ಬೆಂಕಿ ಅಕಸ್ಮಿಕ: ಗಾಯಾಳು ಮಹಿಳೆ ಮೃತ್ಯು
Update: 2024-12-25 16:23 GMT
ಬ್ರಹ್ಮಾವರ, ಡಿ.25: ಆರೂರು ಗ್ರಾಮದ ಬಂಗ್ಲಗುಡ್ಡೆ ಎಂಬಲ್ಲಿ ಸಂಭವಿಸಿದ ಬೆಂಕಿ ಅಕಸ್ಮಿಕದಿಂದ ಗಂಭೀರವಾಗಿ ಗಾಯ ಗೊಂಡಿದ್ದ ಮಹಿಳೆಯೊಬ್ಬರು ಮೃತಪಟ್ಟ ಬಗ್ಗೆ ವರದಿಯಾಗಿದೆ.
ಮೃತರನ್ನು ಆರೂರು ಗ್ರಾಮದ ಗಿರಿಜಾ(70) ಎಂದು ಗುರುತಿಸಲಾಗಿದೆ. ಇವರು ಡಿ.17ರಂದು ಮನೆಯ ಒಲೆಯ ಬಳಿ ಚಳಿ ಕಾಯಿಸುತ್ತಿರುವಾಗ ಸೀರೆಗೆ ಆಕಸ್ಮಿಕವಾಗಿ ಬೆಂಕಿ ತಗುಲಿತ್ತೆನ್ನಲಾಗಿದೆ. ಇದರಿಂದ ಒಲೆಯ ಮೇಲೆ ಬಿದ್ದು ಗಂಭೀರವಾಗಿ ಗಾಯಗೊಂಡ ಅವರು, ಡಿ.24ರಂದು ರಾತ್ರಿ ಚಿಕಿತ್ಸೆ ಫಲಕಾರಿಯಾಗದೆ ಅಜ್ಜರಕಾಡು ಜಿಲ್ಲಾಸ್ಪತ್ರೆಯಲ್ಲಿ ಮೃತಪಟ್ಟರು ಎಂದು ತಿಳಿದು ಬಂದಿದೆ.
ಈ ಬಗ್ಗೆ ಬ್ರಹ್ಮಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.