ಮಧುಮೇಹ ನಿಯಂತ್ರಣಕ್ಕೆ ಹೀಗೆ ಮಾಡಿ.. ಹೊಸ ಅಧ್ಯಯನ ಹೇಳುವುದೇನು ?
ಹೊಸದಿಲ್ಲಿ: ದೇಶದ ಜನರಿಗೆ ಬಹುತೇಕ (ಶೇ. 61-64ರಷ್ಟು) ಶಕ್ತಿಯ ಮೂಲ ಕಾರ್ಬೋಹೈಡ್ರೇಟ್ಸ್ (carbohydrates) ಸಮೃದ್ಧ ಆಹಾರಗಳು ಎನ್ನುವುದನ್ನು ಅಧ್ಯಯನವೊಂದು ಬಹಿರಂಗಪಡಿಸಿದೆ. ಈ ಪ್ರಮಾಣವನ್ನು ಶೇ. 49-56ಕ್ಕೆ ಇಳಿಸಿದರೆ ವಿಶ್ವದಲ್ಲಿ ಅತಿ ಹೆಚ್ಚು ಸಾವಿಗೆ ಕಾರಣವಾಗುತ್ತಿರುವ ಟೈಪ್-2 ಮಧುಮೇಹವನ್ನು ನಿಯಂತ್ರಿಸಲು ಸಾಧ್ಯ ಎಂದು ಡಯಾಬಿಟಿಸ್ ಕೇರ್ ನಿಯತಕಾಲಿಕದಲ್ಲಿ ಪ್ರಕಟವಾದ ಅಧ್ಯಯನ ವರದಿ ವಿವರಿಸಿದೆ.
ಕಾರ್ಬೋಹೈಡ್ರೇಟ್ ಬಳಕೆಯನ್ನು ಕಡಿಮೆ ಮಾಡುವ ಜತೆಗೆ, ಪ್ರೊಟೀನ್ ಸೇವನೆಯನ್ನು ಹೆಚ್ಚಿಸಬೇಕು (ಒಟ್ಟು ಸೇವನೆಯ ಶೇ. 14-20ರಷ್ಟು) ಎಂದೂ ಅಧ್ಯಯನ ವರದಿ ಸಲಹೆ ಮಾಡಿದೆ.
ಕೊಬ್ಬಿನ ಅಂಶ ಒಟ್ಟು ಸೇವನೆಯ ಶೇ. 21-27ನ್ನು ಮೀರಬಾರದು ಎಂದೂ ಹೇಳಲಾಗಿದೆ. ಸುಮಾರು 18 ಸಾವಿರ ಮಂದಿಯ ಆಹಾರ ಕ್ರಮವನ್ನು ಅಧ್ಯಯನ ಮಾಡಿ ಈ ನಿರ್ಧಾರಕ್ಕೆ ಬರಲಾಗಿದೆ ಎಂದು timesofindia.com ವರದಿ ಮಾಡಿದೆ.
ಟೈಪ್ 2 ಮಧುಮೇಹ ನಿಯಂತ್ರಣಕ್ಕೆ ಭಾರತೀಯರು ಕಾರ್ಬೋಹೈಡ್ರೇಟ್ ಸೇವನೆ ಕಡಿಮೆ ಮಾಡಬೇಕು ಎಂದು ವರದಿ ವಿವರಿಸಿದೆ. ದೈಹಿಕವಾಗಿ ನಿಷ್ಕ್ರಿಯರಾಗಿರುವ, ಬೊಜ್ಜು ಹೊಂದಿರುವ ವ್ಯಕ್ತಿಗಳು ಹಾಗೂ ಹಿರಿಯ ನಾಗರಿಕರು, ನಗರವಾಸಿಗಳು ಕಾರ್ಬೋಹೈಡ್ರೇಟ್ ಬಳಕೆಯನ್ನು ಗಣನೀಯವಾಗಿ ಕಡಿಮೆ ಮಾಡಬೇಕಾದ ಅಗತ್ಯವಿದೆ" ಎಂದು ಅಧ್ಯಯನ ತಂಡದ ನೇತೃತ್ವ ವಹಿಸಿದ್ದ ರಂಜೀತ್ ಮೋಹನ್ ಅಂಜನಾ ಹೇಳಿದ್ದಾರೆ.
ಆಹಾರ ಸೇವನೆ ಅಥವಾ ಕ್ಯಾಲೋರಿಗಳನ್ನು ಹೇಗೆ ಲೆಕ್ಕಾಚಾರ ಮಾಡಬಹುದು ಎಂದು ಕೇಳಿದ ಪ್ರಶ್ನೆಗೆ, ಪೌಷ್ಟಿಕಾಂಶ ತಜ್ಞರ ಸಲಹೆ ಪಡೆದು ಸರಳ ನಿಯಮ ಎನಿಸಿದ ಒಂದು ಪ್ಲೇಟ್ ಊಟವನ್ನು ನಾಲ್ಕು ಭಾಗಗಳಾಗಿ ವಿಂಗಡಿಸಬಹುದು ಎಂದು ಅವರು ಉತ್ತರಿಸಿದರು.