ಮುಂಬೈ:ದುಷ್ಕರ್ಮಿಗಳಿಂದ ನಿಲ್ಲಿಸಿದ್ದ ವಾಹನಗಳ ಧ್ವಂಸ: ಕೋಮು ಸೌಹಾರ್ದತೆಗೆ ಕರೆ ನೀಡಿದ ಗೃಹ ಸಚಿವ
ಮುಂಬೈ: ಕೆಲವು ಅಪರಿಚಿತ ದುಷ್ಕರ್ಮಿಗಳು ರವಿವಾರ ರಾತ್ರಿ ನಿಲ್ಲಿಸಿದ್ದ ವಾಹನಗಳನ್ನು ಧ್ವಂಸಗೊಳಿಸಿದ ನಂತರ ಮತ್ತೆ ಯಾವುದೇ ಅಹಿತಕರ ಘಟನೆ ನಡೆಯದಂತೆ ಮುಂಬೈ ಪೊಲೀಸರು ಉಪ ನಗರ ಮಾನ್ ಖುರ್ದ್ ನಲ್ಲಿ ಭಾರೀ ಭದ್ರತೆಯನ್ನು ನಿಯೋಜಿಸಿದ್ದಾರೆ.
ಹಿಂಸಾತ್ಮಕ ದಾಳಿಯಲ್ಲಿ ಕಾರುಗಳು, ದ್ವಿಚಕ್ರ ವಾಹನಗಳು ಹಾಗೂ ಆಟೋಗಳು ಸೇರಿದಂತೆ ಕನಿಷ್ಠ ಇಪ್ಪತ್ತೈದು ವಾಹನಗಳು ಹಾನಿಗೊಳಗಾಗಿವೆ.
"ಅಪರಾಧಿಗಳ ಗುರುತು ಹಾಗೂ ದಾಳಿಯ ಹಿಂದಿನ ಕಾರಣವನ್ನು ಖಚಿತಪಡಿಸಿಕೊಳ್ಳಲು ತನಿಖೆ ನಡೆಯುತ್ತಿದೆ" ಎಂದು ಪೊಲೀಸರು ತಿಳಿಸಿದ್ದಾರೆ.
ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದ್ದು, ಗುಂಪೊಂದು ರಾಡ್ ಹಾಗೂ ತಲ್ವಾರ್ ಗಳಿಂದ ವಾಹನಗಳನ್ನು ಧ್ವಂಸಗೊಳಿಸುತ್ತಿರುವುದು ಕಂಡುಬಂದಿದೆ.
ಮುಂಬೈ ಪೊಲೀಸ್ ಕಮಿಷನರ್ ಸಂಜಯ್ ಪಾಂಡೆ, ಜಂಟಿ ಪೊಲೀಸ್ ಆಯುಕ್ತ (ಕಾನೂನು ಮತ್ತು ಸುವ್ಯವಸ್ಥೆ) ವಿಶ್ವಾಸ್ ನಂಗ್ರೆ ಪಾಟೀಲ್ ಹಾಗೂ ಇತರ ಹಿರಿಯ ಅಧಿಕಾರಿಗಳು ಇಂದು ಬೆಳಿಗ್ಗೆ ಘಟನಾ ಸ್ಥಳಕ್ಕೆ ಭೇಟಿ ನೀಡಿದರು.
ಸಾಮಾಜಿಕ ಮಾಧ್ಯಮಗಳಲ್ಲಿ ಹರಡುತ್ತಿರುವ ವದಂತಿಗಳು ಹಾಗೂ ನಕಲಿ ವೀಡಿಯೊಗಳನ್ನು ನಂಬಬೇಡಿ ಎಂದು ಪೊಲೀಸರು ಜನರನ್ನು ಕೇಳಿಕೊಂಡಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ
ಘಟನೆಯ ಕುರಿತು ಪ್ರತಿಕ್ರಿಯಿಸಿದ ಮಹಾರಾಷ್ಟ್ರ ಗೃಹ ಸಚಿವ ದಿಲೀಪ್ ವಾಲ್ಸೆ ಪಾಟೀಲ್, ಎಲ್ಲಾ ಸಮುದಾಯಗಳ ಜನರು ಶಾಂತಿ ಹಾಗೂ ಸೌಹಾರ್ದತೆಯನ್ನು ಕಾಪಾಡುವಂತೆ ಹಾಗೂ ರಾಜ್ಯದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಕಾಪಾಡುವಲ್ಲಿ ಪೊಲೀಸರಿಗೆ ಸಹಾಯ ಮಾಡುವಂತೆ ಒತ್ತಾಯಿಸಿದರು.
ಕೆಲವು ರಾಜಕೀಯ ಪಕ್ಷಗಳ ಸದಸ್ಯರು ಪ್ರಚೋದನಕಾರಿ ಹೇಳಿಕೆಗಳನ್ನು ನೀಡುತ್ತಿದ್ದು, ಇದು ಹಿಂದೂ-ಮುಸ್ಲಿಂರ ನಡುವೆ ದ್ವೇಷವನ್ನು ಹೆಚ್ಚಿಸಬಹುದು. ರಾಜ್ಯದಲ್ಲಿ ಕೋಮುಗಲಭೆಗಳನ್ನು ಪ್ರಚೋದಿಸುವವರ ವಿರುದ್ಧ ಸೂಕ್ತ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಪಾಟೀಲ್ ಭರವಸೆ ನೀಡಿದರು
ಮಹಾರಾಷ್ಟ್ರ ನವನಿರ್ಮಾಣ ಸೇನೆ (ಎಂಎನ್‌ಎಸ್) ಅಧ್ಯಕ್ಷ ರಾಜ್ ಠಾಕ್ರೆ ಕಳೆದ ವಾರ ಮುಂಬೈನಲ್ಲಿ ನಡೆದ ರ್ಯಾಲಿಯಲ್ಲಿ ಮಸೀದಿಗಳಲ್ಲಿ ಆಝಾನ್ ಮೊಳಗಿಸುವುದನ್ನು ನಿಷೇಧಿಸುವಂತೆ ಒತ್ತಾಯಿಸಿ ಹೇಳಿಕೆ ನೀಡಿದ ನಂತರ ವಿವಾದ ಭುಗಿಲೆದ್ದಿದೆ.