ಸಿದ್ದರಾಮಯ್ಯ ಸಾಧನೆ ಸಹಿಸಲಾಗದೆ ಮೊಟ್ಟೆ ಎಸೆತ: ಗೋಪಾಲ ಪೂಜಾರಿ
ಕುಂದಾಪುರ : ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಾಧನೆ ಯನ್ನು ಸಹಿಸಲಾಗದೆ ಅವರ ಕಾರಿಗೆ ಮೊಟ್ಟೆ ಎಸೆಯುವ ಕೆಲಸವನ್ನು ಮಾಡಲಾಗಿದೆ ಎಂದು ಮಾಜಿ ಶಾಸಕ ಗೋಪಾಲ ಪೂಜಾರಿ ಟೀಕಿಸಿದ್ದಾರೆ.
ಬೈಂದೂರಿನಲ್ಲಿ ಶನಿವಾರ ಮಾಧ್ಯಮದೊಂದಿಗೆ ಮಾತನಾಡಿದ ಅವರು, ಈ ಕೃತ್ಯ ಎಸಗಿದ್ದು ತಪ್ಪು. ಆತನಿಗೆ ಶಿಕ್ಷೆಯಾಗಬೇಕಿತ್ತು. ಆದರೆ ಆತನನ್ನು ಅಂದೇ ಠಾಣೆಯಿಂದ ಬಿಟ್ಟು ಕಳುಹಿಸಲಾಗಿದೆ. ಇದು ಸರಕಾರದ ಹುನ್ನಾರ. ಈ ರೀತಿ ಕಿರುಕುಳ ಕೊಟ್ಟು ವಿರೋಧ ಪಕ್ಷವನ್ನು ಧಮನ ಮಾಡುವ ಸಾಹಸಕ್ಕೆ ಸರಕಾರ ಕೈ ಹಾಕುತ್ತಿದೆ. ಇದನ್ನು ಕಾಂಗ್ರೆಸ್ ಸಹಿಸುವುದಿಲ್ಲ ಎಂದರು.
ಹತಾಶರಾದ ಬಿಜೆಪಿಗರು ಮೊಟ್ಟೆ ಎಸೆದಿದ್ದಾರೆ: ರಮೇಶ್ ಕಾಂಚನ್
ಉಡುಪಿ: ಸಿದ್ದರಾಮೋತ್ಸವದ ಅಭೂತಪೂರ್ವ ಯಶಸ್ಸು ಮತ್ತು ಕಾಂಗ್ರೆಸ್ ನತ್ತ ಜನರ ಒಲವು ನೋಡಿ ಹತಾಶರಾದ ಬಿಜೆಪಿಗರು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಕಾರಿನ ಮೇಲೆ ಮೊಟ್ಟೆ ಎಸೆಯುವ ಪ್ರಯತ್ನ ಮಾಡಿದ್ದಾರೆ ಎಂದು ಉಡುಪಿ ಬ್ಲಾಕ್ ಅಧ್ಯಕ್ಷ ರಮೇಶ್ ಕಾಂಚನ್ ಆರೋಪಿಸಿದ್ದಾರೆ.
ಇಂದು ರಾಜ್ಯದಲ್ಲಿ ಅಭಿವೃದ್ಧಿ ಕೆಲಸಗಳು ಕುಂಠಿತವಾಗುತ್ತಿದೆ. ಜನರು ಬಿಜೆಪಿ ಸರಕಾರದ ಜನ ವಿರೋಧಿ ನೀತಿಗಳಿಂದ ಸಮಸ್ಯೆ ಎದುರಿಸುತ್ತಿದ್ದಾರೆ. ಗಣೇಶೋತ್ಸವದ ಪೆಂಡಾಲಿಗೂ ಶೇ.೧೮ ಜಿ.ಎಸ್.ಟಿ ಕೊಡಬೇಕಾಗದ ಪರಿಸ್ಥಿತಿ ಯನ್ನು ಸರಕಾರ ತಂದೊಡ್ಡಿದೆ. ಅಧಿಕಾರ ಯಂತ್ರ ಕುಸಿದು ಸರಕಾರ ವೈಫಲ್ಯದ ಹಾದಿಯಲ್ಲಿರುವಾಗ ಹತಾಶರಾದ ಬಿಜೆಪಿ ಕಾರ್ಯಕರ್ತರು ವಿರೋಧ ಪಕ್ಷ ನಾಯಕರ ಮೇಲೆ ಮೊಟ್ಟೆ ಎಸೆಯುವಂತಹ ಪ್ರಜಾಪ್ರಭುತ್ವ ಮೌಲ್ಯದ ವಿರುದ್ಧವಾದ ಕೃತ್ಯದಲ್ಲಿ ತೊಡಗಿಕೊಂಡಿದ್ದಾರೆ ಎಂದು ಅವರು ಪ್ರಕಟಣೆಯಲ್ಲಿ ದೂರಿದರು.