ಶಕ್ತಿ ಶಿಕ್ಷಣ ಸಂಸ್ಥೆಯಲ್ಲಿ ರಾಜ್ಯಮಟ್ಟದ ಕಲಿಕಾ ಚೇತರಿಕೆ ತರಬೇತಿ ಕಾರ್ಯಕ್ರಮ ಉದ್ಘಾಟನೆ
ಮಂಗಳೂರು : ಕೋವಿಡ್ ನಿಂದಾಗಿ ರಾಜ್ಯದ ಎಲ್ಲಾ ಶಾಲೆಗಳಲ್ಲಿ ಭೌತಿಕವಾಗಿ ತರಗತಿಗಳು ನಿರಂತರವಾಗಿ ನಡೆಯದ ಕಾರಣ ವಿದ್ಯಾರ್ಥಿಗಳ ಕಲಿಕೆಯ ಮೇಲೆ ಪ್ರತಿಕೂಲ ಪರಿಣಾಮ ಬೀರಿರುವುದರಿಂದ ಶಾಲೆಗಳಲ್ಲಿ ವ್ಯವಸ್ಥಿತ ಬೋಧನಾ ಕಲಿಕಾ ಪ್ರಕ್ರಿಯೆಗಳ ಹಿನ್ನಡೆಯಿಂದಾಗಿ ಉಂಟಾಗಿರುವ ಕಲಿಕಾ ಅಂತರವನ್ನು ಸರಿದೂಗಿಸಲು ಮತ್ತು ವಿದ್ಯಾರ್ಥಿಗಳ ಮುಂದಿನ ಶೈಕ್ಷಣಿಕ ಪ್ರಕ್ರಿಯೆ ಸುಗಮವಾಗಿಸಲು ಸಮಗ್ರ ಶಿಕ್ಷಣ-ಕರ್ನಾಟಕ, ಡಿಎಸ್‍ಇಆರ್.ಟಿ, ಬೆಂಗಳೂರು, ಸಾರ್ವಜನಿಕ ಶಿಕ್ಷಣ ಇಲಾಖೆ, ದ.ಕ ಹಾಗೂ ಅಜೀಂ ಪ್ರೇಮ್‍ಜೀ ಫೌಂಡೆಷನ್‍ನ ಸಹಯೋಗದೊಂದಿಗೆ 1 ರಿಂದ 9ನೇ ತರಗತಿಗಳ ವಿದ್ಯಾರ್ಥಿಗಳ ಕಲಿಕೆಗೆ ಚೇತರಿಕೆ ನೀಡಲು 2022-23ನೇ ಶೈಕ್ಷಣಿಕ ವರ್ಷದಲ್ಲಿ ಕಲಿಕಾ ಚೇತರಿಕೆ ಕಾರ್ಯಕ್ರಮವನ್ನು ಅಳವಡಿಸಿದೆ.
ಈ ಕಾರ್ಯಕ್ರಮದ ಅಡಿಯಲ್ಲಿ ರಾಜ್ಯದ ಸುಮಾರು 10 ಜಿಲ್ಲೆಗಳಲ್ಲಿ ವಿವಿಧ ವಿಷಯಗಳ ರಾಜ್ಯ ಮಟ್ಟದ ಸಂಪನ್ಮೂಲ ವ್ಯಕ್ತಿಗಳಿಗೆ ತರಬೇತಿಯನ್ನು ಆಯೋಜಿಸಲಾಗಿದೆ. ಇದರ ಭಾಗವಾಗಿ ಇಂಗ್ಲೀಷ್ ವಿಷಯದ ತರಬೇತಿಯು ಸಾರ್ವಜನಿಕ ಶಿಕ್ಷಣ ಇಲಾಖೆ ಮತ್ತು ಡಯಟ್, ಮಂಗಳೂರು ಇದರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಶಕ್ತಿ ರೆಸಿಡೆನ್ಶಿಯಲ್ ಶಾಲೆ ಶಕ್ತಿನಗರ ಇಲ್ಲಿ ರಾಜ್ಯಮಟ್ಟದ ತರಬೇತಿ ದಿನಾಂಕ: 06/04/2022 ರಿಂದ 08/04/2022 ರವರೆಗೆ ಮೂರು ದಿನಗಳ ಕಾಲ ನಡೆಯಲಿದೆ.
ಇದರ ಉದ್ಘಾಟಣೆಯನ್ನು ಸುಪ್ರಿಯನ್ ಮೊಂತೆರೊ ಜಂಟಿ ನಿರ್ದೇಶಕರು ಮತ್ತು ಪ್ರಾಂಶುಪಾಲರು ಸರ್ಕಾರಿ ಶಿಕ್ಷಕ ಶಿಕ್ಷಣ ಮಹಾವಿದ್ಯಾಲಯ ಮಂಗಳೂರು ಇವರು ನೆರವೇರಿಸಿದರು. ನಂತರ ಮಾತನಾಡಿದ ಇವರು ಕಲಿಕಾ ಚೇತರಿಕೆ ತರಬೇತಿಯ ಮೂಲಕ ರಾಜ್ಯದ ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸಿಕೊಡುವ ಉದ್ದೇಶದೊಂದಿಗೆ ಈ ತರಬೇತಿಯನ್ನು ಆಯೋಜಿಸಲಾಗಿದೆ. ಇದರಲ್ಲಿ ಎಲ್ಲರು ಸಮಯಕ್ಕೆ ಸರಿಯಾಗಿ ಭಾಗವಹಿಸಬೇಕೆಂದು ಕರೆ ನೀಡಿದರು. ಈ ಮೂಲಕ ಇಲ್ಲಿ ಪಡೆದ ಶಿಕ್ಷಣವನ್ನು ನಮ್ಮ ನಮ್ಮ ಜಿಲ್ಲೆಯಲ್ಲಿ ಇತರೆ ಸಂಪನ್ಮೂಲ ವ್ಯಕ್ತಿಗಳಿಗೆ ತರಭೇತಿ ನೀಡುವುದರ ಮೂಲಕ ಯಶಸ್ವಿಗೊಳಿಸಬೇಕೆಂದು ಹೇಳಿದರು.
ದ.ಕ ಜಿಲ್ಲಾ ಪ್ರೌಢಶಾಲಾ ಸಹ ಶಿಕ್ಷಕರ ಸಂಘದ ಅಧ್ಯಕ್ಷರಾದ ಸ್ಟಾನೀ ತಾವೋರ ಮಾತನಾಡಿ ಕಲಿಕಾ ತರಬೇತಿಯು ವಿದ್ಯಾರ್ಥಿ ಸಮುದಾಯಕ್ಕೆ ಹೆಚ್ಚು ಅನುಕೂಲವಾಗಬೇಕೆಂದು ಹೇಳಿದರು. ಶಕ್ತಿ ಸಂಸ್ಥೆಯ ಪ್ರಧಾನ ಸಲಹೆಗಾರ ರಮೇಶ ಕೆ. ಮಾತನಾಡಿ ಕೊರೊನದ ಕಾಲಘಟ್ಟದಲ್ಲಿ ವಿದ್ಯಾರ್ಥಿಗಳು ಭೌತಿಕ ತರಗತಿಯಿಂದ ದೂರವಿದ್ದುದರಿಂದ ಕಲಿಕಾ ವಿಧಾನದಿಂದ ಅಂತರವನ್ನು ಕಾಪಾಡಿಕೊಂಡಿದ್ದರು. ಅದನ್ನು ಸರಿಪಡಿಸಲು ಇಂತಹ ತರಬೇತಿಯು ಹೆಚ್ಚು ಹೆಚ್ಚು ನಡೆಯಬೇಕೆಂದು ಹೇಳಿದರು. ಇದು ವಿದ್ಯಾರ್ಥಿಗಳಿಗೆ ಅನುಕೂಲವಾಗುತ್ತದೆ. ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ ಸುಧಾಕರ.ಕೆ ವಿದ್ಯಾಂಗ ಉಪ ನಿರ್ದೇಶಕರು(ಆಡಳಿತ)ಇವರು ಮಾತನಾಡಿ ರಾಜ್ಯದ 34 ಜಿಲ್ಲೆಯಿಂದ ಆಗಮಿಸಿದ ಪ್ರತಿನಿಧಿಗಳು 3 ದಿನಗಳ ಕಾಲ ಇದನ್ನು ಸದುಪಯೋಗ ಪಡಿಸಿಕೊಳ್ಳಬೇಕು. ಬೇರೆ ಬೇರೆ ಜಿಲ್ಲೆಯಲ್ಲಿ ಇಂತಹ ತರಬೇತಿಯನ್ನು ಆಯೋಜಿಸುವ ಮೂಲಕ ವಿದ್ಯಾರ್ಥಿಗಳ ಕಲಿಕಾ ಸಾಮಥ್ರ್ಯವನ್ನು ಹೆಚ್ಚಿಸಬೇಕು. ಪ್ರತಿ ತರಗತಿಯಲ್ಲಿಯೂ ವಿದ್ಯಾರ್ಥಿಗಳಿಗೆ ಹೊಸತನವನ್ನು ಕಲಿಸಿಕೊಡಬೇಕೆಂದು ಹೇಳಿದರು.
ರಾಜಲಕ್ಷ್ಮೀ ಉಪ ನಿರ್ದೇಶಕರು(ಅಭಿವೃದ್ಧಿ) ಹಾಗೂ ಪ್ರಾಂಶುಪಾಲರು ಡಯಟ್ ಮಂಗಳೂರು ಇವರು ಕಲಿಕಾ ಚೇತರಿಕೆ ಬಗ್ಗೆ ಪ್ರಸ್ತಾವಿಕ ನುಡಿಗಳನ್ನು ನುಡಿದು ಸ್ವಾಗತಿಸಿದರು. ಒಟ್ಟು ರಾಜ್ಯದ 34 ಶೈಕ್ಷಣಿಕ ಜಿಲ್ಲೆಯಿಂದ 194 ಸಂಪನ್ಮೂಲ ವ್ಯಕ್ತಿಗಳು ಭಾಗವಹಿಸಿದರು.
ವೇದಿಕೆಯಲ್ಲಿ ಅಜೀಂ ಪ್ರೇಮ್‍ಜೀ ಫೌಂಡೆಷನ್‍ನ ರಾಮಚಂದ್ರ ಗಿರಿ, , ಶಕ್ತಿ ಪದವಿ ಪೂರ್ವ ಕಾಲೇಜುನ ಪ್ರಾಂಶುಪಾಲರಾದ ಪೃಥ್ವಿರಾಜ್, ಅಭಿವೃದ್ಧಿ ಅಧಿಕಾರಿ ಪ್ರಖ್ಯಾತ್ ರೈ, ಶಕ್ತಿ ರೆಸಿಡೆನ್ಶಿಯಲ್ ಶಾಲೆಯ ಪ್ರಾಂಶುಪಾಲೆ ವಿದ್ಯಾ ಜಿ. ಕಾಮತ್, ಡಯಟ್ ಮಂಗಳೂರು ಇಲ್ಲಿನ ಹಿರಿಯ ಉಪನ್ಯಾಸಕಿ ಬಬಿತಾ, ಉಪನ್ಯಾಸಕಿ ಸುಮಂಗಲ ನಾಯಕ್, ಶಂಕರಪ್ಪ, ಸವಿತಾ ನಾಯಕ್ ಮತ್ತು ವೇದಾವತಿ ಉಪಸ್ಥಿತರಿದ್ದರು.
ಉಪನ್ಯಾಸಕರಾದ ಗುರುರಾಜ್ ವಂದಿಸಿದರು. ಕಾರ್ಯಕ್ರಮದ ನೋಡಲ್ ಗೀತಾ ಶೆಟ್ಟಿ ಇವರು ಕಾರ್ಯಕ್ರಮವನ್ನು ನಿರೂಪಿಸಿದರು.