ಜೀವ ಬೆದರಿಕೆಯ ದೂರು ನೀಡಿದ್ದ ಬಿಜೆಪಿ ನಾಯಕಿ ನೂಪುರ್ ಶರ್ಮಾಗೆ ದಿಲ್ಲಿ ಪೊಲೀಸರಿಂದ ಭದ್ರತೆ
ಹೊಸದಿಲ್ಲಿ: ಪ್ರವಾದಿ ಮುಹಮ್ಮದ್ ಅವರನ್ನು ನಿಂದಿಸಿರುವುದಕ್ಕೆ ಜೀವಬೆದರಿಕೆ ಬರುತ್ತಿದೆ ಎಂದು ದೂರು ದಾಖಲಿಸಿದ ಹಿನ್ನೆಲೆಯಲ್ಲಿ ಅಮಾನತುಗೊಂಡಿರುವ ಬಿಜೆಪಿ ವಕ್ತಾರೆ ನೂಪುರ್ ಶರ್ಮಾ ಹಾಗೂ ಅವರ ಕುಟುಂಬಕ್ಕೆ ದಿಲ್ಲಿ ಪೊಲೀಸರು ಭದ್ರತೆ ಒದಗಿಸಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ತನಗೆ ಬರುತ್ತಿರುವ ಕಿರುಕುಳ ಹಾಗೂ ಬೆದರಿಕೆಗಳನ್ನು ಉಲ್ಲೇಖಿಸಿ ಭದ್ರತೆ ಒದಗಿಸುವಂತೆ ಪೊಲೀಸರಿಗೆ ಶರ್ಮಾ ಮನವಿ ಮಾಡಿದ್ದರು. ಶರ್ಮಾ ದೂರಿಗೆ ಸಂಬಂಧಿಸಿ ಪೊಲೀಸರು ಎಫ್ ಐಆರ್ ದಾಖಲಿಸಿಕೊಂಡಿದ್ದರು.
"ತನ್ನ ಹೇಳಿಕೆಗಳಿಗೆ ತನಗೆ ಬೆದರಿಕೆಗಳು ಬರುತ್ತಿವೆ ಹಾಗೂ ಕಿರುಕುಳ ನೀಡಲಾಗುತ್ತಿದೆ ಎಂದು ಶರ್ಮಾ ಆರೋಪಿಸಿದ್ದರು. ಹೀಗಾಗಿ ಅವರ ಕುಟುಂಬಕ್ಕೆ ಪೊಲೀಸ್ ಭದ್ರತೆ ಒದಗಿಸಲಾಗಿದೆ" ಎಂದು ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಪ್ರವಾದಿ ಮುಹಮ್ಮದ್ ಕುರಿತು ಶರ್ಮಾ ನೀಡಿದ ಹೇಳಿಕೆ ಭಾರೀ ವಿವಾದ ಸೃಷ್ಟಿಸಿದ್ದು ಕೆಲವು ಮುಸ್ಲಿಂ ರಾಷ್ಟ್ರಗಳಿಂದ ತೀವ್ರ ಪ್ರತಿಭಟನೆ ವ್ಯಕ್ತವಾದ ಹಿನ್ನೆಲೆಯಲ್ಲಿ ಬಿಜೆಪಿ ರವಿವಾರ ಶರ್ಮಾ ಅವರನ್ನು ಅಮಾನತುಗೊಳಿಸಿದೆ ಹಾಗೂ ದಿಲ್ಲಿ ಘಟಕದ ಮಾಧ್ಯಮ ಮುಖ್ಯಸ್ಥ ನವೀನ್ ಕುಮಾರ್ ಜಿಂದಾಲ್ ಅವರನ್ನು ಉಚ್ಚಾಟಿಸಿದೆ.