ಅಂಗಡಿಗಳಲ್ಲಿನ ವಸ್ತುಗಳನ್ನು ನೀವು ಖರೀದಿಸುವಂತೆ ಮಾಡಲು ನಿಮ್ಮದೇ ʼಸೈಕಾಲಜಿʼ ಬಳಸುವುದು ಹೇಗೆ ಗೊತ್ತೇ?

Update: 2022-04-11 15:22 GMT

ವಸ್ತುವೊಂದು ನಿಮಗೆ ಅಗತ್ಯವಾಗಿದ್ದಾಗ ಮಾತ್ರ ಅದನ್ನು ಖರೀದಿಸುತ್ತೀರಿ ಎಂದು ನೀವು ಭಾವಿಸಬಹುದು. ಆದರೆ ನೀವು ಆಹಾರ,ಬಟ್ಟೆಗಳು ಅಥವಾ ವಿದ್ಯುನ್ಮಾನ ಸಾಧನಗಳು...ಹೀಗೆ ಏನನ್ನೇ ಆದರೂ ನೀವು ಖರೀದಿಸುತ್ತಿರುವಾಗ ಚಿಲ್ಲರೆ ಮಾರಾಟ ಮಳಿಗೆಗಳು ನಿಮ್ಮ ನಿರ್ಧಾರಗಳ ಮೇಲೆ ಪ್ರಭಾವ ಬೀರಲು ಮನೋವಿಜ್ಞಾನದ ಮನವೊಲಿಸುವ ಶಕ್ತಿಯನ್ನು ಬಳಸುತ್ತಾರೆ.

ನೀವು ನಿಮ್ಮ ನೆನಪುಗಳನ್ನು ಕೆದಕಿದರೆ ನೀವು ಯಾವಾಗಲೂ ಹೋಗುತ್ತಿದ್ದ ಕಿರಾಣಿ ಅಂಗಡಿಯ ವಿನ್ಯಾಸ ದಿಢೀರ್ ಆಗಿ ಬದಲಾಗಿದ್ದು ನಿಮ್ಮ ಜ್ಞಾಪಕಕ್ಕೆ ಬರಬಹುದು. ಟಾಯ್ಲೆಟ್ ಪೇಪರ್ ಅದು ಯಾವಾಗಲೂ ಇರುತ್ತಿದ್ದ ಜಾಗದಲ್ಲಿ ಕಂಡಿಲ್ಲವಾಗಿರಬಹುದು ಆಥವಾ ಟೊಮೆಟೊ ಕೆಚಪ್ ಹುಡುಕಲು ನೀವು ಪರದಾಡಿರಬಹುದು.
       
ಮಳಿಗೆಗಳು ಆಗಾಗ್ಗೆ ಬದಲಾವಣೆಗಳನ್ನೇಕೆ ಇಷ್ಟ ಪಡುತ್ತವೆ?

ಇದಕ್ಕೆ ಉತ್ತರ ಸರಳವಾಗಿದೆ. ವಸ್ತುಗಳ ಸ್ಥಳ ಬದಲಾವಣೆಯಿಂದ ನಾವು ನಮಗೆ ಬೇಕಾದ ವಸ್ತುವನ್ನು ಹುಡುಕಲು ಇಡೀ ಮಳಿಗೆಯಲ್ಲಿ ಸುತ್ತು ಹೊಡೆಯುವದರಿಂದ ಅಲ್ಲಿರುವ ವಿವಿಧ ವಸ್ತುಗಳು ನಮ್ಮ ಕಣ್ಣಿಗೆ ಬೀಳುತ್ತವೆ. ಮಳಿಗೆಯಲ್ಲಿ ಹೆಚ್ಚಿನ ಸಮಯವನ್ನು ಕಳೆಯುವಾಗ ಹಲವೊಮ್ಮೆ ಪ್ರಚೋದನೆಗೊಳಪಟ್ಟು ಹೆಚ್ಚುವರಿ ಸಾಮಗ್ರಿಗಳನ್ನು ನಮ್ಮ ಬಾಸ್ಕೆಟ್ಗೆ ತುಂಬಿಸುವುದರಿಂದ ಈ ತಂತ್ರ ಹಲವೊಮ್ಮೆ ನಾವು ಯೋಜಿಸಿರದ ವೆಚ್ಚವನ್ನು ಗಣನೀಯವಾಗಿ ಹೆಚ್ಚಿಸುತ್ತದೆ.
                
ಪ್ರಚೋದನೆಯಿಂದಾಗಿ ಖರೀದಿ

ವಾಸ್ತವದಲ್ಲಿ ಎಲ್ಲ ಕಿರಾಣಿ ಸಾಮಗ್ರಿಗಳ ಶೇ.50ರಷ್ಟು ಪ್ರಚೋದನೆಯಿಂದ ಮಾರಾಟಗೊಳ್ಳುತ್ತವೆ ಮತ್ತು ಶೇ.87ಕ್ಕೂ ಅಧಿಕ ಬಳಕೆದಾರರು ಪ್ರಚೋದನೆಗೆ ಒಳಪಟ್ಟು ಖರೀದಿಗಳನ್ನು ಮಾಡುತ್ತಾರೆ ಎನ್ನುವುದನ್ನು ಅಧ್ಯಯನಗಳು ತೋರಿಸಿವೆ. ‘ಒಂದನ್ನು ಖರೀದಿಸಿ ಒಂದನ್ನು ಉಚಿತವಾಗಿ ಪಡೆಯಿರಿ ’ ಎಂಬಂತಹ ಕೊಡುಗೆಗಳು, ರಿಯಾಯಿತಿಗಳು ಮತ್ತು ಮಳಿಗೆಯಲ್ಲಿನ ಪ್ರಚಾರಾರ್ಥ ಪ್ರದರ್ಶನಗಳು ನಮ್ಮನ್ನು ಹೆಚ್ಚುವರಿ ಖರೀದಿಗೆ ಪ್ರಚೋದಿಸುವಲ್ಲಿ ಪ್ರಮುಖ ಪಾತ್ರವನ್ನು ಹೊಂದಿರುತ್ತವೆ.

ಆಕರ್ಷಕ ಕೊಡುಗೆಯು ತಾತ್ಕಾಲಿಕ ಸಂತಸವನ್ನುಂಟು ಮಾಡುತ್ತದೆ ಮತ್ತು ಇದು ನಾವು ಸಮಂಜಸವಾದ ಖರೀದಿ ನಿರ್ಧಾರ ಮಾಡುವುದನ್ನು ಕಷ್ಟಕರವಾಗಿಸುತ್ತದೆ. ಆಹಾ,ಇದನ್ನು ಖರೀದಿಸಿದರೆ ಉಳಿತಾಯವಾಗುತ್ತದೆ ಎಂಬ ಲೆಕ್ಕಾಚಾರದಲ್ಲಿ ವಸ್ತುವನ್ನು ಖರೀದಿಸುವಾಗ ನಮಗೆ ನಿಜವಾಗಿ ಇದು ಅಗತ್ಯವಿದೆಯೇ ಎನ್ನುವುದನ್ನು ಯೋಚಿಸುವುದನ್ನೇ ನಾವು ಮರೆಯುತ್ತೇವೆ.

ಬಂಡ್ಲಿಂಗ್ ಎನ್ನುವುದು ಗ್ರಾಹಕರನ್ನು ಖರೀದಿಗೆ ಪ್ರಚೋದಿಸಲು ರಿಟೇಲರ್ಗಳು ಬಳಸುವ ಇನ್ನೊಂದು ತಂತ್ರವಾಗಿದೆ. ಪೂರಕ ಉತ್ಪನ್ನಗಳನ್ನು ಒಂದೇ ಉತ್ಪನ್ನವಾಗಿ ಪ್ಯಾಕ್ ಮಾಡಲಾಗಿರುತ್ತದೆ ಮತ್ತು ಹಲವೊಮ್ಮೆ ಸಾಕಷ್ಟು ರಿಯಾಯಿತಿಗಳನ್ನೂ ಒಳಗೊಂಡಿರುತ್ತವೆ. ಈ ರಿಯಾಯಿತಿಯು ನಮ್ಮನ್ನು ಈ ಬಂಡಲ್ ಖರೀದಿಸುವಂತೆ ಪ್ರಚೋದಿಸುತ್ತದೆ ಮತ್ತು ರಿಯಾಯಿತಿಯ ಆಸೆಗೆ ಬಿದ್ದು ನಮಗೆ ಅಗತ್ಯವಿಲ್ಲದಿದ್ದ ವಸ್ತುಗಳನ್ನೂ ನಾವು ಖರೀದಿಸುತ್ತೇವೆ. ಇ-ಕಾಮರ್ಸ್ ತಾಣಗಳಲ್ಲಿಯೂ ಹಲವಾರು ಬಂಡಲ್ ಕೊಡುಗೆಗಳನ್ನು ನಾವು ನೋಡಬಹುದು.
        
ಶಾಪಿಂಗ್ ಸ್ನೇಹಿ ಅಥವಾ ಶತ್ರುವೂ ಆಗಬಲ್ಲದು

ಇವೆಲ್ಲ ತಂತ್ರಗಳು ತನ್ನ ಲಾಭವನ್ನು ಹೆಚ್ಚಿಸಿಕೊಳ್ಳಲು ಮಾರಾಟಗಾರನಿಗೆ ನೆರವಾಗುತ್ತವೆ,ಇದೇ ವೇಳೆ ಅವರು ತಮ್ಮ ಗ್ರಾಹಕರ ಸಮಸ್ಯೆಗಳನ್ನು ಹೆಚ್ಚಿಸಬಹುದು.
ಪ್ರಚೋದನೆಗಳಿಗೆ ಒಳಗಾಗಿ ಖರೀದಿ ಮಾಡುವುದು ನಿಸ್ಸಂಶಯವಾಗಿ ಗ್ರಾಹಕರ  ಮಾನಸಿಕ ಆರೋಗ್ಯದ ಮೇಲೆ ಪರಿಣಾಮವನ್ನುಂಟು ಮಾಡುತ್ತದೆ. ಅದು ನಾಚಿಕೆಯ ಮತ್ತು ತಪ್ಪಿನ ಭಾವನೆಗಳನ್ನು ಹೆಚ್ಚಿಸುತ್ತದೆ ಮತ್ತು ಕ್ರಮೇಣ ಆತಂಕ,ಒತ್ತಡ ಮತ್ತು ಖಿನ್ನತೆಗೆ ಕಾರಣವಾಗಬಹುದು.
                
ಕೆಲವು ಧನಾತ್ಮಕ ಅಂಶಗಳೂ ಇವೆ

ಆನ್‌ಲೈನ್ ಶಾಪಿಂಗ್ ನಮ್ಮಲ್ಲಿ ಡೋಪ್ಮೈನ್ ಬಿಡುಗಡೆಯನ್ನು ಹೆಚ್ಚಿಸುತ್ತದೆ,ಏಕೆಂದರೆ ನಾವು ಸಂತಸದ ನಿರೀಕ್ಷೆಯಲ್ಲಿದ್ದಾಗ ಈ ಹಾರ್ಮೋನ್ ನಮ್ಮ ಮಿದುಳಿನೊಳಗೆ ಬಿಡುಗಡೆಯಾಗುತ್ತದೆ.

ಹೀಗಾಗಿ ನಮ್ಮ ಖರೀದಿಗಳು ಮನೆಬಾಗಿಲಿಗೆ ಬರುವುದನ್ನು ಕಾಯುತ್ತಿರುವಾಗ ನಾವು ಅಂಗಡಿಯಲ್ಲಿ ವಸ್ತುಗಳನ್ನು ಖರೀದಿಸಿದ್ದಕ್ಕಿಂತ ಹೆಚ್ಚು ಕಾತುರರಾಗಿರುತ್ತೇವೆ. ಈ ಆಹ್ಲಾದಕರ ಭಾವನೆಯು ಉತ್ತಮವಾಗಿ ನಿರ್ವಹಣೆಯಾದರೆ ಅದರಲ್ಲೇನೂ ಹಾನಿಯಿಲ್ಲ. ಆದರೆ ವಿಷಾದವೆಂದರೆ ಅದು ಅಲ್ಲಿಗೇ ನಿಲ್ಲುವುದಿಲ್ಲ. ಆ ಕ್ಷಣಿಕ ಸಂತಸದ ಭಾವನೆಯು ಕೆಲವೊಮ್ಮೆ ನಮ್ಮನ್ನು ಆನ್ಲೈನ್ ಶಾಪಿಂಗ್ ಚಟಕ್ಕೆ ದಾಸರನ್ನಾಗಿಸಬಹುದು. 

ನಾಣ್ಯದ ಇನ್ನೊಂದು ಮುಖವಾಗಿ ಶಾಪಿಂಗ್ ವ್ಯಕ್ತಿಯ ನಿಯಂತ್ರಣ ಪ್ರಜ್ಞೆಯನ್ನು ಮರುಸ್ಥಾಪಿಸಲು ನೆರವಾಗಬಲ್ಲದು. ನಾವು ಅಸಮಾಧಾನ ಅಥವಾ ಆತಂಕವನ್ನು ಅನುಭವಿಸುತ್ತಿರುವಾಗ ಪ್ರತಿಯೊಂದೂ ನಿಯಂತ್ರಣ ತಪ್ಪಿದೆ ಎಂದು ನಾವು ಭಾವಿಸತೊಡಗುತ್ತೇವೆ.

ಆದರೆ ಶಾಪಿಂಗ್ ಯಾವ ಮಳಿಗೆಗೆ ಹೋಗಬೇಕು ಅಥವಾ ವಸ್ತುವೊಂದನ್ನು ಇಷ್ಟಪಡುತ್ತೇವೆಯೇ ಇತ್ಯಾದಿ ಆಯ್ಕೆಗಳನ್ನು ಮಾಡಲು ನಮಗೆ ಅವಕಾಶವನ್ನು ಒದಗಿಸುವುದರಿಂದ ಅದು ವೈಯಕ್ತಿಕ ನಿಯಂತ್ರಣದ ಭಾವನೆಯನ್ನು ಮರಳಿ ತರಬಲ್ಲುದು ಮತ್ತು ಒತ್ತಡವನ್ನು ಕಡಿಮೆ ಮಾಡಬಲ್ಲುದು. ಹೀಗಾಗಿ ಶಾಪಿಂಗ್ ಎನ್ನುವುದು ಹಲವರು ಭಾವಿಸಿರುವುದಕ್ಕಿಂತ ಹೆಚ್ಚು ಅರ್ಥಪೂರ್ಣ ಚಟುವಟಿಕೆಯಾಗುತ್ತದೆ.
     
ರಿಟೇಲರ್ಗಳು ನಮಗೆ ಸಹಾಯವನ್ನೂ ಮಾಡಬಹುದು

ನಮ್ಮ ಖರೀದಿಯ ಮೊತ್ತವನ್ನು ಕಡಿಮೆ ಮಾಡಲು ರಿಟೇಲರ್ಗಳು ಆಸಕ್ತರಾಗಿರದಿರಬಹುದು, ಆದರೆ ಅವರು ಬಯಸಿದರೆ ಹೆಚ್ಚು ಪಾಸಿಟಿವ್‌ ಆಗಿ ನಮ್ಮ ಖರೀದಿ ನಿರ್ಧಾರಗಳ ಮೇಲೆ ಪ್ರಭಾವವನ್ನುಂಟು ಮಾಡಲು ನೆರವಾಗಬಹುದು. 
ವಿಶ್ವದಲ್ಲಿಂದು ಹೆಚ್ಚಿನ ದೇಶಗಳಲ್ಲಿ ಬೊಜ್ಜನ್ನು ಎದುರಿಸುವ ತುರ್ತು ಅಗತ್ಯವಿದೆ. ಹೀಗಾಗಿ ಬ್ರಿಟನ್ ಸರಕಾರವು ಪ್ರಮುಖ ಶಾಪಿಂಗ್ ಮಳಿಗೆಗಳಲ್ಲಿ ಸಕ್ಕರೆ,ಉಪ್ಪು ಮತ್ತು ಸ್ಯಾಚ್ಯುರೇಟೆಡ್ ಕೊಬ್ಬು ಅತಿಯಾಗಿರುವ ಅನಾರೋಗ್ಯಕರ ಆಹಾರಗಳ ಪ್ರಚಾರವನ್ನು 2022,ಅಕ್ಟೋಬರ್ನಿಂದ ನಿರ್ಬಂಧಿಸಲು ನಿರ್ಧರಿಸಿದೆ. ಇಂತಹ ನಿರ್ಧಾರಗಳು ನಮ್ಮ ಆರೋಗ್ಯಕ್ಕೆ ವರದಾನವಾಗಬಲ್ಲವು.
                
ಇದು ನೆರವಾಗಬಲ್ಲ ಕಾರ್ಯತಂತ್ರ

ನಮ್ಮ ಖರೀದಿ ಪಟ್ಟಿಯಲ್ಲಿ ಆಕರ್ಷಕ ಆಹಾರ ವಸ್ತುಗಳನ್ನು ತೆಗೆದುಹಾಕುವುದು ನಾವು ಖರೀದಿಸಿದ ಸಕ್ಕರೆಯುಕ್ತ ಆಹಾರಗಳ ಪ್ರಮಾಣವನ್ನು ಕಡಿಮೆ ಮಾಡಲು ನೆರವಾಗುತ್ತದೆ. ಕೆಲವು ಪ್ರಕರಣಗಳಲ್ಲಿ ಇದು ಶೇ.76ರಷ್ಟು ಕಡಿಮೆಯಾಗಬಹುದು.

ಆರೋಗ್ಯಕರ ಆಹಾರ ಪರ್ಯಾಯಗಳ ಲಭ್ಯತೆ ಮತ್ತು ಪ್ರಚಾರವು ಹೆಚ್ಚಿದರೆ  ಮತ್ತು ಅವುಗಳನ್ನು ಕಣ್ಣಿಗೆ ಎದ್ದು ಕಾಣುವಂತೆ ಇರಿಸಿದರೆ ಅದು ಉತ್ತಮ ಆಯ್ಕೆಗಳನ್ನು ಮಾಡಲು ಗ್ರಾಹಕರಿಗೆ ನಿಜಕ್ಕೂ ನೆರವಾಗಬಲ್ಲದು.

ಅಂತಿಮವಾಗಿ ನಮಗೆ ಬೇಡವಾದ ಅಥವಾ ಅಗತ್ಯವಿಲ್ಲದ ವಸ್ತುಗಳನ್ನು ತಿರಸ್ಕರಿಸುವ ಮತ್ತು ಆರೋಗ್ಯಕರ ನಿರ್ಧಾರಗಳನ್ನು ಮಾಡುವುದು ನಮ್ಮ ಕೈಯಲ್ಲಿಯೇ ಇರುತ್ತದೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News