಿಲ್ಲೆಯಾದ್ಯಂತ ಸಂಭ್ರಮದ ಕ್ರಿಸ್ಮಸ್ ಆಚರಣೆ

Update: 2024-12-25 13:47 GMT

ಉಡುಪಿ: ಜಿಲ್ಲೆಯಾದ್ಯಂತ ವಿವಿಧೆಡೆ ಕ್ರೈಸ್ತ ಬಾಂಧವರು ಸಡಗರ ಸಂಭ್ರಮದಿಂದ ಕ್ರಿಸ್ಮಸ್ ಹಬ್ಬವನ್ನು ಬುಧವಾರ ಆಚರಿಸಿ ದರು. ಕ್ರೈಸ್ತರು ಹೆಚ್ಚಿನ ಸಂಖ್ಯೆಯಲ್ಲಿ ಮಂಗಳವಾರ ರಾತ್ರಿ ಹಬ್ಬದ ವಿಶೇಷ ಬಲಿಪೂಜೆ ಹಾಗೂ ಸಾಮೂಹಿಕ ಪ್ರಾರ್ಥನೆ ಯನ್ನು ಸಲ್ಲಿಸಿದರು.

ಉಡುಪಿ ಧರ್ಮಾಧ್ಯಕ್ಷರಾದ ಅತಿ ವಂ. ಡಾ. ಜೆರಾಲ್ಡ್ ಐಸಾಕ್ ಲೋಬೊ ಮಂಗಳವಾರ ರಾತ್ರಿ ಕಲ್ಯಾಣಪುರ ಮಿಲಾಗ್ರಿಸ್ ಕ್ಯಾಥೆಡ್ರಲ್‌ನಲ್ಲಿ ಹಬ್ಬದ ವಿಶೇಷ ಬಲಿಪೂಜೆಯನ್ನು ಅರ್ಪಿಸಿದರೆ ಬುಧವಾರ ನಗರದ ಬಿಷಪ್ ಹೌಸ್‌ನಲ್ಲಿ ಪ್ರಾರ್ಥನೆಯನ್ನು ಸಲ್ಲಿಸಿದರು.

ಉಡುಪಿ ಶೋಕಮಾತಾ ಚರ್ಚಿನಲ್ಲಿ ಧರ್ಮಗುರು ವಂ. ಚಾರ್ಲ್ಸ್ ಮಿನೇಜಸ್ ಹಾಗೂ ವಂ. ವಿಜಯ್ ಡಿಸೋಜಾ ನೇತೃತ್ವ ದಲ್ಲಿ ಕ್ರಿಸ್ಮಸ್ ಹಬ್ಬದ ಬಲಿಪೂಜೆ ನಡೆಯಿತು. ಈ ವೇಳೆ ಚರ್ಚಿನ ಸಹಾಯಕ ಧರ್ಮಗುರು ವಂ.ಲಿಯೋ, ನಿವೃತ್ತ ಧರ್ಮಗುರು ವಂ. ವಿಲಿಯಂ ಮಾರ್ಟಿಸ್ ಉಪಸ್ಥಿತರಿದ್ದರು.

ಗೋದಲಿಯಲ್ಲಿ ಬಾಲ ಯೇಸು ಮೂರ್ತಿಯನ್ನು ಇಟ್ಟು ದೇವರ ಸ್ತುತಿ, ಜೋಗುಳದ ಮೂಲಕ ಭಕ್ತರು ಯೇಸು ಸ್ವಾಮಿಯ ಆರಾಧನೆಯನ್ನು ಮಾಡಿದರು. ಜಿಲ್ಲೆಯ ಎಲ್ಲಾ ಚರ್ಚ್‌ಗಳು ಹಾಗೂ ಹೆಚ್ಚಿನ ಕ್ರೈಸ್ತರ ಮನೆಗಳಲ್ಲಿ ವೈವಿಧ್ಯಮಯ, ಆಕರ್ಷಕ ಗೋದಲಿಗಲು ಕಂಡುಬಂದವು.

ಹಬ್ಬದ ಹಿನ್ನಲೆಯಲ್ಲಿ ಎಲ್ಲಾ ಚರ್ಚುಗಳಲ್ಲಿ ಭಕ್ತರು ತುಂಬಿ ಹೋಗಿದ್ದು ಹಲವು ಕಡೆಗಳಲ್ಲಿ ಭಕ್ತರ ಅನೂಕೂಲತೆಗಾಗಿ ತೆರೆದ ಮೈದಾನದಲ್ಲಿ ಬೃಹತ್ ವೇದಿಕೆಯಲ್ಲಿ ಬಲಿಪೂಜೆಗೆ ವ್ಯವಸ್ಥೆ ಮಾಡಲಾಗಿತ್ತು. ನಗರದ ಸಿಎಸ್‌ಐ ಚರ್ಚು, ಯುಬಿಎಂ ಚರ್ಚುಗಳಲ್ಲಿ ಸಹ ಕ್ರಿಸ್ಮಸ್ ಪ್ರಯುಕ್ತ ವಿಶೇಷ ಧಾರ್ಮಿಕ ಕಾರ್ಯಕ್ರಮಗಳು ಜರುಗಿದವು.

ಮಾಜಿ ಸಚಿವ ವಿನಯ್ ಕುಮಾರ್ ಸೊರಕೆ ಕಾಪು ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ಎಲ್ಲಾ ರೋಮನ್ ಕಥೊಲಿಕ್ ಹಾಗೂ ಸಿಎಸ್‌ಐ, ಪ್ರೊಟೆಸ್ಟೆಂಟ್ ಚರ್ಚುಗಳಿಗೆ ತೆರಳಿ ಹಬ್ಬದ ಶುಭಾಶಯವನ್ನು ಕೋರಿದರು.

ಕ್ರಿಸ್ಮಸ್ ಹಿನ್ನಲೆಯಲ್ಲಿ ಕ್ರೈಸ್ತರ ಮನೆಯಲ್ಲಿ ಹಬ್ಬದ ವಾತಾವರಣ ಮನೆ ಮಾಡಿತ್ತು. ಮಾಂಸಾಹಾರ ಭಕ್ಷ್ಯಗಳೊಂದಿಗೆ ಕೇಕು, ವಿವಿಧ ಖಾದ್ಯ ಹಾಗೂ ಸಿಹಿತಿನಿಸುಗಳನ್ನು ತಯಾರಿಸಿ ನೆರೆ ಹೊರೆಯವರು, ಸ್ನೇಹಿತರು, ಬಂಧುಗಳೊಂದಿಗೆ ಹಬ್ಬದ ಅಡುಗೆಯನ್ನು ಸವಿಯಲಾಯಿತು.






Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News