ಉಡುಪಿ: ಕರಾಟೆ ತರಗತಿಯಲ್ಲಿ ಬಾಲಕಿಗೆ ಲೈಂಗಿಕ ದೌರ್ಜನ್ಯ ಪ್ರಕರಣ; ಆರೋಪಿಗೆ 10 ವರ್ಷ ಜೈಲು ಶಿಕ್ಷೆ

Update: 2023-02-04 13:05 GMT

ಉಡುಪಿ: ನಾಲ್ಕು ವರ್ಷಗಳ ಹಿಂದೆ ಕರಾಟೆ ತರಗತಿಯಲ್ಲಿ ಅಪ್ರಾಪ್ತ ಬಾಲಕಿಗೆ ಮೇಲೆ ಲೈಂಗಿಕ ದೌರ್ಜನ್ಯ ಎಸಗಿದ ಪೋಕ್ಸೊ ಪ್ರಕರಣದ ಆರೋಪಿಗೆ ಉಡುಪಿ ಜಿಲ್ಲಾ ಹೆಚ್ಚುವರಿ ಮತ್ತು ಸತ್ರ ನ್ಯಾಯಾಲಯದಲ್ಲಿನ ಪೋಕ್ಸೊ ತ್ವರಿತ ವಿಶೇಷ ನ್ಯಾಯಾಲಯವು 10ವರ್ಷ ಜೈಲುಶಿಕ್ಷೆ ವಿಧಿಸಿ ಶನಿವಾರ ಆದೇಶಿಸಿದೆ.

ಪಡುಬಿದ್ರೆ ಉಮೇಶ್ ಬಂಗೇರ(45) ಶಿಕ್ಷೆಗೆ ಗುರಿಯಾಗಿರುವ ಆರೋಪಿ. ಈತ ಪಡುಬಿದ್ರೆಯಲ್ಲಿ ಕರಾಟೆ ತರಗತಿ ನಡೆಸುತ್ತಿದ್ದು, 2020ರ ಫೆ.12ರಂದು ಕರಾಟೆ ತರಗತಿಗೆ ಬಂದಿದ್ದ 12ವರ್ಷ ವಯಸ್ಸಿನ ಬಾಲಕಿ ಮೇಲೆ ಉಮೇಶ್, ತರಗತಿ ಮುಗಿದ ಬಳಿಕ ದೈಹಿಕ ದೌರ್ಜನ್ಯ ಎಸಗಿದ್ದನು. ಅಲ್ಲದೆ ಈ ವಿಚಾರ ಯಾರಲ್ಲೂ ಹೇಳಬಾರದೆಂದು ಆತ ಬಾಲಕಿಗೆ ಬೆದರಿಸಿದ್ದನು.

2020ರ ಸೆ.27ರಂದು ಬಾಲಕಿಯ ತಾಯಿಗೆ ಕರೆ ಮಾಡಿದ ಆರೋಪಿ, ಈ ದಿನ ತರಗತಿ ಇದ್ದು, ಬಾಲಕಿಯನ್ನು ಕಳುಹಿಸಿಕೊಂಡುವಂತೆ ಕೋರಿ ಕೊಂಡಿದ್ದನು. ಅದರಂತೆ ಬಾಲಕಿಯ ತಾಯಿ ತರಗತಿಗೆ ಹೋಗುವಂತೆ ಬಾಲಕಿಗೆ ತಿಳಿಸಿದ್ದರು. ಆದರೆ ಬಾಲಕಿ ತರಗತಿಗೆ ಹೋಗಲು ಒಪ್ಪದೆ ಅಳುತ್ತಿದ್ದಳು. ಆಗ ತಾಯಿ ವಿಚಾರಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಅದರಂತೆ ತಾಯಿ ಆರೋಪಿ ವಿರುದ್ಧ ಪಡುಬಿದ್ರೆ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದರು.

ಆಗಿನ ಕಾಪು ವೃತ್ತ ನಿರೀಕ್ಷಕ ಮಹೇಶ್ ಪ್ರಸಾದ್ ತನಿಖೆ ನಡೆಸಿ ಆರೋಪಿ ವಿರುದ್ಧ ದೋಷರೋಪಣಾ ಪಟ್ಟಿ ಸಲ್ಲಿಸಿದ್ದರು. ಒಟ್ಟು 26 ಸಾಕ್ಷಿಗಳ ಪೈಕಿ 13 ಸಾಕ್ಷಿಗಳ ವಿಚಾರಣೆಯನ್ನು ಅಭಿಯೋಜನೆ ಮಾಡಿದ್ದರು. ಆರೋಪಿ ಮೇಲಿನ ಆರೋಪ ಸಾಬೀತಾಗಿದೆ ಎಂದು ಅಭಿಪ್ರಾಯ ಪಟ್ಟ ನ್ಯಾಯಾಧೀಶ ಶ್ರೀನಿವಾಸ ಸುವರ್ಣ ಆರೋಪಿಗೆ ಶಿಕ್ಷೆ ವಿಧಿಸಿ ಆದೇಶ ಹೊರಡಿಸಿದರು.

ಆರೋಪಿಗೆ ಪೊಕ್ಸೋ ಕಾಯಿದೆಯಡಿ 10ವರ್ಷ ಜೈಲುಶಿಕ್ಷೆ ಮತ್ತು 10ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾ ಸಜೆ, ಲೈಂಗಿಕ ದೌರ್ಜನ್ಯ ಪ್ರಕರಣದಡಿ 10ವರ್ಷ ಜೈಲುಶಿಕ್ಷೆ ಮತ್ತು 10ಸಾವಿರ ರೂ. ದಂಡ, ದಂಡ ಪಾವತಿಸಲು ತಪ್ಪಿದಲ್ಲಿ ಒಂದು ವರ್ಷ ಹೆಚ್ಚುವರಿ ಸಾದಾ ಸಜೆ, ಕೊಲೆಬೆದರಿಕೆ ಪ್ರಕರಣದಡಿ ಒಂದು ವರ್ಷ ಸಜೆ ಮತ್ತು ಒಂದು ಸಾವಿರ ರೂ. ದಂಡ ಮತ್ತು ತಪ್ಪಿದಲ್ಲಿ ಒಂದು ತಿಂಗಳ ಸಾದಾ ಸಜೆ, ದೈಹಿಕ ಲೈಂಗಿಕ ಕಿರುಕುಳ ಪ್ರಕರಣದಡಿ ಒಂದು ವರ್ಷ ಜೈಲುಶಿಕ್ಷೆ ಮತ್ತು ಒಂದು ಸಾವಿರ ರೂ. ದಂಡ ವಿಧಿಸಿ, ತಪ್ಪಿದಲ್ಲಿ ಒಂದು ತಿಂಗಳ ಹೆಚ್ಚುವರಿ ಸಾದಾ ಸಜೆ ನೀಡಿ ಆದೇಶ ಹೊರಡಿಸಿದೆ.

ದಂಡದ ಒಟ್ಟು 22ಸಾವಿರ ರೂ. ಮೊತ್ತದಲ್ಲಿ 17000 ರೂ. ನೊಂದ ಬಾಲಕಿಗೆ ಪರಿಹಾರವಾಗಿ ಮತ್ತು 5 ಸಾವಿರ ರೂ. ಸರಕಾರಕ್ಕೆ ಪಾವತಿಸಬೇಕು. ಅಲ್ಲದೆ ಸರಕಾರ ನೊಂದ ಬಾಲಕಿಗೆ ಒಂದು ಲಕ್ಷ ರೂ. ಪರಿಹಾರ ನೀಡಬೇಕು ಎಂದು ನ್ಯಾಯಾಲಯ ಆದೇಶದಲ್ಲಿ ತಿಳಿಸಿದೆ. ಪ್ರಾಸಿಕ್ಯೂಶನ್ ಪರವಾಗಿ ಉಡುಪಿ ಪೋಕ್ಸೊ ನ್ಯಾಯಾಲಯದ ವಿಶೇಷ ಸರಕಾರಿ ಅಭಿಯೋಜಕ ವೈ.ಟಿ. ರಾಘವೇಂದ್ರ ವಾದಿಸಿದ್ದರು.

Similar News