8030 ನಾಡದೋಣಿಗಳಿಗೆ ತಲಾ 300 ಲೀ. ಸೀಮೆಎಣ್ಣೆ ವಿತರಣೆ ಆದೇಶ ಶೀಘ್ರ ಅನುಷ್ಠಾನಕ್ಕೆ ನಾಡದೋಣಿ ಮೀನುಗಾರರ ಒಕ್ಕೂಟ ಆಗ್ರಹ

Update: 2022-08-08 14:06 GMT

ಉಡುಪಿ, ಆ.೮: 2022-23ನೇ ಸಾಲಿನಿಂದ ಮೀನುಗಾರಿಕೆ ಇಲಾಖೆಯ ಆಡಳಿತ ವ್ಯಾಪ್ತಿಯಲ್ಲಿ ಬರುವ ಮೋಟಾರಿಕೃತ ಮೀನುಗಾರಿಕೆ ನಡೆಸುವ ಕರ್ನಾಟಕ ಕರಾವಳಿಯ 8030 ನಾಡದೋಣಿಗಳಿಗೆ ಎರಡು ತಿಂಗಳ ನಿಷೇಧಿತ ಅವಧಿಯನ್ನು ಹೊರತುಪಡಿಸಿ ವಾರ್ಷಿಕ 10 ತಿಂಗಳ ಅವಧಿಗೆ ಮಾಸಿಕ ತಲಾ 300 ಲೀಟರ್‌ನಂತೆ ಸೀಮೆಎಣ್ಣೆ ವಿತರಿಸಲು ರಾಜ್ಯ ಸರಕಾರ ಆದೇಶ ಹೊರಡಿ ಸಿದ್ದು, ಇದನ್ನು ಈ ತಿಂಗಳ ಕೊನೆಯೊಳಗೆ ಅನುಷ್ಠಾನಕ್ಕೆ ತರಬೇಕು ಎಂದು ಕರ್ನಾಟಕ ರಾಜ್ಯ ಸಂಪ್ರದಾಯಿಕ ನಾಡದೋಣಿ ಮೀನುಗಾರರ ಒಕ್ಕೂಟ ಒತ್ತಾಯಿಸಿದೆ.

ಉಡುಪಿಯಲ್ಲಿಂದು ಕರೆದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಒಕ್ಕೂಟದ ರಾಜ್ಯಾಧ್ಯಕ್ಷ ಆನಂದ ಖಾರ್ವಿ ಉಪ್ಪುಂದ, ಮೀನುಗಾರಿಕೆ ಇಲಾಖೆಯ ವ್ಯಾಪ್ತಿಗೆ ಒಳಪಡುವ ಹಾಗೂ ಆಹಾರ ನಾಗರಿಕ ಸರಬರಾಜು ಮತ್ತು ಗ್ರಾಹಕರ ವ್ಯವಹಾರಗಳ ಇಲಾಖೆಯಿಂದ ಸಬ್ಸಿಡಿಯುಕ್ತ ಸೀಮೆಎಣ್ಣೆ ಪಡೆಯುತ್ತಿರುವ ೪೫೧೪(ಉತ್ತರ ಕನ್ನಡ- ೯೯೦, ದಕ್ಷಿಣ ಕನ್ನಡ- ೨೬೧೦, ಉಡುಪಿ- ೯೧೪) ಯಾಂತ್ರೀಕೃತ ಮೀನುಗಾರಿಕೆ ನಾಡದೋಣಿಗಳಿಗೆ ಸೀಮೆಎಣ್ಣೆ ಪ್ರಮಾಣವನ್ನು ಪ್ರತಿ ತಿಂಗಳಿಗೆ ತಲಾ ೩೦೦ಲೀಟರ್‌ಗಳಿಗೆ ಹೆಚ್ಚಿಸಿ ಪ್ರತಿ ಲೀಟರ್‌ಗೆ ೧೬.೫೦ರೂ. ನಲ್ಲಿ ವಿತರಿಸಲು ೨೦೧೩ರಲ್ಲಿ ಆದೇಶ ನೀಡಲಾಗಿತ್ತು ಎಂದರು.

ಪ್ರಸ್ತುತ ಪರವಾನಿಗೆ ಪಡೆದ ದೋಣಿಗಳ ಸಂಖ್ಯೆಯು ೮೦೩೦(ದ.ಕ.- ೧೩೪೫, ಉಡುಪಿ- ೪೮೯೬, ಉ.ಕ.-೧೭೮೯) ಇದ್ದು, ಈಗ ನೀಡುತ್ತಿರುವ ಪಡಿತರ ಮಾಸಿಕ ಮಿತಿ ೧೩೫೫ಕೆ.ಎಲ್. ಆಗಿದೆ. ಇದರಲ್ಲಿ ಯಾವುದೇ ಏರಿಕೆ ಆಗಿರಲಿಲ್ಲ. ಪ್ರಸ್ತುತ ಚಾಲನೆಯಲ್ಲಿರುವ ಮೀನುಗಾರಿಕೆ ನಾಡದೋಣಿಗಳಿಗೆ ಅನುಗುಣವಾಗಿ ಪ್ರತಿ ತಿಂಗಳು ಪ್ರತಿ ದೋಣಿಗೆ ೩೦೦ಲೀಟರ್‌ನಂತೆ ವಾರ್ಷಿಕ ಒಟ್ಟು ೨೪೦೯೦ ಕೆ.ಎಲ್. ಸೀಮೆಎಣ್ಣೆ ಅವಶ್ಯಕವಿದ್ದು, ಈ ಹಿನ್ನೆಲೆಯಲ್ಲಿ ಕಾರ್ಯಾಚರಣೆಯಲ್ಲಿ ರುವ ೮೦೩೦ ದೋಣಿಗಳ ಸಂಖ್ಯೆಗೆ ಅನುಗುಣವಾಗಿ ಮಾಸಿಕ ತಲಾ ೩೦೦ ಲೀಟರ್‌ನಂತೆ ಸೀಮೆಎಣ್ಣೆ ವಿತರಿಸಬೇಕು ಎಂದು ಒತ್ತಾಯಿಸಲಾಗಿತ್ತು. ಈ ಬೇಡಿಕೆಗೆ ಸ್ಪಂದಿಸಿರುವ ರಾಜ್ಯ ಸರಕಾರ ಪರಿಷ್ಕೃತ ಆದೇಶ ಹೊರಡಿಸಿದೆ ಎಂದು ಅವರು ಮಾಹಿತಿ ನೀಡಿದರು.

ಅದಕ್ಕಾಗಿ ರಾಜ್ಯದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಹಾಗೂ ಮೀನುಗಾರಿಕಾ ಸಚಿವ ಎಸ್.ಅಂಗಾರ ಅವರಿಗೆ ಅಭಿನಂದನೆಗಳು. ಈ ಆದೇಶ ಕೇವಲ ಕಾಗದದಲ್ಲಿಯೇ ಉಳಿಯದೆ ಈ ತಿಂಗಳ ಅಂತ್ಯದೊಳಗೆ ಅನುಷ್ಠಾನಕ್ಕೆ ಬಂದು ಮೀನುಗಾರರಿಗೆ ಪ್ರಯೋಜನ ಆಗಬೇಕೆಂದು ಅವರು ಆಗ್ರಹಿಸಿದರು. ಸುದ್ದಿಗೋಷ್ಠಿಯಲ್ಲಿ ಒಕ್ಕೂಟದ ರಾಜ್ಯ ಪ್ರಧಾನ ಕಾರ್ಯದರ್ಶಿ ಗೋಪಾಲ್ ಆರ್.ಕೆ. ಉಪಸ್ಥಿತರಿದ್ದರು.

ಪ್ರಾಕೃತಿಕ ವಿಕೋಪ: 3 ಕೋಟಿ ರೂ. ನಷ್ಟ

ಕೆಲವು ಸಮಯದ ಹಿಂದೆ ಸುರಿದ ಭಾರೀ ಮಳೆಯಿಂದಾಗಿ ಉಡುಪಿ ಜಿಲ್ಲೆಯ ೬೪ ನಾಡದೋಣಿಗಳಿಗೆ ಹಾನಿಯಾಗಿದ್ದು, ಇದರಲ್ಲಿ ೧೦ ದೋಣಿಗಳು ಸಂಪೂರ್ಣ ನಾಶವಾಗಿದೆ. ಇದರಿಂದ ಸುಮಾರು ೩ ಕೋಟಿ ರೂ. ನಷ್ಟವಾಗಿದೆ ಎಂದು ಆನಂದ ಖಾರ್ವಿ ಉಪ್ಪುಂದ ತಿಳಿಸಿದರು.

ಈ ಬಾರಿಯ ಮೀನುಗಾರಿಕೆ ಆರಂಭದಲ್ಲಿ ನಾಡದೋಣಿಯವರಿಗೆ ದೊಡ್ಡ ಹೊಡೆತ ಬಿದ್ದಿದ್ದು, ಸರಕಾರ ಹಾನಿಯಾಗಿರುವ ದೋಣಿಗಳಿಗೆ ಸೂಕ್ತ ಪರಿಹಾರ ನೀಡಬೇಕು. ಅದೇ ರೀತಿ ಉತ್ತರ ಕನ್ನಡ ಹಾಗೂ ದಕ್ಷಿಣ ಕನ್ನಡ ಜಿಲ್ಲೆಗಳ ದೋಣಿ ಗಳಿಗೂ ಪರಿಹಾರ ಕಲ್ಪಿಸಬೇಕು ಎಂದು ಅವರು ಒತ್ತಾಯಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News