ಉತ್ತರಪ್ರದೇಶ ಶಾಸಕನಿಗೆ ಕೆಸರಿನ ಸ್ನಾನ: ಕಾರಣವೇನು ಗೊತ್ತೇ?
ಗೋರಖ್‍ಪುರ: ಮುಂಗಾರು ಈ ಭಾಗದಲ್ಲಿ ಕಣ್ಣುಮುಚ್ಚಾಲೆಯಾಡುತ್ತಿದ್ದು, ಮಳೆಗಾಗಿ ಮಹಾರಾಜಗಂಜ್ ಜಿಲ್ಲೆಯ ಮಹಿಳೆಯರ ಗುಪೊಂದು ಶಾಸಕ ಹಾಗೂ ನಗರ ಪಾಲಿಕೆ ಅಧ್ಯಕ್ಷನನ್ನು ಕೆಸರಿನಲ್ಲಿ ಮುಳುಗಿಸುವ ಧಾರ್ಮಿಕ ವಿಧಿ ನೆರವೇರಿಸಿದ ಸ್ವಾರಸ್ಯಕರ ಪ್ರಸಂಗ ವರದಿಯಾಗಿದೆ.
ನಗರದ ಮುಖ್ಯಸ್ಥನಿಗೆ ಕೆಸರಿನ ಸ್ನಾನ ಮಾಡಿಸಿದರೆ, ವರುಣದೇವ ಮಳೆ ಕರುಣಿಸುತ್ತಾನೆ ಎಂಬ ಹಳೆಯ ನಂಬಿಕೆ ಈ ಭಾಗದಲ್ಲಿದೆ. ಪಿಪರ್‍ದೇವೂರ ಪ್ರದೇಶದದ ಮಹಿಳೆಯರು ಸ್ಥಳೀಯ ಶಾಸಕ ಜೈಮಂಗಲ್ ಕನೋಜಿಯಾ ಹಾಗೂ ನಗರ ಪಾಲಿಕೆ ಅಧುಕ್ಷ ಕೃಷ್ಣಗೋಪಾಲ್ ಜೈಸ್ವಾಲ್ ಅವರಿಗೂ ಕೆಸರಿನ ಸ್ನಾನ ಮಾಡಿಸಿದ್ದಾರೆ.
"ಮಳೆಯ ಕೊರತೆಯಿಂಧಾಗಿ ಭತ್ತದ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮವಾಗಲಿದೆ. ಆದ್ದರಿಂದ ಕೆಸರಿನ ಸ್ನಾನ ಇಂದ್ರನನ್ನು ಒಲಿಸಿ ಮಳೆಗೆ ಕಾರಣವಾಗುತ್ತದೆ" ಎಂದು ಸ್ಥಳೀಯ ಮಹಿಳೆ ಮುನ್ನಿದೇವಿ ಹೇಳುತ್ತಾರೆ. ಮಕ್ಕಳು ಕೆಸರಿನಲ್ಲಿ ಸ್ನಾನ ಮಾಡಿದರೂ ಇಂದ್ರದೇವ ಸಂಪ್ರೀತನಾಗುತ್ತಾನೆ ಎಂಬ ನಂಬಿಕೆ ಇದ್ದು ಇದಕ್ಕೆ ಕಲಾ ಕಲೋತಿ ಎಂದು ಕರೆಯಲಾಗುತ್ತದೆ ಎಂದು ವಿವರಿಸಿದರು.
ಮಳೆಗಾಗಿ ಕೆಸರ ಸ್ನಾನ ಮಾಡಿಸಿಕೊಂಡ ನಗರ ಪಾಲಿಕೆ ಅಧ್ಯಕ್ಷ ಜೈಸ್ವಾಲ್ ಹಾಗೂ ಶಾಸಕ ಕನೋಜಿಯಾ ಅವರಿಗೆ ಈ ಬಗ್ಗೆ ಸಂತಸವಿದೆ. "ಮೈಸುಡುವ ಬಿಸಿಲಿನಿಂದ ಜನ ಜರ್ಜರಿತರಾಗಿದ್ದಾರೆ. ಇಂದ್ರದೇವನನ್ನು ಒಲಿಸಲು ಕೆಸರಿನ ಸ್ನಾನ ಮಾಡುವುದು ಹಳೆಯ ನಂಬಿಕೆ. ಮಳೆಗಾಗಿ ನಗರದ ಮಹಿಳೆಯರು ನಮಗೆ ಕೆರಿಸನ ಸ್ನಾನ ಮಾಡಿಸಿದ್ದಾರೆ" ಎಂದು ಕನೋಜಿಯಾ ಹೇಳಿದ್ದಾರೆ.