ಅಮಿತ್ ಶಾ ಹೇಳಿಕೆ ಹಿಂದೆ ಅಂಬೇಡ್ಕರ್ ಭಯ ಅಡಗಿದೆ: ಪ್ರೊ.ಫಣಿರಾಜ್

Update: 2024-12-25 14:34 GMT

ಉಡುಪಿ, ಡಿ.25: ಅಂಬೇಡ್ಕರ್ ಹೆಸರು ಫ್ಯಾಶನ್ ಆಗಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿಕೆ ಹಿಂದೆ ಅಂಬೇಡ್ಕರ್ ಅವರ ಪ್ಯಾಷನ್ (ಭಾವತೀವ್ರತೆ) ಎಮೋಷನ್(ಭಾವನೆ) ಹಾಗೂ ಅಗ್ರೆಷನ್(ಅಕ್ರಮಣ ಶೀಲತೆ)ನ ಹೆದರಿಕೆ ಅಡಗಿದೆ. ಆ ಕಾರಣಕ್ಕೆ ಭಯದಿಂದ ಮನಸ್ಸಿನಲ್ಲಿ ಮುಚ್ಚಿಟ್ಟುಕೊಂಡಿದ್ದ ಈ ಮಾತು ಹೊರಗೆ ಬಂದಿದೆ ಎಂದು ಹಿರಿಯ ಚಿಂತಕ ಪ್ರೊ.ಫಣಿರಾಜ್ ಹೇಳಿದ್ದಾರೆ.

ಕರ್ನಾಟಕ ದಲಿತ ಸಂಘರ್ಷ ಸಮಿತಿ ಅಂಬೇಡ್ಕರ್ ವಾದ ಉಡುಪಿ ಜಿಲ್ಲೆ ವತಿಯಿಂದ ಸಂಸತ್ತಿನಲ್ಲಿ ಸಂವಿಧಾನ ಶಿಲ್ಪಿ ಡಾ.ಅಂಬೇಡ್ಕರ್ ಬಗ್ಗೆ ಅವಹೇಳನಕಾರಿಯಾಗಿ ಹೇಳಿಕೆ ನೀಡಿರುವ ಕೇಂದ್ರ ಗೃಹ ಸಚಿವ ಅಮಿತ್ ಶಾ ವಿರುದ್ಧ ಅಜ್ಜರ ಕಾಡು ಹುತಾತ್ಮ ಸ್ಮಾರಕದ ಎದುರು ಹಮ್ಮಿಕೊಳ್ಳಲಾದ ಪ್ರತಿಭಟನೆಯನ್ನುದ್ದೇಶಿಸಿ ಅವರು ಮಾತನಾಡುತಿದ್ದರು.

ಅಮಿತ್ ಶಾ ಬಾಯಿತಪ್ಪಿನಿಂದ ಈ ಮಾತು ಹೇಳಿದ್ದಾರೆ. ಬಾಯಿ ತಪ್ಪಿನಿಂದ ಬರುವ ಮಾತು ಮನಸ್ಸಿನ ಒಳಗೆ ಭಯ ದಿಂದ ಮುಚ್ಚಿಟ್ಟುಕೊಂಡಿರುವುದು ಹೊರಗೆ ಬರುವುದೇ ಹೊರತು ಅಜ್ಞಾನದಿಂದ ಹೇಳುವುದಲ್ಲ. ಅಂಬೇಡ್ಕರ್ ನಮಗೆ ಫ್ಯಾಶನ್ ಮಾತ್ರವಲ್ಲ ಮೈತ್ರಿ ಧರಣಿ ಬೋಧಿಸುವ ಕಾರಣಕ್ಕೆ ಪ್ಯಾಶನ್ ಕೂಡ ಆಗಿದ್ದಾರೆ. ಸ್ವಾತಂತ್ರ್ಯ, ಸಮಾನತೆ ಭಾತೃತ್ವದ ಮೂಲತತ್ವ ಬೋಧಿಸಿರುವುದರಿಂದ ಎಮೋಷನ್ ಆಗಿದ್ದಾರೆ ಮತ್ತು ಹಿಂದುತ್ವ, ಫ್ಯಾಸಿಸಂ, ಬಂಡವಾಳ ಶಾಹಿತ್ವ ವಿರೋಧಿಸಿರುವುದರಿಂದ ಅಗ್ರೆಷನ್ ಆಗಿದ್ದಾರೆ ಎಂದರು.

ಈ ಮೂರರಿಂದ ಅಂಬೇಡ್ಕರ್ ಇವತ್ತು ಫ್ಯಾಶನ್ ಆಗಿದ್ದಾರೆಯೇ ಹೊರತು ಹಿಂದುತ್ವವಾದಿಗಳಂತೆ ಬಾಯಲ್ಲಿ ಒಂದು ಕೃತಿಯಲ್ಲಿ ಒಂದು ಎಂಬ ಕಾರಣಕ್ಕೆ ಫ್ಯಾಶನ್ ಆಗಿಲ್ಲ. ಭಾರತವನ್ನು ಹಿಂದು ರಾಷ್ಟ್ರ ಹಾಗೂ ಬಹುಸಂಖ್ಯಾತರ ಹೆಸರಿನಲ್ಲಿ ಫ್ಯಾಸಿಸಂ ಆಡಳಿತ ನಡೆಸಲು ಬಿಡಬಾರದು. ಅದರ ವಿರುದ್ಧ ಚಳವಳಿ ಮಾಡಬೇಕೆಂದು ಅಂಬೇಡ್ಕರ್ ಪ್ರತಿಪಾದಿಸಿದ್ದರು. ಅದಕ್ಕಾಗಿ ಅವರಿಗೆ ಅಂಬೇಡ್ಕರ್ ಬಗ್ಗೆ ಹೆದರಿಕೆ ಇದೆ. ನಾವು ಯಾವತ್ತು ಅಂಬೇಕರ್ ಬೋಧಿಸಿದ ಈ ಮೂರನ್ನು ಬಿಡ ಬಾರದು ಎಂದು ಅವರು ಹೇಳಿದರು.

ದಸಂಸ ಜಿಲ್ಲಾ ಪ್ರಧಾನ ಸಂಚಾಲಕ ಮಂಜುನಾಥ್ ಗಿಳಿಯಾರು ಮಾತನಾಡಿ, ಗುಜರಾತಿನಿಂದ ಗಡಿಪಾರು ಆಗಿದ್ದ ಕ್ರಿಮಿನಲ್ ಅಮಿತ್ ಶಾ ಇಂದು ದೇಶದ ಗೃಹ ಸಚಿವರಾಗಿ ಮೆರೆಯುತ್ತಿರುವುದು ದುರಂತ. ಶೋಷಿತ ಸಮುದಾಯಗಳನ್ನು ತುಳಿಯುವ ಆರ್‌ಎಸ್‌ಎಸ್ ಹಾಗೂ ಬಿಜೆಪಿಯ ಗುಪ್ತ ಅಜೆಂಡಾಗಳನ್ನು ಮುನ್ನಲೆಗೆ ತರುವ ಕಾರ್ಯವನ್ನು ಅಮಿತ್ ಶಾ ಮೂಲಕ ಮಾಡಲಾಗುತ್ತಿದೆ ಎಂದು ಆರೋಪಿಸಿದರು.

ಗಾಂಧಿ ಸೇರಿದಂತೆ ಬಹುತ್ವವನ್ನು ಒಪ್ಪಿಕೊಳ್ಳುವ ಎಲ್ಲರನ್ನು ಬದಿಗೆ ಸರಿಸುವ ಕಾರ್ಯ ಬಿಜೆಪಿ ಸಂಘಪರಿವಾರ ನಡೆಸು ತ್ತಿದೆ. ಇವರಿಗೆ ಅಂಬೇಡ್ಕರ್ ಅವರನ್ನು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ. ಕುತಂತ್ರ ನೀತಿಯಿಂದ ಇವರು ತಮ್ಮ ಅಜೆಂಡಾವನ್ನು ನಿಧಾನವಾಗಿ ಅನುಷ್ಠಾನಕ್ಕೆ ತರುವ ಕಾರ್ಯ ಮಾಡುತ್ತಿದ್ದಾರೆ. ಆದರೆ ಇದಕ್ಕೆಲ್ಲ ನಾವು ಅವಕಾಶ ನೀಡುವುದಿಲ್ಲ. ಅಮಿತ್ ಶಾ ರಾಜಕೀಯ ಬಿಟ್ಟು ಮನೆಗೆ ಹೋಗುವವರೆಗೆ ಹೋರಾಟವನ್ನು ತೀವ್ರಗೊಳಿಸಲಾಗುವುದು ಎಂದರು.

ದಸಂಸ ರಾಜ್ಯ ಸಂಘಟನಾ ಸಂಚಾಲಕ ಸುಂದರ್ ಮಾಸ್ತರ್ ಮಾತನಾಡಿ, ದೇಶವನ್ನು ಆಳ್ವಿಕೆ ಮಾಡುತ್ತಿರುವ ಮನುವಾದಿಗಳಿಗೆ ಬಹುತ್ವ ಒಳಗೊಂಡ ಅಂಬ್ಕೇಡ್ಕರ್ ನೀಡಿದ ಸಂವಿಧಾನ ಬಿಸಿತುಪ್ಪವಾಗಿದೆ. ಈ ದೇಶದಲ್ಲಿ ದಲಿತರ ಮೇಲೆ ನಡೆಯುತ್ತಿರುವ ನಿರಂತರ ದೌರ್ಜನ್ಯ, ಅತ್ಯಾಚಾರಗಳ ಬಗ್ಗೆ ಬಾಯಿ ಬಿಡದ ಅಮಿತ್ ಶಾ, ಅಂಬೇಡ್ಕರ್ ಬಗ್ಗೆ ಅವಹೇಳನಕಾರಿ ಮಾತನಾಡುತ್ತಾರೆ. ಮೋದಿ ಪರಿವಾರಕ್ಕೆ ಸಂವಿಧಾನವೇ ದೊಡ್ಡ ತೊಡಕು ಆಗಿದೆ. ಅದಕ್ಕಾಗಿ ಅವರು ಸಂವಿಧಾನ ಬದಲಾವಣೆಗಾಗಿ ಕುತಂತ್ರಗಳನ್ನು ಮಾಡುತ್ತಿದ್ದಾರೆ ಎಂದು ಟೀಕಿಸಿದರು.

ಬಳಿಕ ಅಲ್ಲಿಂದ ಹೊರಟ ಪ್ರತಿಭಟನಾ ಮೆರವಣಿಗೆಯು ಜೋಡುಕಟ್ಟೆ ವರೆಗೆ ತೆರಳಿ ವಾಪಾಸ್ಸು ಅಜ್ಜರಕಾಡಿನಲ್ಲಿ ಸಮಾಪ್ತಿ ಗೊಂಡಿತು. ಈ ಸಂದರ್ಭದಲ್ಲಿ ಮನುಸ್ಮತಿ ಹಾಗೂ ಅಮಿತ್ ಶಾ ಅವರ ಪ್ರತಿಕೃತಿಯನ್ನು ದಹಿಸಿ ಆಕ್ರೋಶ ವ್ಯಕ್ತಪಡಿಸಲಾಯಿತು.

ಪ್ರತಿಭಟನೆಯಲ್ಲಿ ದಸಂಸ ಸಂಘಟನಾ ಸಂಚಾಲಕ ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಶಿವಾನಂದ ಮೂಡಬೆಟ್ಟು, ಸಂಜೀವ ಬಳ್ಕೂರು ಮೊದಲಾದವರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - Riyaz

contributor

Byline - ವಾರ್ತಾಭಾರತಿ

contributor

Similar News