ಪ್ರಮೋದ್ ಮಧ್ವರಾಜ್ ಅವಕಾಶವಾದಿ ರಾಜಕಾರಣಿ: ದ್ರುವನಾರಾಯಣ್ ಆರೋಪ

Update: 2022-05-11 13:24 GMT

ಉಡುಪಿ : ಮೊದಲ ಬಾರಿ ಶಾಸಕರಾಗಿ ಆಯ್ಕೆಯಾದ ಪ್ರಮೋದ್ ಮಧ್ವರಾಜ್‌ಗೆ ಸೂಕ್ತ ಸ್ಥಾನಮಾನ ಸೇರಿದಂತೆ ಎಲ್ಲ ರೀತಿಯ ಅವಕಾಶಗಳನ್ನು  ಕಾಂಗ್ರೆಸ್ ಪಕ್ಷ ಕೊಟ್ಟಿದೆ. ಆದರೂ ಅವರು ಪಕ್ಷವನ್ನು ತೊರೆದು ಹೋಗಿರುವುದು ಅವಕಾಶವಾದಿ ರಾಜಕಾರಣಿ ಎಂಬುದನ್ನು ತೋರಿಸಿಕೊಟ್ಟಿದ್ದಾರೆ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್.ಧ್ರುವನಾರಾಯಣ್ ಆರೋಪಿಸಿದ್ದಾರೆ.

ಉಡುಪಿ ಕಾಂಗ್ರೆಸ್ ಭವನದಲ್ಲಿ ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಪ್ರಮೋದ್ ಮಧ್ವರಾಜ್ ಆತುರದ ನಿರ್ಧಾರ ತೆಗೆದುಕೊಂಡು ಪಕ್ಷ ವನ್ನು ಬಿಟ್ಟು ಹೋಗಿದ್ದಾರೆ. ಪಕ್ಷದಿಂದ ಅವರಿಗೆ ಯಾವುದೇ ರೀತಿಯ ಅನ್ಯಾಯ ಆಗಿಲ್ಲ. ಉಡುಪಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷರು, ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ನೇಮಕ ಸೇರಿದಂತೆ ಅವರ ಬಹುತೇಕ ಬೇಡಿಕೆಗಳನ್ನು ಈಡೇರಿಸಿದ್ದೇವೆ. ಆದರೂ ಅವರು ಜಿಲ್ಲಾ ಕಾಂಗ್ರೆಸ್ ವಿರುದ್ಧ ಆರೋಪ ಮಾಡಿರುವುದು ಅವರಿಗೆ ಶೋಭ ತರುವುದಿಲ್ಲ ಎಂದರು.

ಡಿಕೆ ಶಿವಕುಮಾರ್, ಪ್ರಮೋದ್ ಮಧ್ವರಾಜ್ ಮೇಲೆ ಬಹಳ ನಿರೀಕ್ಷೆ ಇಟ್ಟು ಕೊಂಡಿದ್ದರು. ಆದರೆ ಅವರು ಕಾಂಗ್ರೆಸ್ ಪಕ್ಷ ಮತ್ತು ಮತದಾರರಿಗೆ ದ್ರೋಹ ಮಾಡಿದ್ದಾರೆ. ಅವರ ವೈಯಕ್ತಿಕ ಆಸೆ ಏನಿದೆ ಗೊತ್ತಿಲ್ಲ. ಆದರೆ ನಾವು ಮತ್ತೆ ಜಿಲ್ಲೆಯಲ್ಲಿ ಕಾಂಗ್ರೆಸ್ ಪಕ್ಷವನ್ನು ತಳಮಟ್ಟದಿಂದ ಕಟ್ಟುವ ಪ್ರಯತ್ನ ಮಾಡುತ್ತೇವೆ. ರಾಜಕಾರಣ ಎಂಬುದು ಹರಿಯುವ ನೀರೆ ಹೊರತು ನಿಂತ ನೀರಲ್ಲ ಎಂದು ಅವರು ತಿಳಿಸಿದರು.

ನಳಿನ್ ಬೇಜವಾಬ್ದಾರಿ ಹೇಳಿಕೆ

ನಳಿನ್ ಕುಮಾರ್ ಕಟೀಲ್ ಬೇಜವಾಬ್ದಾರಿ ಹೇಳಿಕೆ ಕೊಡುತ್ತಿದ್ದಾರೆ. ಕಾಂಗ್ರೆಸ್ ಮುಕ್ತ ಮಾಡುವುದು ಬಿಜೆಪಿಯ ಹಗಲು ಗನಸು.  ರಾಜ್ಯದಲ್ಲಿ ನಡೆದ ವಿಧಾನ ಪರಿಷತ್, ಗ್ರಾಪಂ, ವಿಧಾನಸಭಾ ಉಪಚುನಾವಣೆ ಗಳಲ್ಲಿ ಕಾಂಗ್ರೆಸ್ ಉತ್ತಮ ಪ್ರದರ್ಶನ ತೋರಿಸಿದೆ. ಬಿಜೆಪಿಗಿಂತ ಹೆಚ್ಚಿನ ಶೇಕಡವಾರು ಮತವನ್ನು ನಮ್ಮ ಪಕ್ಷ ಪಡೆದಿದೆ. ಆದುರದಿಂದ ನಳಿನ್ ಕುಮಾರ್  ಅಂಕಿ ಅಂಶ ಇಟ್ಟುಕೊಂಡು ಮಾತನಾಡಬೇಕು ಎಂದು ಅವರು ಹೇಳಿದರು.

ಅರ್ಕಾವತಿ ಡಿನೋಟಿಫಿಕೇಶನ್ ಪ್ರಕರಣಕ್ಕೆ ಸಂಬಂಧಿಸಿ ಸಿದ್ದರಾಮಯ್ಯ ಅವರ ಬಗ್ಗೆ ನಳಿನ್ ಕುಮಾರ್ ಕಟೀಲ್ ಮಾಡಿರುವ ಆರೋಪ ಆಧಾರರಹಿತ ವಾದುದು. ಗಟ್ಸ್ ಇದ್ದರೆ, ಸಮರ್ಥ ಅಧ್ಯಕ್ಷ ಆಗಿದ್ದರೆ ಕಾರ್ಯಾಚರಣೆ ಮಾಡಿ, ಸಿದ್ದರಾಮಯ್ಯನನ್ನು ಬಂಧಿಸಿ ನೋಡೊಣ. ನಳಿನ್ ಕುಮಾರ್ ಒಬ್ಬ ಹಿಟ್ ಆಂಡ್ ರನ್ ಕೇಸ್. ಸಿದ್ದರಾಮಯ್ಯ ಒಂದೇ ಒಂದು ಕಪ್ಪುಚುಕ್ಕೆ ಇಲ್ಲದ ಕಳಂಕ ರಹಿತ ರಾಜಕಾರಣಿ ಎಂದರು.

ಬಿಜೆಪಿ ಮನೆಯಲ್ಲಿ ದೊಡ್ಡ ದೊಡ್ಡ ಹೆಗ್ಗಣ ಇವೆ. ಕಾಂಗ್ರೆಸ್ ಬಗ್ಗೆ ಮಾತನಾ ಡುವ ನೈತಿಕತೆ ಬಿಜೆಪಿಗೆ ಇಲ್ಲ. ನಳಿನ್ ಕುಮಾರ್ ಕಟೀಲ್ ಅಸಮರ್ಥ ರಾಜ್ಯಾಧ್ಯಕ್ಷ. ಸಿದ್ಧರಾಮಯ್ಯ ಅವರ ಬಗ್ಗೆ ಬೇಜವಾಬ್ದಾರಿ ಹೇಳಿಕೆಯನ್ನು ನೀಡು ತ್ತಿದ್ದಾರೆ ಎಂದು ಅವರು ಟೀಕಿಸಿದರು.

ಬಿಜೆಪಿ ಕೊಳೆತು ನಾರುತ್ತಿದೆ

ಡಿಕೆ ಶಿವಕುಮಾರ್ ಜೈಲಿಗೆ ಹೋದ ಬಗ್ಗೆ ನಳಿನ್ ಕುಮಾರ್ ಕಟೀಲ್ ಆಪಾದನೆ ಮಾಡುತ್ತಿದ್ದಾರೆ. ಇವರ ಪಕ್ಷದ ಯಡಿಯೂರಪ್ಪ, ಅಮಿತ್ ಶಾ, ಕಟ್ಟಾ, ಜನಾರ್ದನ ರೆಡ್ಡಿ ಜೈಲಿಗೆ ಹೋದವರೇ ಆಗಿದ್ದಾರೆ. ಅವರ ಮನೆ ಕೊಳೆತು ನಾರುತ್ತಿದೆ. ಭ್ರಷ್ಟಾಚಾರ ಆರೋಪದಲ್ಲಿ ಮೂವರು ಸಚಿವರು ರಾಜೀನಾಮೆ ಕೊಟ್ಟಿದ್ದಾರೆ ಎಂದು ಅವರು ದೂರಿದರು.

ಎಸ್‌ಸಿ ಎಸ್‌ಟಿ ಸಮುದಾಯದ ಅನುದಾನ ಕಡಿತ ಮಾಡಿರುವ ಬಿಜೆಪಿಗೆ ಆ ಸಮುದಾಯದ ಜನರ ಬಗ್ಗೆ ಮಾತನಾಡಲು ಯಾವುದೇ ನೈತಿಕತೆ ಇಲ್ಲ. ಉಡುಪಿ ಬಿಜೆಪಿ ಸಮಾವೇಶದಲ್ಲಿ ಆ ಸಮುದಾಯದ ಜನರಿಗೆ ಬಿಜೆಪಿ ಮಂಕುಬೂದಿ ಎರಚಿದೆ. ಇಡೀ ದೇಶದಲ್ಲಿ ಅತೀ ಹೆಚ್ಚು ಭ್ರಷ್ಟಾಚಾರ ಇರೋದು ಕರ್ನಾಟಕದಲ್ಲಿ ಸಮೀಕ್ಷೆ ಮೂಲಕ ರಾಜ್ಯದ ಭ್ರಷ್ಟಾಚಾರ ಹೊರಬಂದಿದೆ ಎಂದು ಅವರು ಆರೋಪಿಸಿದರು.

ಸುದ್ದಿಗೋಷ್ಠಿಯಲ್ಲಿ ಕಾಂಗ್ರೆಸ್ ಜಿಲ್ಲಾಧ್ಯಕ್ಷ ಅಶೋಕ ಕುಮಾರ್ ಕೊಡವೂರು, ಮಾಜಿ ಸಚಿವ ವಿನಯ ಕುಮಾರ್ ಸೊರಕೆ, ಮಾಜಿ ಶಾಸಕ ಯು.ಆರ್. ಸಭಾಪತಿ, ವಕ್ತಾರ ಭಾಸ್ಕರ ರಾವ್ ಕಿದಿಯೂರು, ಪ್ರಸಾದ್ ಕಾಂಚನ್, ರಮೇಶ್ ಕಾಂಚನ್, ದಿನಕರ ಹೇರೂರು, ವೆರೋನಿಕಾ ಕರ್ನೆಲಿಯೋ, ಹರಿಶ್ ಕಿಣಿ, ಹಬೀಬ್ ಅಲಿ, ಕಿಶನ್ ಹೆಗ್ಡೆ ಕೊಳ್ಕೆಬೈಲ್, ಶಬ್ಬೀರ್ ಉಪಸ್ಧಿತರಿದ್ದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News