ಇಂದು ಸಾಂಸ್ಕೃತಿಕ ದಿವಾಳಿಕೋರತನ ಎದ್ದು ಕಾಣಿಸುತ್ತಿದೆ: ನಾ. ಮೊಗಸಾಲೆ

Update: 2022-08-09 14:00 GMT

ಉಡುಪಿ, ಆ.9: ಸಾಹಿತ್ಯವಲಯದಲ್ಲಿ ಇಂದು ಸಾಂಸ್ಕೃತಿಕ ದಿವಾಳಿಕೋರತನ ಎದ್ದು ಕಾಣುತ್ತಿದೆ. ಕನ್ನಡ ಕಾವ್ಯ ಇಂದು ನಿರ್ವಾತ ಸ್ಥಿತಿ ತಲುಪಿದೆ ಎಂದು ಖ್ಯಾತ ಕಾದಂಬರಿಕಾರ, ಕಾಂತಾವರ ಕನ್ನಡ ಸಂಘದ ಅಧ್ಯಕ್ಷ ಡಾ.ನಾ.ಮೊಗಸಾಲೆ ಹೇಳಿದ್ದಾರೆ.

ಉಡುಪಿಯ ರಾಷ್ಟ್ರಕವಿ ಗೋವಿಂದ ಪೈ ಸಂಶೋಧನಾ ಕೇಂದ್ರ, ಮಣಿಪಾಲ ಅಕಾಡೆಮಿ ಆಫ್ ಹೈಯರ್ ಎಜ್ಯುಕೇಷನ್‌ಗಳ ಜಂಟಿ ಆಶ್ರಯದಲ್ಲಿ ಎಂಜಿಎಂ ಕಾಲೇಜಿನ ನೂತನ ರವೀಂದ್ರ ಮಂಟಪದ್ಲಿ ಮಂಗಳವಾರ ನಡೆದ ಡಾ. ಯು. ಪಿ.ಉಪಾಧ್ಯಾಯ-ಡಾ.ಸುಶೀಲಾ ಉಪಾಧ್ಯಾಯ ಪ್ರಶಸ್ತಿ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪ್ರದಾನ ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡುತಿದ್ದರು.

ಇಂದು ಸಾಹಿತ್ಯ ಕ್ಷೇತ್ರದಲ್ಲಿ ‘ಲಾಬಿ’ ಜೋರಾಗಿದೆ. ಕಾವ್ಯವೂ ಸೇರಿದಂತೆ ಎಲ್ಲಾ ಸ್ಪರ್ಧೆಗಳು ಮಾನದಂಡಗಳಂತೆ ನಡೆಯುತ್ತಿಲ್ಲ. ನಾವು ನಡೆಸಿದ ಮುದ್ದಣ ಕಾವ್ಯ ಸ್ಪರ್ಧೆಯಲ್ಲಿ ಮೂರನೇ ಸ್ಥಾನ ಪಡೆದ ಕವನವೊಂದು, ಪ್ರಮುಖ ಪತ್ರಿಕೆ ನಡೆಸಿದ ಕವನ ಸ್ಪರ್ಧೆಯಲ್ಲಿ ಮೊದಲ ಬಹುಮಾನ ಪಡೆಯುತ್ತದೆ. ಎರಡಕ್ಕೂ ತೀರ್ಪುಗಾರರು ಒಬ್ಬರೇ ಆಗಿದ್ದರು ಎಂದು ವಿವರಿಸಿದ ಡಾ.ಮೊಗಸಾಲೆ, ಇಂದು ಪ್ರಶಸ್ತಿ ನಿರ್ಧರಿಸುವವರಿಗೆ ಉಸಿರುಗಟ್ಟಿಸುವ ಸ್ಥಿತಿ ಇದೆ ಎಂದರು.

ಹೊಸ ದಾರಿ ಕಂಡು ಹಿಡಿಯಬೇಕು: ವರ್ಷದಲ್ಲಿ ದೊಡ್ಡ ಸಂಖ್ಯೆಯ ಕವನ ಸಂಕಲನಗಳು ಪ್ರಕಟವಾಗುತಿದ್ದರೂ, ಕನ್ನಡ ಕಾವ್ಯದಲ್ಲಿ ನಿರ್ವಾತ ಸ್ಥಿತಿ ಇದೆ. ನಮೋದಯ, ನವ್ಯ, ಬಂಡಾಯ ಎಲ್ಲದರ ಅವಧಿ ಮುಗಿದಿದೆ. ಹೀಗಾಗಿ ಇಂದು ಹೊಸ ದಾರಿಯನ್ನು ಕಂಡು ಹುಡುಕಬೇಕಿದೆ. ಖ್ಯಾತ ಕವಿ ದಿ. ಎಸ್. ಮಂಜುನಾಥ್‌ರಿಂದ ಇದನ್ನು ನಿರೀಕ್ಷಿಸಬಹುದಿತ್ತು ಎಂದ ಅವರು, ತಾನು ಹೊಸ ರೀತಿಯಲ್ಲಿ ಬರೆಯುವ ಪ್ರಯತ್ನ ನಡೆಸುವುದಾಗಿ ತಿಳಿಸಿದರು.

ಕರ್ನಾಟಕದಲ್ಲಿ ವಿವಿಧ ಸಾಹಿತಿಗಳು, ಗಣ್ಯರ ಹೆಸರಿನಲ್ಲಿ 22 ಟ್ರಸ್ಟ್‌ಗಳಿವೆ. ಆದರೆ ಕರಾವಳಿಯಲ್ಲಿ ಯಾರೊಬ್ಪರ ಹೆಸರಲ್ಲೂ ಟ್ರಸ್ಟ್‌ಗಳಿಲ್ಲ. ಸರಕಾರ ಈ ಟ್ರಸ್ಟ್‌ಗಳಿಗೆ ಲಕ್ಷ, ಕೋಟಿ ರೂ.ಅನುದಾನ ನೀಡುತ್ತೆ. ಆದರೆ ಇದರಲ್ಲಿ ಸರಕಾರ ತೀರಾ ತಾರತಮ್ಯ ತೋರಿಸುತ್ತಿದೆ. ಈ ವಿಷಯದಲ್ಲಿ ಕಲ್ಯಾಣ ಕರ್ನಾಟಕದ ಜನಪ್ರತಿನಿಧಿಗಳು ಸಮರ್ಥರು. ಅವರು ತಮ್ಮ ಟ್ರಸ್ಟ್‌ಗಳಿಗೆ ಅನುದಾನ ಕೊಡಿಸುತ್ತಾರೆ ಎಂದರು.

ಆದರೆ ಕರಾವಳಿಯ ಶಾಸಕರಿಗೆ ಸಾಂಸ್ಕೃತಿಕ ಕಾಳಜಿಯೇ ಇಲ್ಲ. ಒಂದು ರೀತಿ ಸಾಂಸ್ಕೃತಿಕ ನಿರ್ವಾತ ಪರಿಸ್ಥಿತಿ ಇದೆ. ಕಾಂತಾವರ ಕನ್ನಡ ಭವನದ ರಿಪೇರಿ, ನವೀಕರಣಕ್ಕೆ ಐದು ಲಕ್ಷ ರೂ.ನೀಡಿ ಎಂದು ಸಚಿವರಿಗೆ ಮನವಿ ಮಾಡಿದರೆ ಹೊಸ ಕಟ್ಟಡದ ನವೀಕರಣಕ್ಕೆ ಹಣ ನೀಡಲಾಗುವುದಿಲ್ಲ ಎಂಬ ಉತ್ತರ ಬರುತ್ತದೆ ಎಂದು ಡಾ.ನಾ.ಮೊಗಸಾಲೆ ಬೇಸರದಿಂದ ನುಡಿದರು.

ಡಾ.ಉಪಾಧ್ಯಾಯ ದಂಪತಿ ಪ್ರಶಸ್ತಿಯನ್ನು ಧರ್ಮಸ್ಥಳ ಶ್ರೀಮಂಜುನಾಥೇಶ್ವರ ಸಂಸ್ಕೃತಿ ಸಂಶೋಧನ ಪ್ರತಿಷ್ಠಾನದ ನಿರ್ದೇಶಕ ಹಾಗೂ ಸಂಶೋಧಕ ಮತ್ತು ತುಮಕೂರು ವಿವಿಯಲ್ಲಿ ಸಂಶೋಧನ ಮಾರ್ಗದರ್ಶಕರಾಗಿರುವ ಡಾ. ಎಸ್. ಆರ್. ವಿಘ್ನರಾಜ್ ಅವರಿಗೂ ಹಾಗೂ ಕಡೆಂಗೋಡ್ಲು ಕಾವ್ಯ ಪ್ರಶಸ್ತಿಯನ್ನು ರಿಪ್ಪನ್‌ಪೇಟೆಯ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕ ಡಾ. ರತ್ನಾಕರ ಸಿ. ಕುನುಗೋಡು ಅವರ ‘ಎದೆನೆಲದ ಕಾವು’ ಕವನ ಸಂಕಲನಕ್ಕೂ ಪ್ರದಾನ ಮಾಡಲಾಯಿತು.

ಇದೇ ಸಂದರ್ಭದಲ್ಲಿ ಡಾ.ನಾ.ಮೊಗಸಾಲೆ ಕಡೆಂಗೋಡ್ಲು ಕಾವ್ಯ ಪ್ರಶಸ್ತಿ ಪುರಸ್ಕೃತ ಕವನಸಂಕಲನ ‘ಎದೆನೆಲದ ಕಾವು’ವನ್ನು ಅನಾವರಣಗೊಳಿಸಿದರು.

ಅಧ್ಯಕ್ಷತೆಯನ್ನು ಹಿರಿಯ ವಿಮರ್ಶಕ, ಸಾಹಿತಿ ಪ್ರೊ. ಮುರಳೀಧರ ಉಪಾಧ್ಯ ಹಿರಿಯಡ್ಕ ವಹಿಸಿದ್ದರು. ಪ್ರಶಸ್ತಿ ಪುರಸ್ಕೃತ ಡಾ.ವಿಘ್ನರಾಜ್ ಹಾಗೂ ಡಾ.ರತ್ನಾಕರ ತಮ್ಮ ಅಭಿಪ್ರಾಯಗಳನ್ನು ಹಂಚಿಕೊಂಡರು.

ಎಸ್‌ಡಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ.ಬಿ.ಪಿ.ಸಂಪತ್ ಕುಮಾರ್ ಹಾಗೂ ಎಂಜಿಎಂ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪುತ್ತಿ ವಸಂತ ಕುಮಾರ್ ಪ್ರಶಸ್ತಿ ಪುರಸ್ಕೃತರನ್ನು ಅಭಿನಂದಿಸಿ ಮಾತನಾಡಿದರು. ಮಂಗಳೂರಿನ ವಿಶ್ರಾಂತ ಕನ್ನಡ ಪ್ರಾಧ್ಯಾಪಕ ಡಾ. ನರಸಿಂಹಮೂರ್ತಿ ಆರ್. ‘ಕಥನ ಕವಿಯಾಗಿ ಕಡೆಂಗೋಡ್ಲು ಶಂಕರ ಭಟ್ಟ’ ಎಂಬ ವಿಷಯದ ಕುರಿತು ಉಪನ್ಯಾಸ ನೀಡಿದರು.

ಎಂಜಿಎಂ ಕಾಲೇಜಿನ ನೂತನ ಪ್ರಾಂಶುಪಾಲ ಪ್ರೊ.ಲಕ್ಷ್ಮೀನಾರಾಯಣ ಕಾರಂತ ಉಪಸ್ಥಿತರಿದ್ದರು. ಗೋವಿಂದ ಪೈ ಸಂಶೋಧನಾ ಕೇಂದ್ರದ ಆಡಳಿತಾಧಿಕಾರಿ ಡಾ.ಬಿ.ಜಗದೀಶ್ ಶೆಟ್ಟಿ ಅತಿಥಿಗಳನ್ನು ಸ್ವಾಗತಿಸಿ, ಪ್ರಾಸ್ತಾವಿಕ ಮಾತುಗಳನ್ನಾಡಿದರು. ಕಾರ್ಯಕ್ರಮ ನಿರೂಪಿಸಿದ ಕಾಲೇಜಿನ ಕನ್ನಡ ಉಪನ್ಯಾಸಕ ರಾಘವೇಂದ್ರ ತುಂಗ ವಂದಿಸಿದರು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News