ಉಡುಪಿ ಬಾಲಕಿಯರ ಕಾಲೇಜಿನಲ್ಲಿ ಹಿಜಾಬಿಗೆ ವಿರೋಧ: 2 ವಾರಗಳಿಂದ 25-30 ವಿದ್ಯಾರ್ಥಿನಿಯರು ತರಗತಿಗೆ ಗೈರು!

Update: 2022-03-02 11:08 GMT

ಉಡುಪಿ, ಮಾ.2: ಹಿಜಾಬ್ ಹೋರಾಟ ಆರಂಭಗೊಂಡ ಉಡುಪಿ ಸರಕಾರಿ ಬಾಲಕಿಯರ ಪದವಿ ಪೂರ್ವ ಕಾಲೇಜಿನಲ್ಲಿ ಹೈಕೋರ್ಟ್ ಮೆಟ್ಟಿಲೇರಿರುವ ಆರು ಮಂದಿ ವಿದ್ಯಾರ್ಥಿನಿಯರು ಮಾತ್ರವಲ್ಲದೆ ಸುಮಾರು 25-30 ವಿದ್ಯಾರ್ಥಿನಿಯರು ಕಳೆದ ಎರಡು ವಾರಗಳಿಂದ ತರಗತಿಗೆ ಗೈರು ಹಾಜರಾಗುತ್ತಿರುವ ವಿಚಾರ ಇದೀಗ ತಡವಾಗಿ ಬೆಳಕಿಗೆ ಬಂದಿದೆ.

ಈ ಕುರಿತು ಕಾಲೇಜಿನ ಪ್ರಥಮ ಪಿಯು ಕಲಾ ವಿಭಾಗದ ವಿದ್ಯಾರ್ಥಿನಿಯೊಬ್ಬಳು 'ವಾರ್ತಾಭಾರತಿ' ಜೊತೆ ಮಾತನಾಡಿ, ‘ಹಿಜಾಬ್ ಧರಿಸಲು ವಿರೋಧ ವ್ಯಕ್ತವಾದ ಕಾರಣ ಹೈಕೋರ್ಟ್ ಮೆಟ್ಟಿಲೇರಿರುವ ಆರು ಮಂದಿ ಮಾತ್ರವಲ್ಲದೆ, ನಾನು ಸೇರಿದಂತೆ ಪ್ರಥಮ ಹಾಗೂ ದ್ವಿತೀಯ ಪಿಯುಸಿಯ ಸುಮಾರು 25-30 ವಿದ್ಯಾರ್ಥಿನಿಯರು ಫೆ.17ರಿಂದ ತರಗತಿಗೆ ಹೋಗುತ್ತಿಲ್ಲ. ನಾವು ಹೈಕೋರ್ಟ್ ಅಂತಿಮ ಆದೇಶವನ್ನು ಎದುರು ನೋಡುತ್ತಿದ್ದೇವೆ. ಆದೇಶ ಬಂದ ಬಳಿಕವೇ ತರಗತಿಗೆ ತೆರಳುವ ನಿರ್ಧಾರ ಮಾಡಿದ್ದೇವೆ’ ಎಂದು ತಿಳಿಸಿದ್ದಾರೆ.

‘ನಾನು ಈ ವರ್ಷ ಕಾಲೇಜಿಗೆ ದಾಖಲಾಗುವ ಸಂದರ್ಭ, ಇಲ್ಲಿ ಹಿಜಾಬ್ ಹಾಕಲು ಅವಕಾಶ ಇಲ್ಲ ಎಂದು ಕಾಲೇಜಿನವರು ಹೇಳಿದ್ದರು. ಅದಕ್ಕೆ ನಾನು ಮತ್ತು ಪೋಷಕರು ಒಪ್ಪಿದ್ದೇವು. ಆದರೆ ಡಿಸೆಂಬರ್ ತಿಂಗಳಿನಿಂದ ಹಿಜಾಬ್‌ಗಾಗಿ ಹೋರಾಟ ಮಾಡುತ್ತಿರುವ ಈ ಕಾಲೇಜಿನ ಆರು ಮಂದಿ ವಿದ್ಯಾರ್ಥಿನಿಯರ ಪೈಕಿ ದ್ವಿತೀಯ ಪಿಯು ವಿದ್ಯಾರ್ಥಿನಿಯೊಬ್ಬಳು, ತಾನು ಪ್ರಥಮ ಪಿಯುಸಿಯಲ್ಲಿರುವಾಗ ಇಲ್ಲಿನ ದ್ವಿತೀಯ ಪಿಯು ವಿದ್ಯಾರ್ಥಿನಿಯರು ಹಿಜಾಬ್ ಹಾಕಿ ಕೊಂಡು ಬರುತ್ತಿದ್ದರು ಎಂದು ಹೇಳಿಕೆ ನೀಡಿದ್ದರು. ಇದರಿಂದ ನಮಗೆ ಇಲ್ಲಿ ಈ ಹಿಂದೆ ಕೂಡ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬರುತ್ತಿದ್ದರೆಂಬ ವಿಚಾರ ತಿಳಿಯಿತು’ ಎಂದು ಅವರು ಹೇಳಿದ್ದಾರೆ.

‘ಫೆ.16ರಂದು ನಮ್ಮ ಕಾಲೇಜಿನ ಪ್ರಥಮ ವರ್ಷದ ವಾಣಿಜ್ಯ ವಿಭಾಗದ ಏಳು ಮಂದಿ ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ತರಗತಿ ಬಂದಿದ್ದರು. ಆಗ ಪ್ರಾಂಶುಪಾಲರು ಹಿಜಾಬ್ ಹಾಕಿಕೊಂಡು ಬಂದರೆ ತರಗತಿ ಪ್ರವೇಶ ನೀಡಲ್ಲ ಎಂದು ಹೇಳಿದ್ದರು. ಹಾಗೆ ಅವರು ವಾಪಾಸ್ಸು ಮನೆಗೆ ಹೋಗಿದ್ದರು. ಈ ವಿಚಾರ ತಿಳಿದ ಬಳಿಕ ಹೆಚ್ಚಿನ ವಿದ್ಯಾರ್ಥಿನಿಯರು ತರಗತಿಗೆ ಹೋಗುತ್ತಿಲ್ಲ’ ಎಂದರು.

‘ನಾನು ಈವರೆಗೆ ತರಗತಿಗೆ ಹಿಜಾಬ್ ಹಾಕಿಕೊಂಡು ಹೋಗಿಲ್ಲ. ಏಕೆಂದರೆ ಇಲ್ಲಿ ನಿಯಮ ಇದೆ ಎಂಬ ಕಾರಣಕ್ಕೆ. ಆದರೆ ಈ ಹಿಂದಿನವರು ಹಾಕಿಕೊಂಡು ಬರುತ್ತಿದ್ದಾರೆಂದು ತಿಳಿದ ನಂತರ, ನಮಗೂ ಕಾಲೇಜಿನವರು ಹಿಜಾಬ್ ಹಾಕಲು ಅವಕಾಶ ಕೊಡಬೇಕು ಎಂಬುದು ನಮ್ಮ ಎಲ್ಲರ ಒತ್ತಾಯ’ ಎಂದು ಕಾಲೇಜಿನ ವಿದ್ಯಾರ್ಥಿನಿಯರು ತಿಳಿಸಿದ್ದಾರೆ.

‘ನನ್ನ ತರಗತಿಯಲ್ಲಿ ಇರುವ ಮುಸ್ಲಿಮ್ ವಿದ್ಯಾರ್ಥಿನಿಯರ ಪೈಕಿ ನಾನು ಮತ್ತು ಇತರ ಇಬ್ಬರು ಕಳೆದ ಎರಡು ವಾರಗಳಿಂದ ತರಗತಿಗೆ ಹೋಗುತ್ತಿಲ್ಲ. ಉಳಿದವರ ಬಗ್ಗೆ ಗೊತ್ತಿಲ್ಲ. ಸದ್ಯ ನಾವು ಮನೆಯಲ್ಲಿಯೇ ಇದ್ದೇವೆ. ಮನೆಯಲ್ಲಿ ಕುಳಿತೇ ಸ್ಟಡಿ ಮಾಡುತ್ತಿದ್ದೇವೆ. ಮಾ.28ರಂದು ನಮಗೆ ಅಂತಿಮ ಪರೀಕ್ಷೆ ಆರಂಭವಾಗಲಿದ್ದು, ಈ ನಿಟ್ಟಿನಲ್ಲಿ ಕೋರ್ಟ್ ಆದೇಶ ಆದಷ್ಟು ಬೇಗ ಬರಲಿ ಎಂಬುದು ನಮ್ಮ ಆಶಯ’ -ಪ್ರಥಮ ಪಿಯು ಆರ್ಟ್ಸ್ ವಿದ್ಯಾರ್ಥಿನಿ

ಓರ್ವ ವಿದ್ಯಾರ್ಥಿನಿ ಪರೀಕ್ಷೆಗೆ ಗೈರು
ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ ಬಾಲಕಿಯರ ಸರಕಾರಿ ಕಾಲೇಜಿನ ಆರು ವಿದ್ಯಾರ್ಥಿನಿಯರ ಪೈಕಿ ಮೂವರು ದ್ವಿತೀಯ ಪಿಯು ಸೈನ್ಸ್ ವಿದ್ಯಾರ್ಥಿ ಗಳಾಗಿದ್ದು, ಅದರಲ್ಲಿ ಓರ್ವ ವಿದ್ಯಾರ್ಥಿನಿಗೆ ಇಂದು ಪ್ರಾಯೋಗಿಕ ಪರೀಕ್ಷೆ ನಡೆದಿತ್ತು. ಆದರೆ ಆಕೆ ಗೈರು ಹಾಜರಾಗಿದ್ದಳು ಎಂದು ಕಾಲೇಜು ಮೂಲಗಳು ತಿಳಿಸಿವೆ.

ಸೋಮವಾರ ನಡೆದ ಮೊದಲ ಪ್ರಾಯೋಗಿಕ ಪರೀಕ್ಷೆಗೆ ಈ ಮೂವರು ಸೈನ್ಸ್ ವಿದ್ಯಾರ್ಥಿನಿಯರು ಕೂಡ ಹಿಜಾಬ್ ತೆಗೆಯಲು ನಿರಾಕರಿಸಿ ಗೈರು ಹಾಜರಾಗಿದ್ದರು. ಪ್ರತಿಯೊಬ್ಬರಿಗೆ ಮೂರು ಪ್ರಾಕ್ಟಿಕಲ್ ಪರೀಕ್ಷೆ ಇದ್ದು, ಮಾ.5 ರಂದು ಕೊನೆಯ ಪರೀಕ್ಷೆ ನಡೆಯಲಿದೆ ಎಂದು ಕಾಲೇಜಿನ ಮೂಲಗಳು ತಿಳಿಸಿವೆ.

''ನಮ್ಮ ಕಾಲೇಜಿನಲ್ಲಿ ಒಟ್ಟು 70 ಮಂದಿ ಮುಸ್ಲಿಮ್ ವಿದ್ಯಾರ್ಥಿನಿಯರಿದ್ದಾರೆ. ಅದರಲ್ಲಿ ಆರು ಮಂದಿ ಹೈಕೋರ್ಟ್ ಹೋದ ಬಳಿಕ ನಡೆದ ಬೆಳವಣಿಗೆಯಿಂದ ಕಾಲೇಜಿಗೆ ರಜೆ ನೀಡಲಾಗಿತ್ತು. ಕಾಲೇಜು ಪುನಾರಂಭಗೊಂಡ ಬಳಿಕ ಪ್ರಥಮ ಪಿಯು ಕಾಮರ್ಸ್‌ನ ಸುಮಾರು ಐದಾರು ವಿದ್ಯಾರ್ಥಿನಿಯರು ಹಿಜಾಬ್ ಹಾಕಿಕೊಂಡು ಬಂದರು. ತದನಂತರ ಸುಮಾರು 15-20 ಮುಸ್ಲಿಮ್ ವಿದ್ಯಾರ್ಥಿನಿಯರು ತರಗತಿಗೆ ಗೈರು ಹಾಜರಾಗುತ್ತಿದ್ದಾರೆ. ಇದರಲ್ಲಿ ಆರೇಳು ವಿದ್ಯಾರ್ಥಿನಿಯರು ಈ ಹಿಂದಿನಿಂದಲೂ ತರಗತಿಗೆ ಬರುತ್ತಿರಲಿಲ್ಲ''
-ರುದ್ರೇಗೌಡ, ಪ್ರಾಂಶುಪಾಲರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News