ರೈತರನ್ನು ಭೂ ಸಂಬಂಧಿ ಗೊಂದಲಗಳಿಂದ ಒಂದು ಬಾರಿ ಮುಕ್ತರನ್ನಾಗಿಸಿ : ಸರಕಾರಕ್ಕೆ ಭಾಕಿಸಂ ಮನವಿ

Update: 2022-04-19 15:23 GMT

ಉಡುಪಿ : ಕರಾವಳಿ ಹಾಗೂ ಮಲೆನಾಡು ಜಿಲ್ಲೆಗಳ ರೈತರು ಅನೇಕ ವರ್ಷಗಳಿಂದ ಭೂಸಂಬಂಧಿ ಗೊಂದಲ ಗಳಲ್ಲಿ ಸಿಲುಕಿಕೊಂಡಿದ್ದರೂ, ಆಡಳಿತಾ ರೂಢ ಸರಕಾರಗಳ ಕಣ್ಣಿಗೆ ಅದು ಕಾಣುತ್ತಿಲ್ಲ. ಈ ಎಲ್ಲಾ ಗೊಂದಲ ಗಳಿಂದ ರೈತರನ್ನು ಒಂದು ಬಾರಿ ಮುಕ್ತರನ್ನಾಗಿಸಬೇಕು. ರೈತರ ಪಟ್ಟಾ ಭೂಮಿಯ ದಾಖಲೆಗಳೂ ಸರಿಯಾಗಿ, ಅತಂತ್ರ ಸ್ಥಿತಿಯಿಂದ ರೈತರು ಹೊರ ಬರು ವಂತಾಗಬೇಕು ಎಂದು ಭಾರತೀಯ ಕಿಸಾನ್ ಸಂಘದ ಉಡುಪಿ ಜಿಲ್ಲಾ ಸಮಿತಿ ಸರಕಾರಕ್ಕೆ ಮನವಿ ಮಾಡಿಕೊಂಡಿದೆ.

ಜಿಲ್ಲಾಧ್ಯಕ್ಷ ನವೀನ್‌ ಚಂದ್ರ ಜೈನ್ ನೇತೃತ್ವದಲ್ಲಿ ನಡೆದ ಜಿಲ್ಲಾ ಮಾಸಿಕ ಸಭೆಯಲ್ಲಿ ಈ ಬಗ್ಗೆ ನಿರ್ಣಯ ಕೈಗೊಳ್ಳಲಾಗಿದೆ. ಈ ಹಿಂದೆ ಮದ್ರಾಸ ಸರಕಾರದ ಕಾಲದಲ್ಲಿ ಭೂ ಸಂಬಂಧಿತ ಹಕ್ಕಾಗಿ ರೈತನಿಗೆ ನೀಡಲಾಗಿದ್ದ ಕುಮ್ಕಿ, ಸೊಪ್ಪಿನ ಬೆಟ್ಟ, ಕಾನ-ಬಾಣೆ ಭೂಮಿಗಳೂ ಇನ್ನೂ ಅತಂತ್ರವಾಗಿವೆ. ಅನೇಕ ವರ್ಷ ಗಳಿಂದ ಆ ಭೂಮಿಗಳನ್ನು ಕಾಪಾಡಿಕೊಂಡು, ಅಭಿವೃದ್ಧಿ ಪಡಿಸಿಕೊಂಡು ಬಂದಿರುವ ಭೂಮಿಗಳು ರೈತರ ಕೈ ತಪ್ಪಿ ಹೋಗಿ ಪ್ರಭಾವಿಗಳ ಪಾಲಾಗಿವೆ.  ಈಗಾಗಲೇ ಹಣಕೊಟ್ಟು, ಅಡ್ಡದಾರಿಗಳ ಮೂಲಕ ಪಟ್ಟಾಕ್ಕೆ ಪಡೆದವರು ಸಾಕಷ್ಟು ಜನರಿದ್ದಾರೆ ಎಂದು ಸಭೆ ನಿರ್ಣಯ ಹೇಳಿದೆ.

ಅದೇ ರೀತಿ ಗೇರು ಲೀಸ್ ಭೂಮಿಗಳೂ ಸಹ ಗೇರು ಕೃಷಿಯ ಅಭಿವೃದ್ದಿಗಾಗಿ ಮತ್ತು ಆ ಮೂಲಕ ದೇಶ ವಿನಿಮಯ ಗಳಿಸುವ ದೃಷ್ಟಿಯಿಂದ ಸರಕಾರವೇ ರೈತರನ್ನು ಕರೆದು ಬಂಜರು ಭೂಮಿಗಳನ್ನು ನೀಡಿತ್ತು. ಈಗ ೬೦ ವರ್ಷ ಕಳೆದರೂ  ಇಲ್ಲಸಲ್ಲದ ಕಾರಣ ನೀಡಿ ಅದನ್ನು ರೈತರಿಗೆ ಪಟ್ಟಾಕ್ಕೆ ನೀಡಲು ತಡೆಯೊಡ್ಡಲಾಗುತ್ತಿದೆ. ಅಕ್ರಮ-ಸಕ್ರಮ, ದರ್ಖಾಸ್ತು, ಬಗರ್ ಹುಕುಂ ಮೊದಲಾದ ಭೂಮಿಗಳನ್ನು ಅಭಿವೃದ್ದಿ ಪಡಿಸಿ ಪಟ್ಟಾ ಸಿಗುವುದೆಂಬ ನಂಬಿಕೆಯಲ್ಲಿದ್ದ ರೈತರ ಪರಿಸ್ಥಿತಿ ಅತಂತ್ರದಲ್ಲಿದೆ ಎಂದು ನಿರ್ಣಯದಲ್ಲಿ ಹೇಳಲಾಗಿದೆ.

ಯಾವುದೇ ಸರಕಾರಗಳು ಬಂದರೂ ನಾವು ರೈತರ ಪರ ಎಂದು ಹೇಳುವುದು ಮಾತ್ರ, ಕಣ್ಣ ಮುಂದೆ ಇರುವ ಸಮಸ್ಯೆಗಳನ್ನು ಪರಿಹರಿಸುವುದು ಬಿಟ್ಟು ಗುಡ್ಡ ಮಾಡಿಕೊಂಡು ಕೂರುತ್ತವೆ. ಕಾಡುಪ್ರಾಣಿಗಳ ಸಮಸ್ಯೆ, ಪ್ರಾಕೃತಿಕ ವಿಕೋಪ ದಿಂದಾಗುವ ನಷ್ಟ, ಕಂದಾಯ, ವಿದ್ಯುತ್ ಇಲಾಖೆಗಳಿಂದಾಗುವ ತೊಂದರೆ, ತಲೆ ಮೇಲೆ ತೂಗುಗತ್ತಿ ಯಂತೆ ತಿರುಗುತ್ತಿರುವ ಕಸ್ತೂರಿರಂಗನ್ ಸಮಸ್ಯೆ, ಸಿಆರ್‌ಝಡ್ ಸಮಸ್ಯೆ, ನೀರಾವರಿ ಯೋಜನೆಗಳು ಸಮರ್ಪ ಕವಾಗಿ  ಅನುಷ್ಠಾನಗೊಳ್ಳದೆ ಆತಂಕದಲ್ಲಿರುವ ರೈತರ ಸಭೆ ಕರೆದು ಸಮಸ್ಯೆಗಳ ಪರಿಹಾರಕ್ಕೆ ಕೂಡಲೇ ಕ್ರಮ ಕೈಗೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರು ಹಾಗೂ ಜನಪ್ರತಿನಿಧಿಗಳನ್ನು ರೈತರ ಆಗ್ರಹಿಸಲು ತೀರ್ಮಾನಿಸಲಾಯಿತು.

ಸಮಸ್ಯೆಳನ್ನು ಇನ್ನೂ ಬಗೆಹರಿಸಲು ಮುಂದಾಗದಿದ್ದಲ್ಲಿ ತೀವ್ರ ಹೋರಾಟ ಕೈಗೊಳ್ಳಲು ಸಭೆ ನಿರ್ಣಯಕೈ ಗೊಂಡಿತು. ಸಭೆಯಲ್ಲಿ ರಾಜ್ಯಕಾರ್ಯಕಾರಿಣಿ ಸದಸ್ಯ ಬಿ.ವಿ.ಪೂಜಾರಿ ಪೆರ್ಡೂರು, ಕಾರ್ಕಳ ತಾಲೂಕು ಅಧ್ಯಕ್ಷ ಗೋವಿಂದ ರಾಜ ಭಟ್ ಕಡ್ತಲ, ಕುಂದಾಪುರ ತಾಲೂಕು ಅಧ್ಯಕ್ಷ ಸೀತಾರಾಮ ಗಾಣಿಗ ಹಾಲಾಡಿ, ಜಿಲ್ಲಾ ಸಮಿತಿಯ ಉಮಾನಾಥ ರಾನಡೆ ಮಾಳ, ವೆಂಕಟೇಶ ರಾವ್ ಹೊಸ್ಕೋಟೆ, ಸದಾನಂದ ನಾಯಕ್ ಕಳತ್ತೂರು, ಆಸ್ತೀಕ ಶಾಸ್ತ್ರಿ ಗುಂಡ್ಮಿ, ಅನಂತ ಪದ್ಮನಾಭ ಉಡುಪ ಕುಂದಬಾರಂದಾಡಿ, ಸುಂದರ ಶೆಟ್ಟಿ ಮುನಿಯಾಲು, ಚಂದ್ರಹಾಸ ಶೆಟ್ಟಿ ಇನ್ನಾ ಮೊದಲಾದವರು ಉಪಸ್ಥಿತರಿದ್ದರು.

ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸತ್ಯನಾರಾಯಣ ಉಡುಪ ಕಾರ್ಯಕ್ರಮ ನಿರ್ವಹಿಸಿ, ವಂದಿಸಿದರು

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News