ಉಡುಪಿ: ಅಖಿಲ ಭಾರತ ಅಂತರ ವಿವಿ ವಾಲಿಬಾಲ್‌ಗೆ ರಂಗು; ಭಾರತಿ ವಿವಿಯನ್ನು ರೋಚಕವಾಗಿ ಹಿಮ್ಮೆಟ್ಟಿಸಿದ ಮಂಗಳೂರು ವಿವಿ

Update: 2023-01-05 16:48 GMT

ಉಡುಪಿ: ಮಂಗಳೂರು ವಿಶ್ವವಿದ್ಯಾನಿಲಯದ ದೈಹಿಕ ಶಿಕ್ಷಣ ವಿಭಾಗ ಹಾಗೂ ಉಡುಪಿಯ ಪೂರ್ಣಪ್ರಜ್ಞ ಕಾಲೇಜು ಮತ್ತು ಸ್ನಾತಕೋತ್ತರ ಅಧ್ಯಯನ ಕೇಂದ್ರಗಳ ಜಂಟಿ ಆಶ್ರಯದಲ್ಲಿ ನಡೆದಿರುವ ಅಖಿಲ ಭಾರತ ಅಂತರ ವಿಶ್ವವಿದ್ಯಾಲಯ ಪುರುಷರ ವಾಲಿಬಾಲ್ ಚಾಂಪಿಯನ್‌ಶಿಪ್‌ನ ಎರಡನೇ ದಿನದಾಟದಲ್ಲಿ ಆತಿಥೇಯ ಮಂಗಳೂರು ವಿವಿ ತಂಡ, ನೆರೆದ ವಿದ್ಯಾರ್ಥಿಗಳ ಸಂಪೂರ್ಣ ಬೆಂಬಲವನ್ನು ಪಡೆದು ಪುಣೆಯ ಭಾರತಿ ವಿದ್ಯಾಪೀಠ ವಿವಿ ತಂಡವನ್ನು 3-1 ಸೆಟ್‌ಗಳ ಅಂತರದಿಂದ ರೋಚಕವಾಗಿ ಹಿಮ್ಮೆಟ್ಟಿಸಿ ತನ್ನ ಎರಡನೇ ಗೆಲುವು ದಾಖಲಿಸಿತು. 

ಟೂರ್ನಿಯ ಆರಂಭಿಕ ದಿನವಾದ ನಿನ್ನೆ ಸಿ ಗುಂಪಿನ ತನ್ನ ಮೊದಲ ಪಂದ್ಯದಲ್ಲಿ ಎದುರಾಳಿಯಾಗಿದ್ದ ಭುವನೇಶ್ವರದ ಕೆಐಐಟಿ ಡೀಮ್ಡ್ ವಿವಿ ತಂಡದಿಂದ ವಾಕ್‌ಓವರ್ ಪಡೆಯುವ ಮೂಲಕ ಪೂರ್ಣ ಅಂಕ ಸಂಪಾದಿಸಿದ್ದ ಮಂಗಳೂರು ವಿವಿ ಇದೀಗ ಎರಡನೇ ಗೆಲುವಿನೊಂದಿಗೆ ನಾಕೌಟ್ ಹಂತಕ್ಕೇರುವ ಸಾಧ್ಯತೆಯನ್ನು ಉಜ್ವಲಗೊಳಿಸಿದೆ.

ನಾಳೆ ಗುಂಪಿನ ತನ್ನ ಕೊನೆಯ ಲೀಗ್ ಪಂದ್ಯವನ್ನು ಚಂಡೀಗಢದ ಪಂಜಾಬ್ ವಿವಿ ವಿರುದ್ಧ ಆಡಲಿರುವ ಮಂಗಳೂರು ವಿವಿ ಈ ಪಂದ್ಯ ಗೆದ್ದರೆ ಗುಂಪಿನ ಅಗ್ರಸ್ಥಾನಿಯಾಗಿ ಕ್ವಾರ್ಟರ್ ಫೈನಲ್‌ಗೇರಲಿದೆ.

ಟೂರ್ನಿಯಲ್ಲಿರುವ ಕರ್ನಾಟಕದ ಏಕೈಕ ವಿವಿಯಾಗಿರುವ ಮಂಗಳೂರು ವಿವಿ ಇಂದು ರಾಜ್ಯಪಾಲರು ಟೂರ್ನಿಯನ್ನು ಅಧಿಕೃತವಾಗಿ ಉದ್ಘಾಟಿಸಿದ ಬಳಿಕ ದಿನದ ಎರಡನೇ ಪಂದ್ಯವನ್ನು ಭಾರತಿ ವಿವಿ ವಿರುದ್ಧ ಆಡಿತು. ಪ್ರೇಕ್ಷಕರ ಸಿಳ್ಳೆ, ಚಪ್ಪಾಳೆಯ ಮದ್ಯೆ ಸಂಘಟಿತ ಆಟವಾಡಿದ ತಂಡ, ಪಶ್ಚಿಮ ವಲಯದ ಚಾಂಪಿಯನ್ ತಂಡವಾಗಿ ಬಂದ ಪುಣೆ ವಿವಿಯನ್ನು ಅಂತಿಮವಾಗಿ 25-12, 22-25, 25-23, 25-22ರ ಅಂತರದಿಂದ ಹಿಮ್ಮೆಟ್ಟಿಸಿತು.

ಎರಡನೇ ದಿನದ ಮೊದಲ ಪಂದ್ಯದಲ್ಲಿ ರನ್ನರ್‌ಅಪ್ ಹರಿಯಾಣದ ಕುರುಕ್ಷೇತ್ರ ವಿವಿ ತಂಡ ಎ ಗುಂಪಿನ ತನ್ನ ಎದುರಾಳಿ ಜೈಪುರದ ರಾಜಾಸ್ತಾನ ವಿವಿಯನ್ನು 3-0 ಅಂತರದಿಂದ ಸೋಲಿಸಿ ಎರಡನೇ ಜಯ ದಾಖಲಿಸಿತು. ಉತ್ತರ ವಲಯ ಚಾಂಪಿಯನ್ ತಂಡವಾಗಿ ಬಂದ ಕುರುಕ್ಷೇತ್ರ ವಿವಿ ಪಂದ್ಯವನ್ನು 25-18, 25-17, 25-18ರ ಅಂತರದಿಂದ ಸುಲಭವಾಗಿ ಜಯಿಸಿತು. ನಾಳೆ ಅಂತಿಮ ಪಂದ್ಯದಲ್ಲಿ ಅದು ಚೆನ್ನೈನ ಮದ್ರಾಸ್ ವಿವಿಯನ್ನು ಎದುರಿಸಲಿದೆ.

ಮದ್ರಾಸ್ ವಿವಿ ಇಂದು ಪೂರ್ವ ವಲಯದಿಂದ ಬಂದ ಕೊಲ್ಕತ್ತಾದ ಅದಮಾಸ್ ವಿವಿಯನ್ನು 3-2ರ ಅಂತರದಿಂದ ರೋಚಕವಾಗಿ ಪರಾಭವಗೊಳಿಸಿತು. ಚೆನ್ನೈ ತಂಡ ಪಂದ್ಯವನ್ನು 26-28, 25-20, 15-25, 25-18, 15-8ರ ಅಂತರದಿಂದ ಗೆದ್ದುಕೊಂಡಿತು.

ದಿನದ ಬಿ ಗುಂಪಿನ ಪಂದ್ಯದಲ್ಲಿ  ದಕ್ಷಿಣ ವಲಯದ ಚಾಂಪಿಯನ್ ತಂಡ ವಾದ ಚೆನ್ನೈನ ಎಸ್‌ಆರ್‌ಎಂ ವಿವಿ, ಉತ್ತರ ವಲಯದ ಗುರುನಾನಕ್ ದೇವ್ ವಿವಿ ಅಮೃತಸರ ತಂಡವನ್ನು 3-1ರ (25-19, 21-25, 25-12, 25-19) ಅಂತರದಿಂದ ಸೋಲಿಸಿ ಸತತ ಎರಡನೇ ಜಯ ದಾಖಲಿಸಿತು. ನಾಳೆ ಅದು ವಾರಾಣಸಿಯ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠವನ್ನು ಎದುರಿಸಲಿದೆ.

ದಿನದ ಐದನೇ ಪಂದ್ಯದಲ್ಲಿ ಮಹಾತ್ಮಗಾಂಧಿ ಕಾಶಿ ವಿದ್ಯಾಪೀಠ ವಿವಿ, ಪಶ್ಚಿಮ ವಲಯದ ಶ್ರೀಕುಶಾಲದಾಸ್ ವಿವಿ ಹನುಮಾನಗಢವನ್ನು 3-1 ಸೆಟ್‌ಗಳಿಂದ ಸೋಲಿಸಿತು. ಪಂದ್ಯವನ್ನು ವಾರಾಣಸಿ ತಂಡ 25-14, 21-25, 25-11, 25-11ರಿಂದ ಗೆದ್ದುಕೊಂಡಿತು.

Similar News