ಸಿಡಿಎಸ್ ಪರೀಕ್ಷೆ : ಚಾಲಕನ ಪುತ್ರನಿಗೆ ಪ್ರಥಮ ರ‍್ಯಾಂಕ್

Update: 2022-06-05 02:28 GMT

ನೈನಿತಾಲ್: ಉತ್ತರಾಖಂಡದ ಹಲ್ದ್‌ ವಾನಿಯಲ್ಲಿ ಚಾಲಕನಾಗಿ ಕಾರ್ಯನಿರ್ವಹಿಸುತ್ತಿರುವ ವ್ಯಕ್ತಿಯ ಪುತ್ರ 22 ವರ್ಷದ ಎಂಜಿನಿಯರಿಂಗ್ ಪದವೀಧರ ಹಿಮಾಂಶು ಪಾಂಡೆ, ಸಂಯುಕ್ತ ರಕ್ಷಣಾ ಸೇವೆಗಳ ಪರೀಕ್ಷೆಯಲ್ಲಿ ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ಗಳಿಸಿ, ಇಂಡಿಯನ್ ಮಿಲಿಟರಿ ಅಕಾಡೆಮಿ (ಐಎಂಎ) ಸೇರಲು ಸಜ್ಜಾಗಿದ್ದಾರೆ.

ಕೇಂದ್ರ ಲೋಕಸೇವಾ ಆಯೋಗ ನಡೆಸುವ ಪರೀಕ್ಷೆಯ ಫಲಿತಾಂಶವನ್ನು ಪ್ರಕಟಿಸಲಾಗಿದ್ದು, ಪರೀಕ್ಷೆ ಉತ್ತೀರ್ಣರಾದವರು ಡೆಹ್ರಾಡೂನ್‍ನಲ್ಲಿರುವ ಐಎಂಎಯಲ್ಲಿ ತರಬೇತಿ ಪಡೆಯಲಿದ್ದಾರೆ.

"ಬಾಲ್ಯದಿಂದಲೇ ದೇಶ ಸೇವೆ ಮಾಡಬೇಕು ಎಂದು ಬಯಸಿದ್ದೆ. ನನಗೆ ಬೇರೆ ಯಾವ ಆಯ್ಕೆಯೂ ಇರಲಿಲ್ಲ. ನಾನು ಕೇವಲ ಸಿಡಿಎಸ್ ಸಿದ್ಧತೆಗೆ ಮಾತ್ರವೇ ಗಮನ ಹರಿಸಿದ್ದೆ. ಹಲವು ಬಾರಿ ಅನುತ್ತೀರ್ಣನಾದರೂ ಪ್ರಯತ್ನ ಮಾಡುತ್ತಲೇ ಇದ್ದೆ. ನನ್ನ ಪೋಷಕರು ಹಾಗೂ ಕೋಚಿಂಗ್ ಸಂಸ್ಥೆಯ ಶಿಕ್ಷಕರಿಗೆ ಕೃತಜ್ಞತೆ ಸಲ್ಲಿಸಲು ಬಯಸುತ್ತೇನೆ" ಎಂದು ಹಿಮಾಂಶು ನುಡಿದರು.

ಪಾಂಡೆಯವರ ತಂದೆ ಕಮಲ್ ಪಾಂಡೆ ಖಾಸಗಿ ಕಂಪನಿಯಲ್ಲಿ ಚಾಲಕರಾಗಿದ್ದು, ತಾಯಿ ಗೃಹಿಣಿ. ಹಲ್ದ್ವಾನಿ ಎಬಿಎಂ ಶಾಲೆಯಲ್ಲಿ 12ನೇ ತರಗತಿ ಕಲಿತ ಪಾಂಡೆ ಶೇಕಡ 95 ಅಂಕ ಪಡೆದಿದ್ದರು. ಬಳಿಕ ದ್ವಾರಹಾತ್ ಎಂಜಿನಿಯರಿಂಗ್ ಕಾಲೇಜಿನಿಂದ ಬಿಟೆಕ್ ಪದವಿ ಪಡೆದಿದ್ದರು.

ಸಿಡಿಎಸ್‍ನಲ್ಲಿ ಇದು ಪಾಂಡೆಯವರ ಮೂರನೇ ಪ್ರಯತ್ನವಾಗಿತ್ತು. 2017ರಿಂದಲೂ ಪರೀಕ್ಷೆ ತೆಗೆದುಕೊಂಡಿದ್ದ ಪಾಂಡೆ ಇದಕ್ಕೂ ಮುನ್ನ ಎರಡು ಬಾರಿ ಪರೀಕ್ಷೆಯಲ್ಲಿ ಉತ್ತೀರ್ಣರಾದರೂ, ದಂತಸಂಬಂಧಿ ಸಮಸ್ಯೆಯಿಂದಾಗಿ ವೈದ್ಯಕೀಯ ಪರೀಕ್ಷೆಯಲ್ಲಿ ಅನುತ್ತೀರ್ಣರಾಗಿದ್ದರು. ಈ ಬಾರಿ ಸಿಡಿಎಸ್ ಮತ್ತು ಸರ್ವೀಸಸ್ ಸೆಲೆಕ್ಷನ್ ಬೋರ್ಡ್ ಪರೀಕ್ಷೆಯಲ್ಲಿ ಉತ್ತೀರ್ಣರಾಗಿದ್ದು, ಐಎಂಎಯಲ್ಲಿ 24 ಹಾಗೂ ಭಾರತೀಯ ನೌಕಾ ಅಕಾಡೆಮಿಯಲ್ಲಿ 13ನೇ ರ‍್ಯಾಂಕ್ ಪಡೆದಿದ್ದರು.

"ನಾನು ಅಖಿಲ ಭಾರತ ಮಟ್ಟದಲ್ಲಿ ಪ್ರಥಮ ರ‍್ಯಾಂಕ್ ನಿರೀಕ್ಷಿಸಿರಲಿಲ್ಲ. ಫಲಿತಾಂಶದಿಂದ ರೋಮಾಂಚನವಾಗಿದೆ. ಇದು ಸಂಘಟಿತ ಪ್ರಯತ್ನ. ನನಗೆ ನೆರವಾದ ಎಲ್ಲರಿಗೂ ಕೃತಜ್ಞತೆ ಸಲ್ಲಿಸುತ್ತೇನೆ. ಪ್ರತಿಯೊಬ್ಬರೂ ಕನಸಿನಲ್ಲಿ ನಂಬಿಕೆ ಇಟ್ಟುಕೊಂಡು ಕಠಿಣ ಪರಿಶ್ರಮ ಹಾಕಿ ಎಂದು ಸಲಹೆ ನೀಡುತ್ತಿದ್ದೇನೆ. ತೀರಾ ಪ್ರತಿಕೂಲ ಪರಿಸ್ಥಿತಿಯಲ್ಲೂ ಜನ ಪಾಠಗಳನ್ನು ಕಲಿಯಬಹುದು" ಎಂದು ಫಲಿತಾಂಶದ ಬಳಿಕ ನೀಡಿದ ವೀಡಿಯೊ ಸಂದೇಶದಲ್ಲಿ ಹೇಳಿದ್ದಾರೆ.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News