ಮಂಗಳೂರು: ಹೋಟೆಲ್ ಉದ್ಯಮಿಗಳಿಗೆ ಮಾಹಿತಿ ಕಾರ್ಯಾಗಾರ

Update: 2022-02-24 17:23 GMT

ಮಂಗಳೂರು,ಫೆ.24: ಕೋವಿಡ್-19ನಿಂದಾಗಿ ಪ್ರವಾಸೋದ್ಯಮ ವಲಯ ತೀವ್ರವಾದ ನಷ್ಟ ಅನುಭಸಿದ್ದು, ಇದರಿಂದಾಗಿ ಹೊಟೇಲ್, ರೆಸಾರ್ಟ್, ರೆಸ್ಟೋರೆಂಟ್‌ಗಳ ಮಾಲಕರು ಮತ್ತು ಪ್ರವಾಸಿ ಮಾರ್ಗದರ್ಶಿಗಳು ಸಂಕಷ್ಟದಲ್ಲಿರುವುದನ್ನು ಗಮನಿಸಿ ರಾಜ್ಯ ಸರಕಾರವು ಪ್ರವಾಸೋದ್ಯಮ ವಲಯದ ಪ್ರಮುಖ ಅಂಗಗಳಾದ ಹೋಟೆಲ್, ರೇಸಾರ್ಟ್, ರೆಸ್ಟೋರೆಂಟ್‌ಗಳನ್ನು ತೆರೆಯಲು ಮತ್ತು ನಿರ್ವಹಣೆ ಮಾಡಲು ಹಲವು ವಿಧದ ನೆರವುಗಳನ್ನು ಘೋಷಿಸಿರುವ ಬಗ್ಗೆ ನಗರದ ಖಾಸಗಿ ಹೊಟೇಲ್‌ನಲ್ಲಿ ಗುರುವಾರ ನಡೆದ ದ.ಕ. ಮತ್ತು ಉಡುಪಿ ಜಿಲ್ಲಾ ಹೋಟೆಲ್ ಉದ್ಯಮಿಗಳಿಗೆ ಮಾಹಿತಿ ಕಾರ್ಯಗಾರ ನಡೆಸಲಾಯಿತು.

2021-22ನೇ ಸಾಲಿನ ಹಣಕಾಸು ವರ್ಷದಲ್ಲಿ ಹೊಟೇಲ್, ರೇಸಾರ್ಟ್, ರೆಸ್ಟೋರೆಂಟ್, ಮನರಂಜನಾ ಪಾರ್ಕ್‌ಗಳ ಆಸ್ತಿ ತೆರಿಗೆಯಲ್ಲಿ ಶೇ.50ರಷ್ಟು ರಿಯಾಯಿತಿ ನೀಡಲಾಗಿದೆ. 2021ರ ಎಪ್ರಿಲ್, ಮೇ, ಜೂನ್ ತಿಂಗಳ ವಿದ್ಯುಚ್ಛಕ್ತಿ ಡಿಮ್ಯಾಂಡ್ ಪಿಕ್ಸೆಡ್ ಶುಲ್ಕ ಪಾವತಿಯಲ್ಲಿ ವಿನಾಯಿತಿ ನೀಡಲಾಗಿದೆ. ಪ್ರವಾಸೋದ್ಯಮ ಇಲಾಖೆಯಲ್ಲಿ ನೋಂದಣಿ ಮಾಡಿಕೊಂಡಿರುವ ಸುಮಾರು 200 ಪ್ರವಾಸಿ ಮಾರ್ಗದರ್ಶಿಗಳಿಗೆ ತಲಾ 5,000 ರೂಗಳ ಹಣಕಾಸು ನೆರವು ನೀಡಲಾಗಿದೆ ಎಂದು ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕ ಚೇತನ್ ತಿಳಿಸಿದರು.

ಫೆ.22ರಿಂದ ರಾಜ್ಯಾದ್ಯಂತ ಎಲ್ಲಾ ಜಿಲ್ಲೆಗಳಲ್ಲಿ ಇಲಾಖೆಯ ತಾಂತ್ರಿಕಾ ವಿಭಾಗವು ಭೇಟಿ ನೀಡಿ ನೊಂದಣಿ ಶಿಬಿರ ಆಯೋಜಿಸಿದೆ. ಅರ್ಹ ಫಲಾನುಭವಿಗಳು ಸೂಕ್ತ ದಾಖಲೆಗಳೊಂದಿಗೆ ಪ್ರವಾಸೋದ್ಯಮ ಇಲಾಖೆಯ ಅಧಿಕೃತ ಆನ್‌ಲೈನ್ ಜಾಲತಾಣ www.karnatakatourism.org ಮೂಲಕ 500 ರೂ.ಅರ್ಜಿ ಶುಲ್ಕದೊಂದಿಗೆ ಕೆಟಿಟಿಪಿ ಅಡಿ ನೋಂದಣಿ ಮಾಡಿಕೊಳ್ಳಬಹುದು ಎಂದು ಪ್ರವಾಸೋದ್ಯಮ ಇಲಾಖೆಯ ಉಪನಿರ್ದೇಶಕ ಮಾಣಿಕ್ಯ ಎನ್.ತಿಳಿಸಿದರು.

ಕಾರ್ಯಾಗಾರದಲ್ಲಿ ಹೋಟೆಲ್ ಅಸೋಸಿಯೇಶನ್‌ನ ಅಧ್ಯಕ್ಷ ಚಂದ್ರಹಾಸ್ ಉಡುಪಿ, ಜಿಲ್ಲಾ ಪ್ರವಾಸೋದ್ಯಮ ಸಮಾಲೋಚಕರಾದ ಭವಿಷ್ಯ್ ಮತ್ತಿತರರು ಉಪಸ್ಥಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News