ಅರ್ಜಿ ಸಲ್ಲಿಸಿದ ಎಲ್ಲಾ ಅರ್ಹ ಫಲಾನುಭವಿಗಳಿಗೂ ವಾರದಲ್ಲಿ ಹಕ್ಕುಪತ್ರ: ಕೋಟ ಶ್ರೀನಿವಾಸ ಪೂಜಾರಿ
ಕುಂದಾಪುರ: ತಾಲೂಕಿನಲ್ಲಿ ಅನೇಕ ಅರ್ಹ ಫಲಾನುಭವಿಗಳಿಗೆ ಹಕ್ಕುಪತ್ರ ಸಿಕ್ಕಿಲ್ಲ. ಡೀಮ್ಡ್ ಫಾರೆಸ್ಟ್ ಜಾಗದಲ್ಲಿ ವಾಸ ಮಾಡುತ್ತಿದ್ದರೂ ಹಕ್ಕುಪತ್ರಕ್ಕಾಗಿ ಕಾದ ಹಲವರಿಗೆ ದಾಖಲೆ ಸಿಗದ ಕಾರಣಕ್ಕೆ ಯಾವುದೇ ಸೌಲಭ್ಯ ಸಿಗುತ್ತಿಲ್ಲ. ಹೀಗೆ ಅನೇಕ ಅಹವಾಲು ಬಂದಿದ್ದು, ಎಲ್ಲರಿಗೂ ನ್ಯಾಯ ದೊರಕಿಸಿ ಕೊಡಲು ಬದ್ಧ. ವಾರದೊಳಗೆ ಫಲಾನುಭವಿಗಳಿಗೆ ಹಕ್ಕುಪತ್ರ ನೀಡುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದು ಸಮಾಜ ಕಲ್ಯಾಣ ಸಚಿವ ಕೋಟ ಶ್ರೀನಿವಾಸ ಪೂಜಾರಿ ಹೇಳಿದ್ದಾರೆ.
ಕುಂದಾಪುರ ಮಿನಿ ವಿಧಾನಸೌಧ ವಿಡಿಯೋ ಕಾನ್ಪರೆನ್ಸ್ ಹಾಲ್‌ನಲ್ಲಿ ಮಂಗಳವಾರ ಸಾರ್ವಜನಿಕರ ಅಹವಾಲು ಸ್ವೀಕರಿಸಿ ಅವರು ಮಾತನಾಡುತಿದ್ದರು.
ಉಡುಪಿ, ಮಂಗಳೂರು, ಉ.ಕ ಕಚೇರಿಯಲ್ಲಿ ಸಾವಿರಾರು ಫಲಾನುಭವಿ ಗಳು ಅಹವಾಲು ಸಲ್ಲಿಸಿದ್ದು, ಸಚಿವನಾಗಿ ಅದಕ್ಕೆ ಸ್ಪಂದಿಸಲಾಗುತ್ತದೆ. ಸಾರ್ವಜನಿಕರಿಗೆ ಅಹವಾಲು ಸಲ್ಲಿಕೆಗೆ ಅನುಕೂಲವಾಗುವಂತೆ ನನ್ನ ಎಲ್ಲಾ ಕಚೇರಿಯಲ್ಲೂ ಅವಕಾಶ ಮಾಡಿಕೊಟ್ಟಿದ್ದು, ನನ್ನಿಂದ ಆಗುವ, ಸ್ಥಳೀಯ, ಜಿಲ್ಲಾ ಮಟ್ಟದಲ್ಲಿ ಆಗಬಹುದಾದ ಸಮಸ್ಯೆಗೆ ಪರಿಹಾರ ನೀಡಲಾಗಿದೆ. ಅನುದಾನ, ರಾಜ್ಯ ಹಾಗೂ ಇನ್ನಿತರ ಸಮಸ್ಯೆಗಳಿಗೆ ಸಮಯಾವಕಾಶ ಬೇಕಾಗಿರುವುದರಿಂದ ಹಂತಹಂತಲ್ಲಿ ಪರಿಹಾರ ಮಾಡಲಾಗುತ್ತದೆ ಎಂದು ತಿಳಿಸಿದರು.
ಸೀಮೆಎಣ್ಣೆ ಬಂದಿರುವುದು ತೀರಾ ಕಡಿಮೆಯಿದ್ದು, ಬಿಡುಗಡೆ ಆಗಿರುವ ಸೀಮೆಎಣ್ಣೆ ವಿತರಣೆ ಮಾಡಲಾಗಿದೆ. ಜ.25ರ ಒಳಗೆ ಮೀನುಗಾರರ ಸೀಮೆಎಣ್ಣೆ ಸಮಸ್ಯೆ ಪರಿಹಾರ ಮಾಡಲಾಗುತ್ತದೆ ಎಂದು ಅವರು ವಿಶ್ವಾಸ ವ್ಯಕ್ತಪಡಿಸಿದರು.
ಸಿದ್ಧರಾಮಯ್ಯ ಎಲ್ಲಿ ಬೇಕಾದರೂ ಸ್ಪರ್ಧಿಸಲಿ..!
ರಾಜಕಾರಣದಲ್ಲಿ ಯಾರು ಎಲ್ಲಿ ಬೇಕಾದರೂ ಸ್ಪರ್ಧಿಸಬಹುದು. ಅದಕ್ಕೆ ನಿರ್ಬಂಧ ವಿಧಿಸುವಂತಿಲ್ಲ. ಸಿದ್ದರಾಮಯ್ಯ ಎಲ್ಲಿ ಚುನಾವಣೆಗೆ ನಿಲ್ಲಬೇಕು ಎನ್ನುವ ತೀರ್ಮಾನ ಅವರಿಗೆ ಬಿಟ್ಟ ವಿಷಯ. ಸಿದ್ದರಾಮಯ್ಯ ವಲಸೆ ಬಗ್ಗೆ ಟೀಕೆಗೆ ಅವರು ಎಲ್ಲಾದರೂ ಒಂದು ಕ್ಷೇತ್ರದಲ್ಲಿ ನಿಲ್ಲಲಿ ಎನ್ನುವ ಉದ್ದೇಶ ವಿದ್ದಂತಿದೆ. ಅವರು ಎಲ್ಲಿಯಾದರೂ ನಿಲ್ಲಲಿ ಒಂದು ಕ್ಷೇತ್ರ ಆಯ್ಕೆ ಮಾಡಿಕೊಳ್ಳಲಿ ಎಂದು ಕೋಟ ಸಲಹೆ ನೀಡಿದರು.
ಬೂತ್ ಮಟ್ಟದ ಬಿಜೆಪಿ ವಿಜಯ ಅಭಿಯಾನದಲ್ಲಿ ಬೂತ್ ಗೆಲ್ಲುವ ಮೂಲಕ ರಾಜ್ಯದಲ್ಲಿ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವುದು ಪಕ್ಷದ ಗುರಿಯಾಗಿದೆ. ಬಿಜೆಪಿ ಕಾರ್ಯಕರ್ತರು ಹಾಗೂ ಅಭಿಮಾನಿಗಳ ಮನೆ ಮೇಲೆ 50 ಲಕ್ಷ ಧ್ವಜ ಹಾರಿಸುವ ಗುರಿ ಇಟ್ಟುಕೊಂಡಿದ್ದು, ಅದರ ಪ್ರಕ್ರಿಯೆ ಆರಂಭವಾಗಿದೆ. ಇದಕ್ಕಾಗಿ ಸೋಶಿಯಲ್ ಮೀಡಿಯಾ ಹಾಗೂ ವಾಟ್ಸ್‌ಅಪ್ ಗ್ರೂಪ್‌ಗಳ ರಚನೆ ಮಾಡಲಾಗಿದೆ. ಮೂರುದಿನ ರಾಜ್ಯದ ಬೇರೆ ಬೇರೆ ಜಿಲ್ಲೆಗಳಲ್ಲಿ ಬೂತ್ ವಿಜಯ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಗುತ್ತದೆ. ಬೂತ್ ಮಟ್ಟದಲ್ಲಿ ಪ್ರಧಾನಿ ಮನ್ ಕಿ ಬಾತ್ ವೀಕ್ಷಣೆಗೆ ಅವಕಾಶ, ಜ.12ರೊಳಗೆ ರಾಜ್ಯದ 58 ಸಾವಿರ ಬೂತ್ ಮಟ್ಟದ ಸಮಿತಿ ರಚನೆ ಆಗಲಿದೆ. ಬೂತ್ ಮಟ್ಟದಲ್ಲಿ ಕೇಂದ್ರ ಹಾಗೂ ರಾಜ್ಯದ ಸಾಧನೆಗಳನ್ನು ಜನರಿಗೆ ಮುಟ್ಟಿಸಲಾಗುತ್ತದೆ.
ಕೋಟ ಶ್ರೀನಿವಾಸ ಪೂಜಾರಿ, ರಾಜ್ಯ ಸಂಚಾಲಕ ಬೂತ್ ಸಮಿತಿ.