ರಾಜ್ಯದ ಗ್ರಾಮೀಣ ಬ್ಯಾಂಕುಗಳಲ್ಲಿ 832 ಹುದ್ದೆಗಳ ನೇಮಕಾತಿಗೆ ಅರ್ಜಿ ಆಹ್ವಾನ
ಉಡುಪಿ : ಐಬಿಪಿಎಸ್ ಮುಖಾಂತರ ದೇಶದ 43 ಗ್ರಾಮೀಣ ಬ್ಯಾಂಕುಗಳಲ್ಲಿ ಖಾಲಿ ಇರುವ ಒಟ್ಟು 8106 ವಿವಿಧ ಹುದ್ದೆಗಳಿಗೆ ನೇಮಕಾತಿ ಪರೀಕ್ಷೆಗೆ ಅರ್ಜಿ ಸಲ್ಲಿಸಲು ಜೂ.27 ಕೊನೆಯ ದಿನವಾಗಿದೆ.
ರಾಜ್ಯದ ಕರ್ನಾಟಕ ವಿಕಾಸ ಗ್ರಾಮೀಣ ಬ್ಯಾಂಕ್ ಹಾಗೂ ಕರ್ನಾಟಕ ಗ್ರಾಮೀಣ ಬ್ಯಾಂಕುಗಳಲ್ಲಿ ಒಟ್ಟು ಸೇರಿ 832 ಹುದ್ದೆಗಳಿಗೆ ಅರ್ಜಿ ಆಹ್ವಾನಿಸ ಲಾಗಿದೆ. ಇದರಲ್ಲಿ ೧೭೩ ಆಫೀಸ್ ಅಸಿಸ್ಟೆಂಟ್, ೪೨೯ ಆಫೀಸರ್ಸ್ ಸ್ಕೇಲ್-೧, ೨೩೦ ಆಫೀಸರ್ಸ್ ಸ್ಕೇಲ್-೨ ಹುದ್ದೆಗಳಿಗೆ ನೇಮಕಾತಿ ನಡೆಯಲಿದೆ.
ಇದಕ್ಕಾಗಿ ಪೂರ್ವಭಾವಿ ಪರೀಕ್ಷೆಗಳನ್ನು ಆಗಸ್ಟ್ ತಿಂಗಳಲ್ಲಿ ಹಾಗೂ ಮುಖ್ಯ ಪರೀಕ್ಷೆ ಸೆಪ್ಟಂಬರ್-ಅಕ್ಟೋಬರ್ ತಿಂಗಳಲ್ಲಿ ನಡೆಸಲು ಉದ್ದೇಶಿಸಲಾಗಿದೆ. ಕೇಂದ್ರ ಸರಕಾರದ ವಿಶೇಷ ಆದೇಶದ ಪ್ರಕಾರ ರಾಜ್ಯದ ಅಭ್ಯರ್ಥಿಗಳು ಕನ್ನಡ, ಕೊಂಕಣಿ, ಹಿಂದಿ ಹಾಗೂ ಇಂಗ್ಲೀಷ್‌ನಲ್ಲಿ ಪರೀಕ್ಷೆ ಬರೆಯಲು ಅವಕಾಶ ಮಾಡಿ ಕೊಡಲಾಗಿದೆ ಎಂದು ಐಬಿಪಿಎಸ್ ತಿಳಿಸಿದೆ.
ಅರ್ಜಿ ಶುಲ್ಕ ಸಾಮಾನ್ಯ ಅಭ್ಯರ್ಥಿಗಳಿಗೆ 850 ರೂ. ಹಾಗೂ ಎಸ್ಸಿ, ಎಸ್ಟಿ, ವಿಶೇಷ ಚೇತನರು, ಮಾಜಿ ಸೈನಿಕ ಅಭ್ಯರ್ಥಿಗಳಿಗೆ 175 ರೂ. ನಿಗದಿಯಾಗಿದೆ. ಬ್ಯಾಂಕ್ ಸೇವಾ ಶುಲ್ಕ ಮತ್ತು ಇಂಟಿಮೇಷನ್ ಫೀ ಪ್ರತ್ಯೇಕವಾಗಿ ಪಾವತಿಸ ಬೇಕು. ಆನ್‌ಲೈನ್ ಮೂಲಕ ಮಾತ್ರ ಅರ್ಜಿ ಸಲ್ಲಿಸಲು ಅವಕಾಶ ಕಲ್ಪಿಸಲಾಗಿದೆ.
ಆಸಕ್ತ ಪದವೀಧರ ಅಭ್ಯರ್ಥಿಗಳು ಕೂಡಲೇ ಅರ್ಜಿ ಸಲ್ಲಿಸಲು ವೆಬ್‌ಸೈಟ್ -https://www.ibps.in- ಲಿಂಕ್ ಮೂಲಕ ನೊಂದಣಿ ಮಾಡಿಕೊಂಡು ಅರ್ಜಿ ಸಲ್ಲಿಸಬಹುದು. ಜಿಲ್ಲೆಯ ಪದವೀಧರರು ಇದರ ಸದುಪಯೋಗ ಪಡಿಸಿಕೊಳ್ಳುವಂತೆ ಉಡುಪಿ ಲೀಡ್ ಬ್ಯಾಂಕ್ ಮ್ಯಾನೇಜರ್ ಪಿ.ಎಂ.ಪಿಂಜಾರ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.