ಉಡುಪಿ: ಪಠ್ಯಕ್ರಮ ರದ್ಧತಿಗೆ ಆಗ್ರಹಿಸಿ ದಸಂಸದಿಂದ ಪ್ರತಿಭಟನೆ

Update: 2022-07-03 07:56 GMT

ಉಡುಪಿ : ಕರ್ನಾಟಕ ದಲಿತ ಸಂಘರ್ಷ ಸಮಿತಿ(ಅಂಬೇಡ್ಕರ್ ವಾದ) ಉಡುಪಿ ಜಿಲ್ಲಾ ಶಾಖೆ ಹಾಗೂ ಉಡುಪಿಯ ಜನಪರ ಸಂಘಟನೆಗಳ ಸಹಭಾಗಿತ್ವದಲ್ಲಿ ಪಠ್ಯಕ್ರಮ ರದ್ಧತಿಗೆ ಆಗ್ರಹಿಸಿ ರವಿವಾರ ಉಡುಪಿ ಅಜ್ಜರಕಾಡು ಹುತಾತ್ಮ ಸ್ಮಾರಕದ ಎದುರು ಶಿಕ್ಷಣ ಸಚಿವ ನಾಗೇಶ್ ಹಾಗೂ ರೋಹಿತ್ ಚಕ್ರತೀರ್ಥರ ಪ್ರತಿಕೃತಿ ದಹಿಸಿ ಪ್ರತಿಭಟನೆ ನಡೆಸಲಾಯಿತು.

ಅಜ್ಜರಕಾಡಿನಿಂದ ಹೊರಟ ಸಚಿವ ನಾಗೇಶ್ ಕುಮಾರ್ ಹಾಗೂ ರೋಹಿತ್ ಚಕ್ರತೀರ್ಥರ ಪ್ರತಿಕೃತಿಯ ಅಣಕು ಶವಯಾತ್ರೆಯು ಜೋಡುಕಟ್ಟೆ, ಲಯನ್ಸ್ ಸರ್ಕಲ್ ಬಳಿ ತಿರುಗಿ ವಾಪಾಸ್ಸು ಅಜ್ಜರಕಾಡಿಗೆ ಆಗಮಿಸಿತು. ಬಳಿಕ ಪ್ರತಿಭಟನಾ ಸಭೆಯನ್ನುದ್ದೇಶಿಸಿ ಮಾತನಾಡಿದ ಹಿರಿಯ ಚಿಂತಕ ಪ್ರೊ.ಫಣಿರಾಜ್, ಇದು ಶಿಕ್ಷಣವನ್ನು ಅರೆಸೆಸ್ಸೀಕರಣಗೊಳಿಸುವ ದೊಡ್ಡ ಹಗರಣವಾಗಿದೆ. ಸಂವಿಧಾನದ ಎಲ್ಲ ವಿಧಿ ವಿಧಾನಗಳನ್ನು ಪಾಲಿಸಬೇಕು ಮತ್ತು ಸಂವಿಧಾನದ ಆತ್ಮವನ್ನು ರಕ್ಷಿಸಬೇಕಾದ ರಾಜ್ಯ ಸರಕಾರ ಸಂವಿಧಾನ ವಿರೋಧಿಯಾಗಿ ಸಂವಿಧಾನವನ್ನೇ ಕೊಲ್ಲುವ ಶಿಕ್ಷಣದ ಆರೆಸೆಸ್ಸೀಕರಣವನ್ನು ಮಾಡಲಾಗುತ್ತಿದೆ ಎಂದು ದೂರಿದರು.

ದಸಂಸ ಉಡುಪಿ ಜಿಲ್ಲಾ ಪ್ರಧಾನ ಸಂಚಾಲಕ ಸುಂದರ್ ಮಾಸ್ಟರ್, ವೆಲ್‌ಫೇರ್ ಪಾರ್ಟಿ ಆಫ್ ಇಂಡಿಯಾ ಇದರ ಉಡುಪಿ ಜಿಲ್ಲಾಧ್ಯಕ್ಷ ಅಬ್ದುಲ್ ಅಝೀಝ್ ಉದ್ಯಾವರ ಮಾತನಾಡಿದರು.

ಪ್ರತಿಭಟನೆಯಲ್ಲಿ ದಸಂಸ ಮುಖಂಡರಾದ ಶ್ಯಾಮ್‌ರಾಜ್ ಬಿರ್ತಿ, ಮಂಜುನಾಥ್ ಬಾಳ್ಕುದ್ರು, ಪರಮೇಶ್ವರ ಉಪ್ಪೂರು, ಶಿವಾನಂದ ಮೂಡಬೆಟ್ಟು, ಶಂಕರ್ ಚೇಂಡ್ಕಳ, ಯುವರಾಜ್ ಮೊದಲಾದವರು ಉಪಸ್ಥಿತರಿದ್ದರು.   

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News