ಸರಕಾರಗಳನ್ನು ಎಚ್ಚರಿಸಲು ಹೋರಾಟ ಅನಿವಾರ್ಯ: ರಮೇಶ್‌ ರಾಜು

Update: 2024-12-25 13:49 GMT

ಉಡುಪಿ, ಡಿ.25: ಇಂದು ರೈತರ ಸಮಸ್ಯೆಗಳನ್ನು ಕೇಳದೆ ಸರಕಾರಗಳು ಕಿವುಡಾಗಿವೆ.ಹೀಗಾಗಿ ರೈತರು ಬೀದಿಗಿಳಿದು ಹೋರಾಟ ಮಾಡಬೇಕಾದ ಅನಿವಾರ್ಯತೆ ಬಂದಿದೆ. ಹೋರಾಟ, ಆಂದೋಲನಗಳ ಮೂಲಕವೆ ಸರಕಾರವನ್ನು ಎಬ್ಬಿಸ ಬೇಕಾಗಿರುವುದು ನಮ್ಮ ಪಾಲಿನ ದುರಂತ. ಆ ಕಾರಣಕ್ಕೆ ರಾಜ್ಯದಾದ್ಯಂತ ಎಲ್ಲಾ ಜಿಲ್ಲೆಗಳಲ್ಲೂ ಭಾರತೀಯ ಕಿಸಾನ್ ಸಂಘದ ನೇತೃತ್ವದಲ್ಲಿ ರೈತ ಘರ್ಜನೆ ರ್ಯಾಲಿಗಳನ್ನು ಆಯೋಜಿಸಲಾಗುವುದು ಎಂದು ಭಾರತೀಯ ಕಿಸಾನ್ ಸಂಘದ ದಕ್ಷಿಣ ಪ್ರಾಂತ್ಯಾಧ್ಯಕ್ಷ ರಮೇಶ್ ರಾಜು ಹೇಳಿದ್ದಾರೆ.

ಅವರು ಮಂಗಳವಾರ ಉಡುಪಿ ಜಿಲ್ಲಾ ಸಮಿತಿಯ ಸಭೆಯನ್ನುದ್ದೇಶಿಸಿ ಮಾತನಾಡುತಿದ್ದರು. ಇತ್ತೀಚಿನ ದಿನಗಳಲ್ಲಿ ಸರಕಾರಗಳು ರೈತರನ್ನು ಕೇವಲ ಓಟ್ ಬ್ಯಾಂಕ್‌ನಂತೆ ಬಳಸಿಕೊಳ್ಳುತ್ತಿವೆ. ಹೊಸ ಉಚಿತದ ಹೆಸರಿನ ಲೇಪನ ಮಾಡಿ ರೈತರಿಗೆ ಅನುಕೂಲಕರವಾಗಿದ್ದ ಅನೇಕ ಯೋಜನೆಗಳನ್ನು ಕೈ ಬಿಟ್ಟಿವೆ. ಹಿಂದೆ ರೈತರ ಕೃಷಿ ಪಂಪುಗಳಿಗೆ ವಿದ್ಯುತ್ ಸಂಪರ್ಕ ನೀಡುವಾಗ ಕಂಬ, ವಯ್ಯರ್ ಅಗತ್ಯ ಬಿದ್ದರೆ ಟಿ.ಸಿ.ಗಳನ್ನೂ ಉಚಿತವಾಗಿ ಅಳವಡಿಸಿಕೊಡುತ್ತಿತ್ತು. ಆದರೆ ಈಗ ಈ ಎಲ್ಲಾ ವೆಚ್ಚವನ್ನು ರೈತರೇ ಭರಿಸಬೇಕಾಗಿದೆ ಎಂದರು.

ಗಂಗಾ ಕಲ್ಯಾಣ ಯೋಜನೆಯಡಿ ಹಿಂದುಳಿದ ಬಡವರಿಗೆ ಬಾವಿ, ಮೋಟರ್‌ಗಳನ್ನು ನೀಡಲಾಗುತ್ತಿತ್ತು. ಆದರೆ ಈಗ ಅದಕ್ಕೆ ಅನುದಾನವನ್ನೇ ನೀಡುತ್ತಿಲ್ಲ. ಸಹಾಯಧನದಲ್ಲಿ ಬಿತ್ತನೆ ಬೀಜ ನೀಡಲಾಗುತ್ತಿತ್ತು. ಈಗ ಮಾರುಕಟ್ಟೆ ದರಕ್ಕಿಂತ ಹೆಚ್ಚು ನೀಡಬೇಕಾಗಿದೆ. ಸಾವಯವ ಕೃಷಿಗೆ ಉತ್ತೇಜನ ನೀಡುವ ಸಾವಯವ ಮಿಷನ್ ಯೋಜನೆ ನಿಂತಿದೆ. ಕೃಷಿ ಉತ್ಪನ್ನಗಳಿಗೆ ಬೆಲೆ ನಿಗದಿಗೊಳಿಸುವ ಕೃಷಿ ಬೆಲೆ ಆಯೋಗ ನೇಮಕಾತಿ ಇಲ್ಲದೆ ಮೂಲೆಗೆ ಸೇರಿದೆ ಎಂದವರು ವಿವರಿಸಿದರು.

ಇದೇ ವೇಳೆ ಮಾತನಾಡಿದ ಪ್ರಾಂತ ಪ್ರಧಾನ ಕಾರ್ಯದರ್ಶಿ ಸೋಮಶೇಖರ್, ಜಿಲ್ಲೆಯ ಎಲ್ಲಾ ಗ್ರಾಮ ಹಾಗೂ ತಾಲೂಕು ಗಳಲ್ಲಿ ಸಮಿತಿ ರಚನಾ ಕಾರ್ಯ ಮಾಡಿ ಈ ಭಾಗದ ರೈತರ ನೈಜ ಸಮಸ್ಯೆಗಳ ಬಗ್ಗೆ ಬೆಳಕು ಚೆಲ್ಲುವ ಕೆಲಸವನ್ನು ಸಂಘಟನೆ ಮಾಡಬೇಕಾಗಿದೆ ಎಂದರು.

ಜಿಲ್ಲಾಧ್ಯಕ್ಷ ನವೀನ್‌ಚಂದ್ರ ಜೈನ್ ಸಭೆಯ ಅಧ್ಯಕ್ಷತೆ ವಹಿಸಿದ್ದರು. ರಾಜ್ಯ ಸಂಘಟನಾ ಕಾರ್ಯದರ್ಶಿ ನಾರಾಯಣ ಸ್ವಾಮಿ, ಜಿಲ್ಲಾ ಉಪಾಧ್ಯಕ್ಷ ಶ್ರೀನಿವಾಸ ಭಟ್ ಇರ್ವತ್ತೂರು ಸಭೆಯಲ್ಲಿ ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಜಪ್ತಿ ಅತಿಥಿಗಳನ್ನು ಸ್ವಾಗತಿಸಿ ಕಾರ್ಯಕ್ರಮ ನಿರೂಪಿಸಿದರು.



Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News