ಉಡುಪಿ ಜಿಲ್ಲಾಧಿಕಾರಿಗೆ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಪ್ರಶಸ್ತಿ

Update: 2022-03-02 14:42 GMT

ಉಡುಪಿ, ಮಾ.2: ಉಡುಪಿಯ ಜಿಲ್ಲಾಧಿಕಾರಿ ಹಾಗೂ ಜಿಲ್ಲಾ ದಂಡಾಧಿಕಾರಿಯಾಗಿರುವ ಕೂರ್ಮಾ ರಾವ್ ಎಂ. ಇವರಿಗೆ ಜಿಲ್ಲೆಯಲ್ಲಿ ಮಕ್ಕಳ ಹಕ್ಕುಗಳ ರಕ್ಷಣೆಗಾಗಿ ರಾಷ್ಟ್ರೀಯ ಮಕ್ಕಳ ಹಕ್ಕುಗಳ ಸಂರಕ್ಷಣಾ ಆಯೋಗ ನೀಡುವ ರಾಷ್ಟ್ರೀಯ ಪ್ರಶಸ್ತಿಯನ್ನು ನೀಡಿ ಗೌರವಿಸಲಾಗಿದೆ.

ಹೊಸದಿಲ್ಲಿಯ ವಿಜ್ಞಾನ ಭವನದಲ್ಲಿ ಬುಧವಾರ ನಡೆದ ಸಮಾರಂಭದಲ್ಲಿ ಉಡುಪಿ ಜಿಲ್ಲಾ ನೆಹರೂ ಯುವ ಕೇಂದ್ರದ ಯೋಜನಾಧಿಕಾರಿ ವಿಲ್ಪ್ರೆಡ್ ಡಿಸೋಜ ಅವರು ಸ್ವೀಕರಿಸಿದರು. ಮಕ್ಕಳ ಹಕ್ಕುಗಳ ರಕ್ಷಣೆಯಲ್ಲಿ ಉಡುಪಿ ಜಿಲ್ಲೆಯನ್ನು ‘ಅತ್ಯುತ್ತಮ ಸಾಧನೆ ತೋರಿದ ಜಿಲ್ಲೆ’ ಎಂದು ಘೋಷಿಸಲಾಗಿದೆ.

2021ರ ಜುಲೈ ತಿಂಗಳಿನಿಂದ ಡಿಸೆಂಬರ್‌ವರೆಗಿನ ಅವಧಿಯಲ್ಲಿ ಉಡುಪಿ ಜಿಲ್ಲೆ, ಮಕ್ಕಳಲ್ಲಿ ಮಾದಕ ಔಷಧಗಳ ಬಳಕೆ ಹಾಗೂ ಅಕ್ರಮ ಮಾನವ ಕಳ್ಳಸಾಗಾಣಿಕೆ ತಡೆಯುವಲ್ಲಿ ತೋರಿದ ಅತ್ಯುತ್ತಮ ಜಂಟಿ ಕಾರ್ಯ ಸಾಧನೆಗಾಗಿ ಈ ಪ್ರಶಸ್ತಿಯನ್ನು ನೀಡಲಾಗಿದೆ.

ಈ ಸಾಧನೆಗಾಗಿ ರಾಷ್ಟ್ರಮಟ್ಟದಲ್ಲಿ ಆಯ್ಕೆ ಮಾಡಲಾದ ದೇಶದ 20 ಅಗ್ರಗಣ್ಯ ಜಿಲ್ಲೆಗಳಲ್ಲಿ ಉಡುಪಿ ಸಹ ಒಂದು. ಈ ಪ್ರತಿಷ್ಠಿತ ಪ್ರಶಸ್ತಿಗಾಗಿ ಆಯ್ಕೆಯಾದ ಕರ್ನಾಟಕದ ಏಕೈಕ ಜಿಲ್ಲೆ ಉಡುಪಿಯಾಗಿದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News