ಕುಂದಾಪುರದಲ್ಲಿ ವಕೀಲರ ಸಂಘದಿಂದ ಪ್ರತಿಭಟನೆ

Update: 2022-08-04 12:36 GMT

ಕುಂದಾಪುರ, ಆ.4: ಜನನ ಮತ್ತು ಮರಣಗಳ ನೋಂದಣಿ ಕಾನೂನಿನಡಿ ಬರುವ ಪ್ರಕರಣಗಳ ದಾಖಲೆ, ವಿಚಾರಣೆ ಮತ್ತು ಇತ್ಯರ್ಥಪಡಿಸುವ ಅಧಿಕಾರ ವನ್ನು ಜೆಎಂಎಫ್‌ಸಿ ನ್ಯಾಯಾಲಯಗಳಿಂದ ಕಂದಾಯ ಉಪವಿಭಾಗಾಧಿಕಾರಿ ಕಚೇರಿಗೆ ವರ್ಗಾಯಿಸಿರುವ ಆದೇಶವನ್ನು ಕೂಡಲೇ ಹಿಂಪಡೆಯಬೇಕು ಹಾಗೂ ಹಿಂದಿನ ವ್ಯವಸ್ಥೆಯನ್ನೇ ಮುಂದುವರಿಸಬೇಕೆಂದು ಆಗ್ರಹಿಸಿ ಕುಂದಾಪುರ ವಕೀಲರ ಸಂಘದ ವತಿಯಿಂದ ನ್ಯಾಯವಾದಿ ಗಳು ಗುರುವಾರ ಪ್ರತಿಭಟನೆ ನಡೆಸಿದರು.

ಕುಂದಾಪುರ ವಕೀಲರ ಸಂಘದ ಅಧ್ಯಕ್ಷ ಬನ್ನಾಡಿ ಸೋಮನಾಥ ಹೆಗ್ಡೆ ಮಾತನಾಡಿ, ಜನನ ಮತ್ತು ಮರಣ ನೋಂದಣಿ ಕಾಯ್ದೆಗೆ ತಿದ್ದುಪಡಿ ತಂದಿರುವುದರಿಂದ ಸಾರ್ವಜನಿಕರಿಗೆ ಅನ್ಯಾಯವಾಗುತ್ತದೆ. ಜನನ ಮತ್ತು ಮರಣ ಪ್ರಮಾಣ ಪತ್ರಗಳನ್ನು ಸ್ಥಳೀಯ ನ್ಯಾಯಾಲಯದಲ್ಲಿ ಪ್ರಕರಣ ದಾಖಲಿಸಿ ಪ್ರಮಾಣ ಪತ್ರ ಪಡೆಯಲು ಅನುಕೂಲವಾಗಿತ್ತು. ಆದರೆ ಈಗ ಸರ್ಕಾರದ ಸುತ್ತೋಲೆಯಿಂದ ಉಪವಿಭಾಗಾಧಿಕಾರಿಗಳ ಕಚೇರಿಗೆ ಹೋಗಲಿದ್ದು ಇದು ಅಸಾಂವಿಧಾನಿಕ ನಿರ್ಧಾರ ಎಂದರು.

ಜನನ ಮತ್ತು ಮರಣ ಪ್ರಮಾಣ ಪತ್ರಗಳ ಪ್ರಕರಣಗಳ ವಿಚಾರಣೆಯನ್ನು ಉಪವಿಭಾಗಾಧಿಕಾರಿಗಳ ವ್ಯಾಪ್ತಿಗೆ ನೀಡಿರುವ ಅಧಿಸೂಚನೆಯನ್ನು ಹಿಂದಕ್ಕೆ ಪಡೆದು, ಮೊದಲಿನಂತೆ ಜೆಎಂಎಫ್‌ಸಿ ನ್ಯಾಯಾಲಯಗಳಿಗೆ ನೀಡಬೇಕೆಂದು ಅವರು ಒತ್ತಾಯಿಸಿದರು. ಒಂದು ವೇಳೆ ಅಧಿಸೂಚನೆ ಹಿಂಪಡೆಯದಿದ್ದಲ್ಲಿ ಅನಿರ್ಧಿಷ್ಟ ಹೋರಾಟ ನಡೆಸುವುದಾಗಿ ಎಚ್ಚರಿಸಿದರು.

ಕುಂದಾಪುರ ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಜೆ. ಶ್ರೀನಾಥ್ ರಾವ್, ಜೊತೆ ಕಾರ್ಯದರ್ಶಿ ರಿತೇಶ್ ಬಿ ಹಾಗೂ ವಕೀಲರ ಸಂಘದ ಹಿರಿಯ-ಕಿರಿಯ-ಮಹಿಳಾ ವಕೀಲರು ಪ್ರತಿಭಟನೆಯಲ್ಲಿ ಪಾಲ್ಗೊಂಡರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News