ಬ್ಯಾಂಕ್ ಸ್ಟೇಟ್‌ಮೆಂಟ್‌ ಎಂದರೇನು? ಇದರ ಉಪಯೋಗಗಳೇನು?

Update: 2022-08-11 15:43 GMT
ಸಾಂದರ್ಭಿಕ ಚಿತ್ರ

ಡಿಜಿಟಲೀಕರಣಕ್ಕೂ ಮೊದಲು, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು(Bank Statement) ನಿಯತಕಾಲಿಕ, ಮಾಸಿಕ, ತ್ರೈಮಾಸಿಕ ಅಥವಾ ವಾರ್ಷಿಕ ಆಧಾರದಲ್ಲಿ ಪೇಪರ್ ಮೇಲೆ ನೀಡಲಾಗುತ್ತಿತ್ತು.  ಬ್ಯಾಂಕಿಂಗ್ ವಲಯದಲ್ಲಿ ಕಂಪ್ಯೂಟರ್‌ಗಳು ಪರಿಚಯವಾದ ನಂತರ, ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಮಾಸಿಕವಾಗಿ ನೀಡಲಾಗುತ್ತದೆ.

 1990 ರ ದಶಕದಲ್ಲಿ ಮೊದಮೊದಲು, ಎಲೆಕ್ಟ್ರಾನಿಕ್ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಪರಿಚಯಿಸಲಾಯಿತು. ಇದು ಸ್ಟೇಟ್‌ಮೆಂಟ್‌ಗಳನ್ನು ಮುದ್ರಿಸುವ ವೆಚ್ಚವನ್ನು ಉಳಿಸುವಲ್ಲಿ ಬ್ಯಾಂಕ್ ಗಳಿಗೆ ಸಹಾಯ ಮಾಡಿತು.  ಬ್ಯಾಂಕಿಂಗ್ ವಲಯದ ಡಿಜಿಟಲೀಕರಣವು ಆನ್‌ಲೈನ್ ನಲ್ಲಿ ಬ್ಯಾಂಕಿಂಗ್ ಉತ್ಪನ್ನಗಳು ಮತ್ತು ಸೇವೆಗಳನ್ನು ಒದಗಿಸಲು ಕಾರಣವಾಯಿತು, ಇದನ್ನು ಇಂಟರ್ನೆಟ್ ಬ್ಯಾಂಕಿಂಗ್ ಮೂಲಕ ಗ್ರಾಹಕರು ಪರಿಶೀಲಿಸಬಹುದು.  ಆದಾಗ್ಯೂ, ಬ್ಯಾಂಕ್‌ಗಳು ಗ್ರಾಹಕರು ಪೇಪರ್ ಸ್ಟೇಟ್‌ಮೆಂಟ್ ಅಥವಾ ಎಲೆಕ್ಟ್ರಾನಿಕ್ ಸ್ಟೇಟ್‌ಮೆಂಟ್ ಗಳಲ್ಲಿ ಯಾವುದೋ ಬೇಕೋ ಅದನ್ನು ಆಯ್ಕೆ ಮಾಡುವ ಅವಕಾಶ ನೀಡುತ್ತವೆ.  

ಬ್ಯಾಂಕ್ ಸ್ಟೇಟ್‌ಮೆಂಟ್ ಎಂದರೇನು? ಬ್ಯಾಂಕ್ ಸ್ಟೇಟ್ ಮೆಂಟ್ ಉದ್ದೇಶವೇನು?  ಬ್ಯಾಂಕ್ ಸ್ಟೇಟ್‌ಮೆಂಟ್ ಪಡೆಯುವುದು ಹೇಗೆ? ಎಂಬಂತಹ ಮೂಲಭೂತ ಅಂಶಗಳನ್ನು ನಾವು ಅರ್ಥಮಾಡಿಕೊಳ್ಳೋಣ 

ಬ್ಯಾಂಕ್ ಸ್ಟೇಟ್‌ಮೆಂಟ್ ಎಂದರೇನು?

 ಬ್ಯಾಂಕ್ ಸ್ಟೇಟ್‌ಮೆಂಟ್ ಎನ್ನುವುದು ಅಧಿಕೃತ ಖಾತೆಯ ಸಂಪೂರ್ಣ ಆಯವ್ಯಯ ಮಾಹಿತಿಯಾಗಿದ್ದು, ಇದನ್ನು ಬ್ಯಾಂಕ್‌ಗಳು ತಿಂಗಳ ಆಧಾರದ ಮೇಲೆ ಖಾತೆದಾರರಿಗೆ ಒದಗಿಸುತ್ತವೆ. ನಮ್ಮ ಖಾತೆಗೆ ಹಣವೆಷ್ಟು ಬಂದಿದೆ ಮತ್ತು ನಮ್ಮ ಖಾತೆಯಿಂದ ಎಷ್ಟು ಹಣವನ್ನು ಹಿಂಪಡೆಯಲಾಗಿದೆ ಎಂಬ ಸಂಪೂರ್ಣ ಮಾಹಿತಿಗಳನ್ನು ಅದು ನೀಡುತ್ತದೆ.  ಒಂದು ನಿರ್ದಿಷ್ಟ ಅವಧಿಗೆ ಸ್ಟೇಟ್ ಮೆಂಟನ್ನು ರಚಿಸಲಾಗುತ್ತದೆ ಮತ್ತು ಪ್ರತಿ ಖಾತೆದಾರರಿಗೆ ಇದು ಬೇರೆ ಬೇರೆ ರೀತಿ ಇರುತ್ತದೆ. 

ಬ್ಯಾಂಕ್ ಸ್ಟೇಟ್‌ಮೆಂಟ್, ಗ್ರಾಹಕರ ವೈಯಕ್ತಿಕ ವಿವರಗಳು, ಬ್ಯಾಂಕ್ ಮಾಹಿತಿ, ಸ್ಟೇಟ್‌ಮೆಂಟ್ ಅವಧಿಯ ದಿನಾಂಕಗಳು, ಖಾತೆಯ ಬಾಕಿ, ವಹಿವಾಟುಗಳು, ವಿಧಿಸಲಾದ ಶುಲ್ಕಗಳು ಮತ್ತು ಗಳಿಸಿದ ಬಡ್ಡಿಯನ್ನು ಒಳಗೊಂಡಿರುತ್ತದೆ.  ಗ್ರಾಹಕರ ವೈಯಕ್ತಿಕ ಮಾಹಿತಿಯಲ್ಲಿ, ಅವರ ಹೆಸರು, ಮನೆ ವಿಳಾಸ, ಬ್ಯಾಂಕ್ ಖಾತೆ ಸಂಖ್ಯೆ, ಸ್ಟೇಟ್ ಮೆಂಟ್ ಪ್ರಾರಂಭ ಮತ್ತು ಅಂತ್ಯದ ಅವಧಿಯನ್ನು ಕಾಣಬಹುದು.  

ಚೆಕ್ ಠೇವಣಿಗಳು, ನೇರ ಠೇವಣಿಗಳು, ಎಲೆಕ್ಟ್ರಾನಿಕ್ ವರ್ಗಾವಣೆಗಳು, ರದ್ದುಪಡಿಸಿದ ಚೆಕ್‌ಗಳು, ಮರುಪಾವತಿಗಳು, ಸಾಲ, ಕ್ರೆಡಿಟ್ ಕಾರ್ಡ್ ಖರೀದಿಗಳು, ಡೆಬಿಟ್ ಕಾರ್ಡ್ ಖರೀದಿಗಳು, ಎಟಿಎಂ ಹಿಂಪಡೆಯುವಿಕೆಗಳು, ಬಿಲ್ ಪಾವತಿಗಳು, ಬ್ಯಾಂಕ್ ಶುಲ್ಕಗಳು ಮತ್ತು ಗಳಿಸಿದ ಬಡ್ಡಿಯನ್ನು ಬ್ಯಾಂಕ್ ಸ್ಟೇಟ್‌ಮೆಂಟ್‌ ಒಳಗೊಂಡಿರುತ್ತದೆ.

ಬ್ಯಾಂಕ್ ಸ್ಟೇಟ್‌ಮೆಂಟ್‌ಗಳ ವಿಧಗಳು 

 ಹಣಕಾಸು ಸಂಸ್ಥೆಗಳು ಎರಡು ರೀತಿಯ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ನೀಡುತ್ತವೆ: (i) ಪೇಪರ್ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು ಮತ್ತು (ii) ಎಲೆಕ್ಟ್ರಾನಿಕ್ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳು.

ಪೇಪರ್ ಸ್ಟೇಟ್ ಮೆಂಟ್ ಗಳನ್ನು  ಕೊರಿಯರ್ ಮೂಲಕ ಗ್ರಾಹಕರ ಮನೆಯ ವಿಳಾಸಕ್ಕೆ ಕಳುಹಿಸಲಾಗುತ್ತದೆ.  ಗ್ರಾಹಕರು ಇಂಟರ್ನೆಟ್ ಬ್ಯಾಂಕಿಂಗ್ ಸೇವೆಗಳನ್ನು ಆರಿಸಿಕೊಂಡರೆ ಎಲೆಕ್ಟ್ರಾನಿಕ್ ಬ್ಯಾಂಕ್ ಸ್ಟೇಟ್‌ಮೆಂಟ್ (ಇ-ಸ್ಟೇಟ್‌ಮೆಂಟ್‌ಗಳು ಎಂದೂ ಸಹ ಕರೆಯಲಾಗುತ್ತದೆ) ಬ್ಯಾಂಕಿನ ಅಧಿಕೃತ ವೆಬ್‌ಸೈಟ್ ಮೂಲಕ ಆನ್‌ಲೈನ್‌ನಲ್ಲಿ ಪ್ರವೇಶಿಸಬಹುದು.

ಬ್ಯಾಂಕ್ ಸ್ಟೇಟ್ ಮೆಂಟ್ ಉದ್ದೇಶವೇನು?

ಹಣದ ಹರಿವನ್ನು ಮೇಲ್ವಿಚಾರಣೆ ಮಾಡಲು ಮತ್ತು ಮೋಸದ ಸಾಧ್ಯತೆಯಿರುವ ವಹಿವಾಟುಗಳನ್ನು ಪರಿಶೀಲಿಸಲು ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಾಮಾನ್ಯವಾಗಿ ಗ್ರಾಹಕರು ಬಳಸುತ್ತಾರೆ.  ಸಂಬಂಧಿತ ತೆರಿಗೆ ಅಧಿಕಾರಿಗಳು ನಿಗದಿಪಡಿಸಿದ ಅವಧಿಗೆ ಲೆಕ್ಕಪರಿಶೋಧನೆ ಮತ್ತು ತೆರಿಗೆ ಉದ್ದೇಶಗಳಿಗಾಗಿ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಸಾಮಾನ್ಯವಾಗಿ ಉಳಿಸಿಕೊಳ್ಳಬೇಕಾಗುತ್ತದೆ.  ವಿಳಾಸ ಪರಿಶೀಲನೆ ಅಥವಾ ಗುರುತಿನ ಪುರಾವೆ ಉದ್ದೇಶಗಳಿಗಾಗಿ ಸಹ ಬ್ಯಾಂಕ್ ಸ್ಟೇಟ್‌ಮೆಂಟ್‌ಗಳನ್ನು ಬಳಸಬಹುದು.

Writer - ವಾರ್ತಾಭಾರತಿ

contributor

Editor - ವಾರ್ತಾಭಾರತಿ

contributor

Similar News