ಸಮಾನ ನಾಗರಿಕ ಸಂಹಿತೆ ಜಾರಿಗೆ ಉತ್ತರ ಪ್ರದೇಶ ಚಿಂತನೆ: ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ

Update: 2022-04-24 03:53 GMT

ಲಕ್ನೋ: ವಿರೋಧ ಪಕ್ಷಗಳ ಬೆಂಬಲ ದೊರಕಿದರೂ, ದೊರಕದಿದ್ದರೂ, ಪ್ರಸ್ತಾವಿತ ಸಮಾನ ನಾಗರಿಕ ಸಂಹಿತೆಯನ್ನು ರಾಜ್ಯದಲ್ಲಿ ಜಾರಿಗೊಳಿಸಲು ಉತ್ತರ ಪ್ರದೇಶ ಸರ್ಕಾರ ಗಂಭೀರ ಚಿಂತನೆ ನಡೆಸಿದೆ ಎಂದು ಉಪಮುಖ್ಯಮಂತ್ರಿ ಕೇಶವ ಪ್ರಸಾದ್ ಮೌರ್ಯ ಘೋಷಿಸಿದ್ದಾರೆ.

ಇದೀಗ ಸಮಾನ ನಾಗರಿಕ ಸಂಹಿತೆ ಮೇಲೆ ಗಮನ ಕೇಂದ್ರೀಕರಿಸಲು ಕೇಂದ್ರ ಗೃಹಸಚಿವ ಅಮಿತ್ ಶಾ ಭೋಪಾಲ್‍ನಲ್ಲಿ ಪಕ್ಷದ ಪದಾಧಿಕಾರಿಗಳನ್ನು ಉದ್ದೇಶಿಸಿ ಮಾತನಾಡುವ ವೇಳೆ ಸೂಚಿಸಿದ ಬೆನ್ನಲ್ಲೇ ಉತ್ತರ ಪ್ರದೇಶದಲ್ಲಿ ಈ ಕಾರ್ಯಸೂಚಿ ಬಹಿರಂಗವಾಗಿದೆ.

"ಕಾನೂನುಗಳು ಎಲ್ಲರಿಗೂ ಸಮಾನವಾಗಿರಬೇಕು. ನಮ್ಮ ಸರ್ಕಾರ ಸಮಾನ ನಾಗರಿಕ ಸಂಹಿತೆ ಜಾರಿಗೊಳಿಸಲಿದೆ. ಬಿಜೆಪಿ ಆಡಳಿತದ ಎಲ್ಲ ರಾಜ್ಯಗಳಲ್ಲಿ ಈ ಬಗ್ಗೆ ಗಂಭೀರ ಚರ್ಚೆ ನಡೆಯುತ್ತಿದೆ" ಎಂದು ಮೌರ್ಯ ಹೇಳಿದ್ದಾರೆ.

"ಎಲ್ಲ ಸರ್ಕಾರಿ ಯೋಜನೆಗಳನ್ನು ಸಮಾನವಾಗಿ ಸಮಾಜದ ಎಲ್ಲ ವರ್ಗಗಳಿಗೆ ಅನುಷ್ಠಾನಗೊಳಿಸುವುದು ದೇಶ 'ಸಬ್ಕಾ ಸಾಥ್ ಸಬ್ಕಾ ವಿಕಾಸ್' ದೃಷ್ಟಿಕೋನಕ್ಕೆ ಅನುಸಾರವಾಗಿದ್ದು, ಆಗ ಸಮಾನ ಸಂಹಿತೆಯನ್ನು ಕೂಡಾ ಜಾರಿಗೊಳಿಸಬೇಕಾಗುತ್ತದೆ" ಎಂದರು.

ಬಿಜೆಪಿಯೇತರ ಪಕ್ಷಗಳು ಸಮಾನ ಸಂಹಿತೆಯನ್ನು ಬೆಂಬಲಿಸುವ ಬದಲು ಓಲೈಸುವ ರಾಜಕಾರಣವನ್ನು ಅನುಸರಿಸುವ ಭಿನ್ನ ಮಾರ್ಗದತ್ತ ನೋಡುತ್ತಿವೆ ಎಂದು ಅವರು ಆಪಾದಿಸಿದರು.

"ಸಮಾನ ನಾಗರಿಕ ಸಂಹಿತೆ ಉತ್ತರ ಪ್ರದೇಶಕ್ಕೆ ಮತ್ತು ದೇಶದ ಇತರ ಭಾಗಗಳಿಗೆ ತೀರಾ ಮಹತ್ವದ್ದು. ಸಂವಿಧಾನದ 370ನೇ ವಿಧಿ ರದ್ದತಿ, ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಮತ್ತು ಸಮಾನ ನಾಗರಿಕ ಸಂಹಿತೆ ಬಿಜೆಪಿಯ ಆದ್ಯತೆಗಳು. ವಿರೋಧ ಪಕ್ಷಗಳು ಬೆಂಬಲಿಸಿದರೆ, ಒಳ್ಳೆಯದು. ಇಲ್ಲದಿದ್ದರೂ, ನಾವು ಅದನ್ನು ಪರಿಗಣಿಸುವುದಿಲ್ಲ" ಎಂದು ಹೇಳಿದರು.

"ಸಂವಿಧಾನದ 370ನೇ ವಿಧಿಯನ್ನು ವಿರೋಧದ ಹೊರತಾಗಿಯೂ ರದ್ದುಪಡಿಸಲಾಯಿತು. ಅದೇ ರೀತಿ ಸಮಾನ ನಾಗರಿಕ ಸಂಹಿತೆಯನ್ನೂ ಜಾರಿಗೊಳಿಸಲಾಗುತ್ತದೆ" ಎಂದು ಅವರು ಹೇಳಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News