ಸಾಲ ಮರುಪಾವತಿಸದಿದಕ್ಕೆ ಬ್ಯಾಂಕಿನಿಂದ ಮನೆ, ಜಾಗ ಜಪ್ತಿ: ಕೂಲಿ ಕಾರ್ಮಿಕ ಆತ್ಮಹತ್ಯೆ
ಪಡುಬಿದ್ರಿ : ಕೊರೋನದಿಂದ ಬ್ಯಾಂಕ್ ಸಾಲ ಮರು ಪಾವತಿಸಲಾಗದೆ ಹೊಸ ಮನೆ ಮತ್ತು ಜಾಗ ಜಪ್ತಿಯಾದ ಚಿಂತೆಯಲ್ಲಿ ಮನನೊಂದ ವ್ಯಕ್ತಿಯೊಬ್ಬರು ಆತ್ಮಹತ್ಯೆ ಮಾಡಿಕೊಂಡ ಘಟನೆ ತೆಂಕ ಎರ್ಮಾಳು ಗ್ರಾಮದ ಪೂಂದಾಡು ಎಂಬಲ್ಲಿ ಜೂ.7ರಂದು ರಾತ್ರಿ ವೇಳೆ ನಡೆದಿದೆ.
ಮೃತರನ್ನು ಎರ್ಮಾಳು ಗ್ರಾಮ ಪೂಂದಾಡು ದರ್ಖಾಸು ನಿವಾಸಿ ಅಶೋಕ ವಿ.ಮೂಲ್ಯ (39) ಎಂದು ಗುರುತಿಸಲಾಗಿದೆ.
ಇವರು ಕೂಲಿ ಕೆಲಸ ಮಾಡಿ ಕೊಂಡಿದ್ದು, ಪೆರ್ಡೂರು ಗ್ರಾಮದ ಜೋಗಿಬೆಟ್ಟು ಎಂಬಲ್ಲಿ ಜಾಗ ಖರೀದಿ ಮಾಡಿ ಮನೆ ಕಟ್ಟಲು ಬ್ಯಾಂಕಿನಿಂದ ಸುಮಾರು 6 ಲಕ್ಷ ರೂ ಸಾಲ ಪಡೆದಿದ್ದರು. ಅರ್ಧದಷ್ಟು ಮನೆ ಕಾಮಗಾರಿ ಮುಗಿಸಿದ್ದು, ಕೊರೋನ ಕಾರಣದಿಂದ ಬ್ಯಾಂಕಿನ ಸಾಲವನ್ನು ಮರುಪಾವತಿ ಮಾಡಲು ಸಾಧ್ಯವಾಗಿರಲಿಲ್ಲ ಎನ್ನಲಾಗಿದೆ.
ಇದರಿಂದ ಬ್ಯಾಂಕಿನವರು ಮನೆ ಮತ್ತು ಜಾಗವನ್ನು ಸೀಝ್ ಮಾಡಿದ್ದರು. ಅದೇ ಚಿಂತೆಯಲ್ಲಿ ಅವರು ಮನೆಯಲ್ಲಿ ಮದ್ಯದೊಂದಿಗೆ ವಿಷ ಬೆರೆಸಿ ಕುಡಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.