ಉಡುಪಿಯಲ್ಲಿ ಸಂಭ್ರಮದ ಮೂರು ತೇರು ಉತ್ಸವ
ಉಡುಪಿ, ಜ.14: ಶ್ರೀಕೃಷ್ಣ ಮಠದಲ್ಲಿ ನಡೆದಿರುವ ಸಪ್ತೋತ್ಸವದ ಆರನೇ ದಿನವಾದ ಮಂಗಳವಾರ ರಾತ್ರಿ ಮಕರ ಸಂಕ್ರಾಂತಿಯ ಅಂಗವಾಗಿ ಪರ್ಯಾಯ ಪುತ್ತಿಗೆ ಮಠಾಧೀಶರ ನೇತೃತ್ವದಲ್ಲಿ ಆಕರ್ಷಕ ಮೂರು ತೇರು ಉತ್ಸವ ನಡೆಯಿತು.
ರಥೋತ್ಸವದಲ್ಲಿ ಪುತ್ತಿಗೆ ಶ್ರೀಸುಗುಣೇಂದ್ರತೀರ್ಥ ಶ್ರೀಪಾದರು ಹಾಗೂ ಕಿರಿಯ ಯತಿಗಳಾದ ಶ್ರೀಸುಶ್ರೀಂದ್ರತೀರ್ಥರು ಭಾಗವಹಿಸಿದ್ದರು. ಇದಕ್ಕೆ ಮುನ್ನ ರಂಗುರಂಗಿನ ವಿದ್ಯುದ್ದೀಪಗಳಿಂದ ಅಲಂಕೃತವಾದ ಮಧ್ವ ಸರೋವರದಲ್ಲಿ ಶ್ರೀಕೃಷ್ಣ -ಮುಖ್ಯಪ್ರಾಣರಿಗೆ ತೆಪ್ಪೋತ್ಸವವೂ ನಡೆಯಿತು.
ಮಧ್ವಾಚಾರ್ಯರು ಶ್ರೀಕೃಷ್ಣನನ್ನು ಪ್ರತಿಷ್ಠಾಪಿಸಿದ ದಿನವೆಂದು ಹೇಳಲಾದ ಮಕರಸಂಕ್ರಮಣದಂದು ರಾತ್ರಿ ರಥಬೀದಿಯಲ್ಲಿ ಮೂರು ತೇರು ಉತ್ಸವ ಬಿರುದು ಬಾವಲಿಗಳ ಸಹಿತ ಧಾರ್ಮಿಕ ವಿಧಿವಿಧಾನಗಳೊಂದಿಗೆ ನಡೆಯಿತು. ಚಿನ್ನದ ಪಲ್ಲಕ್ಕಿ ಯಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರನ್ನು ತಂದು ರಥಗಳಲ್ಲಿ ಕುಳ್ಳಿರಿಸಲಾಯಿತು.
ಐದು ದಿನಗಳ ಉತ್ಸವದಲ್ಲಿ ಗರುಡ ರಥದಲ್ಲಿ ಶ್ರೀಕೃಷ್ಣ ಮುಖ್ಯಪ್ರಾಣರು ಹಾಗೂ ಚಿಕ್ಕ ರಥದಲ್ಲಿ ಶ್ರೀಅನಂತೇಶ್ವರ ಹಾಗೂ ಚಂದ್ರಮೌಳೇಶ್ವರ ದೇವರ ಮೂರ್ತಿಯನ್ನು ಇರಿಸಿ ರಥೋತ್ಸವ ನಡೆದರೆ, ಆರನೇ ದಿನವಾದ ಮಕರ ಸಂಕ್ರಾಂತಿಯಂದು ಬ್ರಹ್ಮರಥದಲ್ಲಿ ಕೃಷ್ಣ, ಚಿಕ್ಕ ರಥದಲ್ಲಿ ಮುಖ್ಯಪ್ರಾಣ, ಹಾಗೂ ಗರುಡ ರಥದಲ್ಲಿ ಅನಂತೇಶ್ವರ ಮತ್ತು ಚಂದ್ರಮೌಳೀಶ್ವರ ಮೂರ್ತಿಯನ್ನು ಇರಿಸಿ ರಥಬೀದಿಗೆ ಒಂದು ಸುತ್ತು ಬರಲಾಯಿತು. ಈ ವೇಳೆ ಹನಿ ಮಳೆ ಸುರಿದು ಜನರಿಗೆ ಅಡಚಣೆ ಉಂಟಾಯಿತು.
ಭಕ್ತರಿಂದ ಎಳೆಯಲ್ಪಟ್ಟ ಮೂರು ರಥಗಳು ರಥಬೀದಿಯ ದಕ್ಷಿಣ ಭಾಗದಲ್ಲಿ ಪುತ್ತಿಗೆ ಮಠದ ಎದುರು ಒಂದು ಸರಳರೇಖೆ ಯಲ್ಲಿ ನಿಂತಾಗ ನೆರೆದ ಸಾವಿರಾರು ಮಂದಿ ಭಕ್ತರು ಜಯಘೋಷ ಮಾಡಿದರು. ಈ ಮೂರು ರಥಗಳ ಮುಂದೆ ವರ್ಣ ವೈವಿಧ್ಯದ ಸುಡುಮದ್ದುಗಳನ್ನು ಸಿಡಿಸಿ ಆಕಾಶದಲ್ಲಿ ಬಣ್ಣಗಳ ಚಿತ್ತಾರವನ್ನು ಮೂಡಿಸಲಾಯಿತು.
ಈ ಬಾರಿ ರಥಬೀದಿಯಲ್ಲಿ ಸಂಜೆ ಉಡುಪಿ ತಾಲೂಕು ಶ್ರೀಧರ್ಮಸ್ಥಳ ಮಂಜುನಾಥೇಶ್ವರ ಭಜನಾ ಪರಿಷತ್ನ ಸಹ ಯೋಗದಲ್ಲಿ ಒಟ್ಟು ಒಂಭತ್ತು ತಂಡಗಳಿಂದ ವಿಶೇಷ ಕುಣಿತ ಭಜನೆ ನಡೆಯಿತು. ಅಲ್ಲದೇ ರಥಬೀದಿ ಯುದ್ದಕ್ಕೂ ಮಹಿಳೆಯರು ಆಕರ್ಷಕ ರಂಗೋಲಿಯಿಂದ ವೈವಿಧ್ಯಮಯ ಚಿತ್ತಾರ ಬಿಡಿಸಿದ್ದರು.
ಸೋಮವಾರ ಚುರ್ಣೋತ್ಸವ: ಆಚಾರ್ಯ ಮಧ್ವರು 13ನೇ ಶತಮಾನದಲ್ಲಿ ಇದೇ ಮಕರ ಸಂಕ್ರಾಂತಿ ದಿನದಂದು ಕೃಷ್ಣ ವಿಗ್ರಹವನ್ನು ಪ್ರತಿಷ್ಠಾಪಿಸಿದ್ದ ನೆನೆಪಿಗಾಗಿ ವಾರ್ಷಿಕ ಸಪ್ತೋತ್ಸವವನ್ನು ಸಾಂಪ್ರದಾಯಿಕವಾಗಿ ಆಚರಿಸಲಾಗುತ್ತದೆ. ನಾಳೆ ಬೆಳಗ್ಗೆ 9:30ಕ್ಕೆ ಹಗಲು ರಥೋತ್ಸವ ಹಾಗೂ ಚೂರ್ಣೋತ್ಸವದೊಂದಿಗೆ ಒಂದು ವಾರದ ಸಪ್ತೋತ್ಸವ ಮುಕ್ತಾಯ ಗೊಳ್ಳಲಿದೆ. ನಾಳೆ ಸುವರ್ಣೋತ್ಸವ, ಅವಭೃತ ಸ್ನಾನದೊಂದಿಗೆ ಮಹಾ ಅನ್ನಸಂತರ್ಪಣೆಯೂ ನಡೆಯಲಿದೆ.