ಉಡುಪಿ: ತಾಳಮದ್ದಳೆ ಸಪ್ತಾಹದಲ್ಲಿ 'ಹರಿ ದರ್ಶನ' ಪ್ರಸಂಗ

Update: 2023-03-22 06:19 GMT

ಉಡುಪಿ, ಮಾ.22: ಉಜಿರೆಯ ಕುರಿಯ ವಿಠ್ಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತಪರ್ವ ಹಾಗೂ ಗುರಿಕ್ಕಾರ ನೆಡ್ಲೆ ನರಸಿಂಹ ಭಟ್ಟರ 'ಸಂಸ್ಮೃತಿ' ಸಪ್ತಾಹ ಪ್ರಯುಕ್ತ ನಡೆಯುತ್ತಿರುವ 'ಶ್ರೀ ಕೃಷ್ಣ ರಸಾಯನಮ್' ತಾಳಮದ್ದಳೆ ಶತಕ ಸರಣಿಯ ಎರಡನೇ ದಿನವಾದ ಮಂಗಳವಾರ 'ಹರಿ ದರ್ಶನ' ಪ್ರಸಂಗದ ತಾಳಮದ್ದಳೆ ನಡೆಯಿತು.

ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ನಡೆದ ಈ ತಾಳಮದ್ದಳೆ ಕಾರ್ಯಕ್ರಮಕ್ಕೆ ಭಾಗವತರಾಗಿದ್ದವರು ರಾಘವೇಂದ್ರ ಆಚಾರ್ ಜನ್ಸಾಲೆ. ಅವರೊಂದಿಗೆ ಚೆಂಡೆ ಮದ್ದಳೆಯಲ್ಲಿ ಸುನೀಲ್ ಭಂಡಾರಿ, ಸುಜನ್ ಕುಮಾರ್ ಹಿಮ್ಮೇಳದಲ್ಲಿದ್ದರು.

ಮುಮ್ಮೇಳದಲ್ಲಿ ಮಯೂರಧ್ವಜನ ಪಾತ್ರದಲ್ಲಿ ಸರ್ಪಂಗಳ ಈಶ್ವರ ಭಟ್, ಕೃಷ್ಣನಾಗಿ ರಾಧಾಕೃಷ್ಣ ಕಲ್ಚಾರ್, ತಾಮ್ರಧ್ವಜ ಹಾಗೂ ಕುಮುದ್ವತಿಯರ ಪಾತ್ರಗಳಲ್ಲಿ ವೈಕುಂಠ ಹೇರಳೆ ಅರ್ಥ ಹೇಳಿದರು.

ಪರ್ಯಾಯ ಶ್ರೀ ಕೃಷ್ಣಾಪುರ ಮಠದ ಮ್ಯಾನೇಜರ್ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿದರು. ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ವಂದಿಸಿದರು.

ಬುಧವಾರ(ಮಾ.22) ಸಂಜೆ 7ಕ್ಕೆ ಸಪ್ತಾಹದ ಮೂರನೆಯ ತಾಳಮದ್ದಳೆ 'ಕರ್ಣಭೇದನ' ನಡೆಯಲಿದೆ.

Similar News