ಸಂಸ್ಕೃತ ಸಾಹಿತ್ಯ ಜೀವನ ಮೌಲ್ಯವನ್ನು ಬೋಧಿಸುತ್ತದೆ: ಅದಮಾರುಶ್ರೀ
ಉಡುಪಿ : ಕಡಿಮೆ ಪದಗಳಲ್ಲಿ ಬಹ್ವರ್ಥಗಳನ್ನು, ಬಹುವಿಚಾರ ಗಳನ್ನು ನಿರೂಪಿಸುವ ಭಾಷೆ ಸಂಸ್ಕೃತ ಭಾಷೆ ಎಂದು ಅದಮಾರು ಮಠದ ಶ್ರೀ ಈಶಪ್ರಿಯ ತೀರ್ಥರು ಹೇಳಿದ್ದಾರೆ.
ಮಂಗಳವಾರ ಉಡುಪಿಯ ಪೂರ್ಣಪ್ರಜ್ಞ ಕಾಲೇಜಿನ ಸಹಯೋಗದಲ್ಲಿ ಮಂಗಳೂರು ವಿವಿ ಸಂಸ್ಕೃತ ಶಿಕ್ಷಕ ಸಂಘವು ಆಯೋಜಿಸಿದ ಪದವಿ ತರಗತಿಗಳ ಸಂಸ್ಕೃತ ಪಾಠ್ಯ ವಿಷಯಗಳ ಕಾರ್ಯಾಗಾರವನ್ನು ಉದ್ಘಾಟಿಸಿ ಆಶೀರ್ವಚನ ನೀಡಿ ಮಾತನಾಡುತಿದ್ದರು.
‘ಶಾಲಾಕಾಲೇಜುಗಳ ಪಠ್ಯ ಪುಸ್ತಕಗಳು ವಿದ್ಯಾರ್ಥಿಗಳಲ್ಲಿ ಸಂಸ್ಕೃತ ಭಾಷೆಯ ಬಗ್ಗೆ ಒಲವನ್ನೂ ಅಭಿಮಾನವನ್ನೂ ಮೂಡಿಸುವ ಕೆಲಸ ಮಾಡಬೇಕು. ಸಂಸ್ಕೃತ ದಲ್ಲೇ ಹೆಚ್ಚೆಚ್ಚು ಯೋಚನೆ ಮಾಡುವ ಮೂಲಕ, ಮಾತನಾಡುವ ಮೂಲಕ ಸತತ ಪರಿಶ್ರಮದಿಂದ ದೇವಭಾಷೆಯನ್ನು ಉಳಿಸಬಹುದು’ ಎಂದು ಸ್ವಾಮೀಜಿ ನುಡಿದರು.
ಮುಖ್ಯ ಅತಿಥಿಗಳಾಗಿ ಭಾಗವಹಿಸಿದ್ದ ಉಪೇಂದ್ರ ಪೈ ಮೆಮೋರಿಯಲ್ ಕಾಲೇಜಿನ ಪ್ರಾಂಶುಪಾಲರಾದ ಡಾ.ಮಧುಸೂದನ ಭಟ್ ಮಾತನಾಡಿ, ‘ಸಂಸ್ಕೃತ ಸಾಹಿತ್ಯವು ಜೀವನ ಮೌಲ್ಯವನ್ನು ಬೋಧಿಸುತ್ತದೆ. ಮಾತ್ರವಲ್ಲ ಎಲ್ಲರೂ ಸಂಸ್ಕೃತದ ಪದಗಳನ್ನು ತಮ್ಮ ನಿತ್ಯದ ಆಡುಭಾಷೆಯಲ್ಲಿ ತಿಳಿದೋ ತಿಳಿಯದೆಯೋ ಬಳಸುತ್ತಿದ್ದಾರೆ. ಹೀಗಾಗಿ ಸಂಸ್ಕೃತವು ವ್ಯವಹಾರ ಭಾಷೆಯಲ್ಲ ಎಂಬ ಅಭಿಪ್ರಾಯ ಸರಿಯಲ್ಲ’ ಎಂದು ಹೇಳಿದರು.
ಮಂಗಳೂರು ವಿವಿ ಸಂಸ್ಕೃತ ಶಿಕ್ಷಕರ ಸಂಘದ ಅಧ್ಯಕ್ಷ ಡಾ.ರಮೇಶ್ ಟಿ. ಎಸ್. ಅತಿಥಿಗಳನ್ನು ಸ್ವಾಗತಿಸಿ ಪ್ರಾಸ್ತಾವಿಕವಾಗಿ ಮಾತನಾಡಿ, ಮಂಗಳೂರು ವಿವಿಯ ಸಂಸ್ಕೃತದ ಶೇ.೮೦ರಷ್ಟು ಪಾಠಗಳು ರಾಜ್ಯ ಸಮಿತಿಯಿಂದ ಸ್ವೀಕೃತ ವಾಗಿವೆ ಎಂದರು.
ಇದೇ ಸಂದರ್ಭದಲ್ಲಿ ಸೇವಾನಿವೃತ್ತಿ ಹೊಂದಿದ ಪ್ರೊ.ಜಯರಾಮ ಬಿ., ಪ್ರೊ. ಲೀಲಾವತಿ ಬಾಯಿ, ಡಾಕ್ಟರೇಟ್ ಪದವಿ ಪಡೆದ ಡಾ.ವಸುಮತಿ ಭಟ್, ಡಾ. ವಿಜಯಲಕ್ಷ್ಮಿ ಎಂ. ಹಾಗೂ ಅಂಬಿಕಾ ಪದವಿ ಕಾಲೇಜಿನ ಪ್ರಾಂಶುಪಾಲರಾಗಿ ನಿಯುಕ್ತರಾದ ಡಾ. ವಿನಾಯಕ ಭಟ್ ಗಾಳಿಮನೆ ಇವರನ್ನು ಸಮ್ಮಾನಿಸ ಲಾಯಿತು.
ಪೂರ್ಣಪ್ರಜ್ಞ ಕಾಲೇಜಿನ ಪ್ರಾಂಶುಪಾಲ ಡಾ. ರಾಘವೇಂದ್ರ ಎ. ಅಧ್ಯಕ್ಷತೆ ವಹಿಸಿದ್ದರು. ಮಂಗಳೂರು ವಿವಿ ಸಂಸ್ಕೃತ ಶಿಕ್ಷಕರ ಸಂಘದ ಕಾರ್ಯದರ್ಶಿ ಡಾ. ಮಂಜುನಾಥ ಭಟ್ ವಂದಿಸಿ, ಡಾ.ಆನಂದ ಆಚಾರ್ಯ ಕಾರ್ಯಕ್ರಮ ನಿರೂಪಿಸಿದರು.