ಅನ್ಯಾಯಕ್ಕೊಳಗಾಗಿರುವ ಝುಬೈರ್‌ ಜೊತೆಗೆ ನಾವು ದೃಢವಾಗಿ ನಿಲ್ಲುತ್ತೇವೆ: ಆಲ್ಟ್‌ ನ್ಯೂಸ್‌ ಪ್ರಕಟನೆ

Update: 2022-07-09 16:27 GMT

ಹೊಸದಿಲ್ಲಿ: ಹಿಂದೂಗಳ ಧಾರ್ಮಿಕ ಭಾವನೆಗೆ ಧಕ್ಕೆ ತಂದ ಆರೋಪದ ಮೇರೆಗೆ ಆಲ್ಟ್‌ ನ್ಯೂಸ್‌ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ ರನ್ನು ಪೊಲೀಸರು ಬಂಧಿಸಿದ್ದರು. ಇದೀಗ ಅವರ ವಿರುದ್ಧ ಹಲವು ಆರೋಪಗಳನ್ನು ಹೊರಿಸುತ್ತಿರುವ ಕುರಿತು ಆಲ್ಟ್‌ ನ್ಯೂಸ್‌, "ನಾವು ಝುಬೈರ್‌ ರ ಹಿಂದೆ ಸ್ಥಿರವಾಗಿ ನಿಂತು ಅವರನ್ನು ಬೆಂಬಲಿಸುತ್ತೇವೆ" ಎಂದು ಪ್ರಕಟನೆಯಲ್ಲಿ ತಿಳಿಸಿದೆ.

ತಮ್ಮ ಸಾಮಾಜಿಕ ತಾಣ ಖಾತೆಗಳಲ್ಲಿ ಈ ಕುರಿತು ಪೋಸ್ಟ್‌ ಮಾಡಿದ ಸಂಸ್ಥೆಯು, "ನಮ್ಮ ಸ್ನೇಹಿತ, ಸಹೋದ್ಯೋಗಿ ಹಾಗೂ ಸಹಸಂಸ್ಥಾಪಕ ಮುಹಮ್ಮದ್‌ ಝುಬೈರ್‌ರನ್ನು ಬೇಟೆಯಾಡುವುದನ್ನು ಅಧಿಕಾರದಲ್ಲಿರುವವರು ಮುಂದುವರಿಸಿದ್ದಾರೆ. ಒಂದರ ಬಳಿಕ ಒಂದು ಪ್ರಕರಣದಲ್ಲಿ ಅವರನ್ನು ಸಿಲುಕಿಸಲಾಗುತ್ತಿದೆ. ಸುಪ್ರೀಂ ಕೋರ್ಟ್ ಮಧ್ಯಂತರ ತೀರ್ಪು ಪ್ರಕಟಿಸಿ ಸೀತಾಪುರ ಪ್ರಕರಣದಲ್ಲಿ ಅವರಿಗೆ ಜಾಮೀನು ನೀಡಿದ ಬೆನ್ನಲ್ಲೇ ದ್ವೇಷ ಭಾಷಣ ನೀಡಿದವರನ್ನು ದ್ವೇಷಕೋರರು ಎಂದು ಕರೆದುದಕ್ಕೆ ಇನ್ನೊಂದು ಪ್ರಕರಣ ದಾಖಲಿಸಲಾಗಿದೆ. ಇದೀಗ ನಿರ್ದಿಷ್ಟ ಚಾನೆಲ್‌ ಒಂದರ ಪೋಸ್ಟ್‌ ಕುರಿತು ಫ್ಯಾಕ್ಟ್‌ ಚೆಕ್‌ ಮಾಡಿದ್ದಕ್ಕೆ ಪ್ರಕರಣವನ್ನು ದಾಖಲಿಸಲಾಗಿದೆ."

"ಝುಬೈರ್‌ ಬಂಧನದ ಕುರಿತು ಪ್ರಶ್ನಿಸಲು ಹಲವು ಪತ್ರಕರ್ತರು ಮಾಧ್ಯಮಗಳು ಹಿಂಜರಿಯುತ್ತಿದ್ದಾರೆ. ಆದರೂ, ಆಲ್ಟ್‌ ನ್ಯೂಸ್‌ ಅವರ ಹಿಂದೆ ದೃಢವಾಗಿ ನಿಲ್ಲಲಿದೆ. ಅವರ ಎಲ್ಲಾ ಹೋರಾಟಗಳನ್ನು ಬೆಂಬಲಿಸುತ್ತಿದೆ. ಇದು ಝುಬೈರ್‌ ರ ವೈಯಕ್ತಿಕ ಹೋರಾಟವಲ್ಲ. ಕೊಳೆದ ಆಡಳಿತ ವ್ಯವಸ್ಥೆಯ ವಿರುದ್ಧ ಹೋರಾಡಿದ್ದಕ್ಕಾಗಿ ಝುಬೈರ್‌ ಗೆ ಕಿರುಕುಳ ನೀಡಲಾಗುತ್ತಿದೆ ಮತ್ತು ಇದು ನಮ್ಮೆಲ್ಲರ ಸಾಮೂಹಿಕ ಹೋರಾಟವಾಗಿದೆ" ಎಂದು ಪ್ರಕಟನೆಯಲ್ಲಿ ತಿಳಿಸಿದೆ. 

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News