ಏರ್ ಇಂಡಿಯಾ ವಿಮಾನದಲ್ಲಿ ತಾಂತ್ರಿಕ ದೋಷ, ಮುಂಬೈ ವಿಮಾನ ನಿಲ್ದಾಣದಲ್ಲಿ ತುರ್ತು ಭೂಸ್ಪರ್ಶ
ಹೊಸದಿಲ್ಲಿ: ಟಾಟಾ ಗ್ರೂಪ್ ತೆಕ್ಕೆಗೆ ಸೇರಿರುವ ಏರ್ ಇಂಡಿಯಾದ A320neo ವಿಮಾನವು ಟೇಕ್ ಆಫ್ ಆದ ಕೇವಲ 27 ನಿಮಿಷಗಳ ನಂತರ ತಾಂತ್ರಿಕ ದೋಷದಿಂದಾಗಿ ಅದರ ಎಂಜಿನ್‌ಗಳಲ್ಲಿ ಒಂದನ್ನು ಸ್ಥಗಿತಗೊಳಿಸಿದ ಬಳಿಕ ಮುಂಬೈ ವಿಮಾನನಿಲ್ದಾಣದಲ್ಲಿ ತುರ್ತು ಸ್ಪರ್ಶ ಮಾಡಿದೆ ಎಂದು ಮೂಲಗಳು ಶುಕ್ರವಾರ ತಿಳಿಸಿವೆ.
ಗುರುವಾರ ವಿಮಾನ ಬದಲಾವಣೆಯ ನಂತರ ಪ್ರಯಾಣಿಕರನ್ನು ಗಮ್ಯಸ್ಥಾನ ಬೆಂಗಳೂರಿಗೆ ರವಾನಿಸಲಾಗಿದೆ ಎಂದು ಏರ್ ಇಂಡಿಯಾ ವಕ್ತಾರರು ತಿಳಿಸಿದ್ದಾರೆ.
ಈ ಘಟನೆಯ ಕುರಿತು ವಿಮಾನಯಾನ ನಿಯಂತ್ರಕ ಡೈರೆಕ್ಟರೇಟ್ ಜನರಲ್ ಆಫ್ ಸಿವಿಲ್ ಏವಿಯೇಷನ್ ತನಿಖೆ ನಡೆಸುತ್ತಿದೆ ಎಂದು ಮೂಲಗಳು ತಿಳಿಸಿವೆ. ಏರ್ ಇಂಡಿಯಾದ A320neo ವಿಮಾನಗಳು ಸಿಎಫ್ ಎಂನ ಲೀಪ್ ಎಂಜಿನ್‌ಗಳನ್ನು ಹೊಂದಿವೆ.
A320neo ವಿಮಾನದ ಪೈಲಟ್‌ಗಳು ಬೆಳಗ್ಗೆ 9.43 ಕ್ಕೆ ಛತ್ರಪತಿ ಶಿವಾಜಿ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಿಂದ ವಿಮಾನವು ನಿರ್ಗಮಿಸಿದ ಕೆಲವೇ ನಿಮಿಷಗಳ ನಂತರ ಇಂಜಿನ್‌ಗಳಲ್ಲಿ ತಾಂತ್ರಿಕ ದೋಷದ ಬಗ್ಗೆ ಎಚ್ಚರಿಕೆಯನ್ನು ಸ್ವೀಕರಿಸಿದರು.
ಆ ಇಂಜಿನ್ ಸ್ಥಗಿತಗೊಂಡ ನಂತರ ಪೈಲಟ್ ಮುಂಬೈ ವಿಮಾನ ನಿಲ್ದಾಣದಲ್ಲಿ ಬೆಳಿಗ್ಗೆ 10.10 ಕ್ಕೆ ಮತ್ತೆ ವಿಮಾನವನ್ನು ಇಳಿಸಿದರು ಎಂದು ಮೂಲಗಳು ತಿಳಿಸಿವೆ.