ಮಹಾಕುಂಭ ಮೇಳದ ಯಶಸ್ಸಿಗಾಗಿ ಪ್ರಾರ್ಥಿಸಿ: ಪೇಜಾವರಶ್ರೀ
ಉಡುಪಿ, ಜ.14 ಉತ್ತರ ಪ್ರದೇಶ ಪ್ರಯಾಗರಾಜದ ಪವಿತ್ರ ತ್ರಿವೇಣಿ ಸಂಗಮದಲ್ಲಿ 144 ವರ್ಷಗಳಿಗೊಮ್ಮೆ ನಡೆಯುತ್ತಿ ರುವ ಮಹಾಕುಂಭ ಮೇಳದ ಯಶಸ್ಸಿಗೆ ನಾಡಿನ ಸಮಸ್ತ ಸಾಧು ಸಂತರು ಹಾಗೂ ಪ್ರತೀ ಮನೆ ಮಂದಿರಗಳಲ್ಲಿ ಸಮಸ್ತ ಹಿಂದು ಸಮಾಜ ದೀಪ ಬೆಳಗಿ ಪ್ರಾರ್ಥಿಸುವಂತೆ ಪೇಜಾವರ ಮಠದ ಶ್ರೀವಿಶ್ವಪ್ರಸನ್ನತೀರ್ಥ ಶ್ರೀಪಾದರು ಕರೆನೀಡಿದ್ದಾರೆ.
ಮಹಾಕುಂಭ ಮೇಳ ಇಡೀ ಜಗತ್ತಿನ ಒಂದು ಮಹಾಕೌತುಕ. ಇದು ಪ್ರಪಂಚದ ಅತೀ ದೊಡ್ಡ ಧಾರ್ಮಿಕ ಮೇಳವಾಗಿದೆ. ತ್ರಿವೇಣಿ ಸಂಗಮದಲ್ಲಿ ಪವಿತ್ರ ಸ್ನಾನಕ್ಕಾಗಿ ದೇಶ-ವಿದೇಶಗಳಿಂದ ಕೋಟ್ಯಂತರ ಸನಾತನ ಧರ್ಮೀ ಯರು ಅತ್ಯಂತ ಧರ್ಮಶ್ರದ್ಧೆಯಿಂದ ಭಾಗವಹಿಸುತ್ತಿದ್ದಾರೆ. ನಮ್ಮ ಆಯುರ್ಮಾನದಲ್ಲಿ ಇದು ಘಟಿಸುತ್ತಿದೆ ಎಂಬುದೇ ಸಮಸ್ತ ಭಾರತೀಯ ರಿಗೆ ದೊಡ್ಡ ಹೆಮ್ಮೆಯಾಗಿದೆ ಎಂದು ಪೇಜಾವರಶ್ರೀಗಳು ಹೇಳಿಕೆಯಲ್ಲಿ ತಿಳಿಸಿದ್ದಾರೆ.
40 ದಿನಗಳ ಈ ಉತ್ಸವದ ಅದ್ಭುತ ಯಶಸ್ಸಿಗಾಗಿ ಗಣ್ಯಾತಿಗಣ್ಯರಿಂದ ಮೊದಲ್ಗೊಂಡು ಕಾರ್ಮಿಕರವರೆಗೆ ಲಕ್ಷಾಂತರ ಜನ ಹಗಲಿರುಳೂ ಶ್ರಮಿಸುತ್ತಿದ್ದಾರೆ. ಸುಮಾರು 50 ಕೋಟಿಯಷ್ಟು ಜನ ಇದರಲ್ಲಿ ಭಾಗವ ಹಿಸುವ ನಿರೀಕ್ಷೆ ಇದೆ. ಇದರ ಯಶಸ್ಸು ಒಂದು ಮಹಾ ಸವಾಲು. ಮನುಷ್ಯ ಪ್ರಯತ್ನ ಮತ್ತು ಭಗವಂತನ ಅನುಗ್ರಹದಿಂದ ಈ ಮಹೋತ್ಸವ ಯಾರೊಬ್ಬ ರಿಗೂ ಯಾವೊಂದು ರೀತಿಯ ತೊಂದರೆ, ವಿಘ್ನ, ಹಾನಿಗಳೂ ಇಲ್ಲದೇ ಅತ್ಯಂತ ಯಶಸ್ವಿಯಾಗಬೇಕು. ಆ ಯಶಸ್ಸಿನಿಂದ ಇಡೀ ದೇಶದಲ್ಲಿ ಶಾಂತಿ ಸುಭಿಕ್ಷೆ ಸುರಕ್ಷೆ ಸಮೃದ್ಧಿಗಳು ನೆಲೆಯಾಗಬೇಕು ಎಂದವರು ಹೇಳಿದ್ದಾರೆ.
ಇದಕ್ಕಾಗಿ ದೇವರಲ್ಲಿ ಪ್ರಾರ್ಥಿಸುವುದು ಸಮಸ್ತ ಹಿಂದುಗಳಿಗೂ ಒಂದು ಪವಿತ್ರ ಕರ್ತವ್ಯವಾಗಿದೆ. ಆದ್ದರಿಂದ ನಾಡಿನ ಎಲ್ಲ ಮಠಾಧೀಶರು ಸಾಧು ಸಂತರು , ದೇವಳಗಳ ಅರ್ಚಕರು, ವೈದಿಕ ವಿದ್ವಾಂಸರು ಹಾಗೂ ಕೋಟ್ಯಂತರ ಹಿಂದುಗಳು ತಮ್ಮ ಮನೆ ಮಠ ಮಂದಿರಗಳಲ್ಲಿ ಮಹಾಕುಂಭ ಮೇಳದ ಯಶಸ್ಸಿಗಾಗಿ ಪ್ರಾರ್ಥಿಸೋಣ ಎಂದು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.