ಶೂದ್ರರು, ಮಹಿಳೆಯರಿಗೆ ವಿದ್ಯೆ ನೀಡಿದ ಸಾವಿತ್ರಿ ಮಾತೆಯೇ ದೇವರು: ಜಯನ್ ಮಲ್ಪೆ

Update: 2023-01-03 15:14 GMT

ಮಲ್ಪೆ: ಶೂದ್ರರಿಗೆ ಹಾಗೂ ಮಹಿಳೆಯರಿಗೆ ವಿದ್ಯಾಭ್ಯಾಸ ನಿರಾಕರಿಸಿದ ಸಮಯದಲ್ಲಿ ವಿದ್ಯೆಯನ್ನು ನೀಡಿದ ಸಾವಿತ್ರಿಜ್ಯೋತಿ ಬಾಪುಲೆ ನಮಗೆ ಹಿಂದು ಧರ್ಮದಲ್ಲಿ ವಿದ್ಯಾದೇವತೆ ಎಂದು ಪೂಜಿಸುವ ಸರಸ್ವತಿ ದೇವರಿಗಿಂತಲೂ ದೊಡ್ಡವರು ಎಂದು ಜನಪರ ಹೋರಾಟಗಾರ ಹಾಗೂ ದಲಿತ ಚಿಂತಕ ಜಯನ್ ಮಲ್ಪೆ ಹೇಳಿದ್ದಾರೆ.

ಕಪ್ಪೆಟ್ಟು ಅಂಬೇಡ್ಕರ್ ಭವನದಲ್ಲಿ ಉಡುಪಿ ಜಿಲ್ಲಾ ಅಂಬೇಡ್ಕರ್ ಯುವಸೇನೆ ಏರ್ಪಡಿಸಿದ ಸಾವಿತ್ರಿಜ್ಯೋತಿ ಭಾಫುಲೆಯವರ 193ನೇ ಜನ್ಮದಿನಾವರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡುತಿದ್ದರು.

ಸಾಮಾಜಿಕ ಅನಿಷ್ಠಗಳ ವಿರುದ್ಧ ನಿರಂತರ ಹೋರಾಟ ನಡೆಸಿ ಅರಿವಿನ ಪ್ರಜ್ಞೆಯನ್ನು ಜಾಗ್ರತಗೊಳಿಸಿದ ಸಾವಿತ್ರಿಬಾಯಿ ಫುಲೆ,  ಬಾಲ್ಯ ವಿವಾಹ, ಸತಿ ಸಹಗಮನ, ಕೇಶಮುಂಡನದ ವಿರುದ್ಧ ನಡೆಸಿದ ನಿರಂತರ ಹೋರಾಟದ ಬದುಕು ಭಾರತೀಯ ಮಹಿಳೆಯರಿಗೆ ಆದರ್ಶವಾಗಬೇಕು ಎಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅಂಬೇಡ್ಕರ್ ಯುವಸೇನೆಯ ಜಿಲ್ಲಾಧ್ಯಕ್ಷ ಹರೀಶ್ ಸಾಲ್ಯಾನ್ ಮಾತನಾಡಿ, ಭಾರತದಲ್ಲಿ ಅಕ್ಷರಕ್ರಾಂತಿ ಆರಂಭಿಸಿದ ದೇಶದ ಮೊದಲ ಮಹಿಳಾ ಶಿಕ್ಷಕಿಯಾಗಿ, ದಲಿತ ಮತ್ತು ಹಿಂದುಳಿದ ಮಹಿಳೆಯರಿಗೆ ಅಕ್ಷರ ಜ್ಞಾನ ನೀಡಿ ಹೊಸ ಮನ್ವಂತರಕ್ಕೆ ನಾಂದಿ ಹಾಡಿದವರು ಎಂದರು.

ದಲಿತ ಮುಖಂಡರಾದ ಸಂತೋಷ್ ಕಪ್ಪೆಟ್ಟು ಮಾತನಾಡಿ ಸಾವಿತ್ರಿ ಬಾುಫುಲೆಯವರ ಬದುಕನ್ನು ಅವರ ಸಾಧನೆಯನ್ನು ನಾವು ಗೌರಸದೇ ಹೋದರೆ ಈ ಬದುಕಿಗೆ ಯಾವ ಅರ್ಥನೂ ಇಲ್ಲ. ಸಮಸಮಾಜದ ಕನಸಿನೊಂದಿಗೆ ಮಹಿಳೆಯರ ಹಕ್ಕುಗಳನ್ನು ಕಸಿದುಕೊಂಡ ಕಾಲದಲ್ಲಿ ಮಹಿಳೆಯರ ಸಬಲೀಕರಣಕ್ಕಾಗಿ ತಮ್ಮ ಬದುಕನ್ನೆ ಮೀಸಲಿಟ್ಟ ಸಾವಿತ್ರಿಬಾಯಿ ಮರೆಯಬಾರದ ಮಹಾಮಾತೆ ಎಂದರು.

ವೇದಿಕೆಯಲ್ಲಿ ದಲಿತ ಮುಖಂಡರಾದ ಬಿ.ಎನ್.ಪ್ರಶಾಂತ್, ಮೋಹನ್ ದಾಸ್ ಚಿಟ್ಪಾಡಿ, ಗಣೇಶ್ ನೆರ್ಗಿ, ಭಗವಾನ್ ಮಲ್ಪೆ ಉಪಸ್ಥಿತರಿದ್ದರು.

ಸತೀಶ್ ಕಪ್ಪೆಟ್ಟು ಸ್ವಾಗತಿಸಿ, ಸುಶೀಲ್ ಕುಮಾರ್ ಕೊಡವೂರು ವಂದಿಸಿದರು. ರಾಮೋಜಿ ಅವೀನ್ ಕಾರ್ಯಕ್ರಮ ನಿರೂಪಿಸಿದರು.

Similar News