ಉಡುಪಿ ಜಿಲ್ಲಾ 15ನೇ ಕನ್ನಡ ಸಾಹಿತ್ಯ ಸಮ್ಮೇಳನ ’ತುರಾಯಿ’ ಉದ್ಘಾಟನೆ

Update: 2022-04-15 13:29 GMT

ಕುಂದಾಪುರ : ಉಡುಪಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತು ಆಯೋ ಜಿಸಿರುವ ಉಡುಪಿ ಜಿಲ್ಲಾ ಹದಿನೈದನೆಯ ಕನ್ನಡ ಸಾಹಿತ್ಯ ಸಮ್ಮೇಳನ ‘ತುರಾಯಿ’ ನಾಡಿನ ಹಿರಿಯ ಸಂಶೋಧಕ, ವಿದ್ವಾಂಸ, ಸಾಹಿತಿ ಪ್ರೊ.ಎ.ವಿ. ನಾವಡ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ಶುಕ್ರವಾರ ಕುಂದಾಪುರ ಸರಕಾರಿ ಪದವಿ ಪೂರ್ವ ಕಾಲೇಜಿನ ಕಲಾಮಂದಿರದ ಕವಿಮುದ್ದಣ್ಣ ವೇದಿಕೆಯಲ್ಲಿ ವಿದ್ಯುಕ್ತವಾಗಿ ಉದ್ಘಾಟನೆಗೊಂಡಿತು.

ಕಾರ್ಯಕ್ರಮವನ್ನು ಕನ್ನಡ ಸಾಹಿತ್ಯ ಪರಿಷತ್‌ನ  ಪೂರ್ವಾಧ್ಯಕ್ಷ ಹರಿಕೃಷ್ಣ ಪುನರೂರು ಉದ್ಘಾಟಿಸಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವರು, ಸಾಹಿತಿಗಳು ಬರೆದ ಪುಸ್ತಕಗಳಿಗೆ, ಓದುಗರು ಪುಸ್ತಕ ಖರೀದಿ ಮಾಡುವ ಮೂಲಕ ಸಹಕಾರ ನೀಡಬೇಕು. ಸಂಸ್ಕೃತಿ, ಸಾಹಿತ್ಯ ಹಾಗೂ ಸಾಹಿತಿಗಳನ್ನು ಬೆಳೆಸುವ ಮೂಲಕ ಕನ್ನಡ ಕಟ್ಟುವ ಕೆಲಸ ನಿರಂತರವಾಗಿರಬೇಕು ಎಂದರು.

ಇತ್ತೀಚಿನ ವರ್ಷಗಳಲ್ಲಿ ಸರಕಾರ, ಕನ್ನಡ ಶಾಲೆಗಳನ್ನು ಮುಚ್ಚುತ್ತಾ ಹೋದರೆ ಕನ್ನಡ ಭಾಷೆ ಉಳಿಯುವುದು ಹೇಗೆ ಎನ್ನುವ ಪ್ರಶ್ನೆಗಳು ನಮ್ಮ ಮುಂದಿದೆ. ಕನ್ನಡದ ಉಳಿವಿಗಾಗಿ ಸರ್ಕಾರ ಮಾಡಿದ ಕಾನೂನುಗಳು ಜಾರಿಯಾಗುವ ಮೊದಲೇ ಅದಕ್ಕೆ ವಿಘ್ನಗಳು ಕಾಡುತ್ತವೆ. ಹೆಚ್ಚಿನ ಅನುದಾನಿತ ಶಾಲೆಗಳಲ್ಲಿ ಖಾಲಿಯಾಗಿರುವ ಶಿಕ್ಷಕರ ಸ್ಥಾನವನ್ನು ಸರಕಾರ ಭರ್ತಿ ಮಾಡದೆ ಇರುವುದರಿಂದ ಗರಿಷ್ಠ ವಿದ್ಯಾರ್ಥಿಗಳಿಗೆ ಕನಿಷ್ಠ ಶಿಕ್ಷಕರು ಎನ್ನುವ ದುಸ್ಥಿತಿ ಇಂದು ಎದುರಾಗಿದೆ ಎಂದರು.

ಉಡುಪಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಆಶಯ ಭಾಷಣ ಮಾಡಿದರು. ಡಾ.ಗಾಯತ್ರಿ ನಾವಡ ಹಾಗೂ ಉದ್ಯಮಿ ನವೀನ್ ಕುಮಾರ ಹೆಗ್ಡೆ ಪುಸ್ತಕ ಬಿಡುಗಡೆ ಮಾಡಿದರು. 

14ನೇ ಜಿಲ್ಲಾ ಕನ್ನಡ ಸಾಹಿತ್ಯ ಸಮ್ಮೇಳನಾಧ್ಯಕ್ಷೆ ವೈದೇಹಿ ಅವರ ಅನುಪಸ್ಥಿತಿ ಯಲ್ಲಿ ಜಿಲ್ಲಾ ಕಸಾಪ ಅಧ್ಯಕ್ಷ ನೀಲಾವರ ಸುರೇಂದ್ರ ಅಡಿಗ ಅವರು ೧೫ನೇ ಸಮ್ಮೇಳನಾಧ್ಯಕ್ಷ ಪ್ರೊ.ಎ.ವಿ.ನಾವಡ ಅವರಿಗೆ ಕನ್ನಡ ಧ್ವಜ ಹಸ್ತಾಂತರಿಸಿದರು. ಸಾಹಿತಿ ಡಾ.ಕಬ್ಬಿನಾಲೆ ವಸಂತ್ ಭಾರದ್ವಾಜ್ ಮೈಸೂರು, ಸಮ್ಮೇಳನಾಧ್ಯಕ್ಷರ ಪರಿಚಯ ಮಾಡಿದರು.

ಕಾಸರಗೋಡು ಕಸಾಪ ಘಟಕದ ಅಧ್ಯಕ್ಷ ಸುಬ್ರಮಣ್ಯ ವಿ ಭಟ್, ಉಡುಪಿ ಜಿಲ್ಲಾ ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಸಹಾಯಕ ನಿರ್ದೇಶಕಿ ಪೂರ್ಣಿಮಾ, ಕುಂದಾಪುರ ತಾಲೂಕು ಕಸಾಪ ಘಟಕದ ಅಧ್ಯಕ್ಷ ಡಾ.ಉಮೆಶ್ ಪುತ್ರನ್, ಕ್ಷೇತ್ರ ಶಿಕ್ಷಣಾಧಿಕಾರಿ ಅರುಣ್‌ಕುಮಾರ ಶೆಟ್ಟಿ, ಕುಂದಾಪುರ ಸರ್ಕಾರಿ ಪದವಿ ಪೂರ್ವ ಕಾಲೇಜಿನ ಪ್ರಾಂಶುಪಾಲ ಬಿ.ಜಿ.ರಾಮಕೃಷ್ಣ, ಜಿಲ್ಲಾ ಕಸಾಪ ಪದಾಧಿಕಾರಿಗಳಾದ ಸುಬ್ರಮಣ್ಯ ಶೆಟ್ಟಿ, ಮನೋಹರ ಪಿ, ದಿನಕರ ಆರ್ ಶೆಟ್ಟಿ, ತಾಲೂಕು ಘಟಕದ ಅಧ್ಯಕ್ಷರಾದ ರವಿರಾಜ್ ಹೆಚ್ ಪಿ, ಪುಂಡಲೀಕ ಮರಾಠೆ, ಜಿ.ರಾಮಚಂದ್ರ ಐತಾಳ್, ಶ್ರೀನಿವಾಸ ಭಂಡಾರಿ ಹಾಗೂ ಅಕ್ಷತಾ ಗಿರೀಶ್ ಉಪಸ್ಥಿತರಿದ್ದರು.

ಉಡುಪಿ ಜಿಲ್ಲಾ ಕಸಾಪ ಗೌರವ ಕಾರ್ಯದರ್ಶಿ ಸುಬ್ರಹ್ಮಣ್ಯ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿದರೆ, ನರೇಂದ್ರ ಕುಮಾರ್ ಕೋಟ ಕಾರ್ಯಕ್ರಮ ನಿರೂಪಿಸಿದರು. ಜಿಲ್ಲಾ ಸಂಘಟನಾ ಕಾರ್ಯದರ್ಶಿ ಸತೀಶ್ ವಡ್ಡರ್ಸೆ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News