ಉಡುಪಿ: ತಾಳಮದ್ದಳೆ ಸಪ್ತಾಹದಲ್ಲಿ "ವಿದುರಾತಿಥ್ಯ" ಪ್ರಸಂಗ

Update: 2023-03-25 10:40 GMT

ಉಡುಪಿ: ಉಜಿರೆಯ ಕುರಿಯ ವಿಠಲ ಶಾಸ್ತ್ರಿ ಸಾಂಸ್ಕೃತಿಕ ಪ್ರತಿಷ್ಠಾನದ ರಜತಪರ್ವ ಹಾಗೂ ಗುರಿಕಾರ ನೆಡ್ಳೆ ನರಸಿಂಹ ಭಟ್ಟರ "ಸಂಸ್ಮೃತಿ" ಸಪ್ತಾಹ ಪ್ರಯುಕ್ತ ನಡೆಯುತ್ತಿರುವ 'ಶ್ರೀ ಕೃಷ್ಣ ರಸಾಯನಮ್' ತಾಳಮದ್ದಳೆ ಸರಣಿಯ ಐದನೆಯ ದಿನ "ವಿದುರಾತಿಥ್ಯ" ಪ್ರಸಂಗದ ತಾಳಮದ್ದಳೆ ನಡೆಯಿತು.

ಮಹಾಭಾರತದ 'ಉದ್ಯೋಗ ಪರ್ವ'ದಲ್ಲಿ ಬರುವ ಆಖ್ಯಾನವನ್ನು ಆಧರಿಸಿರುವ ಪ್ರಸಂಗದ ತಾಳಮದ್ದಳೆಯನ್ನು ಶ್ರೀಕೃಷ್ಣ ಮಠದ ರಾಜಾಂಗಣದಲ್ಲಿ ಶುಕ್ರವಾರ ನಡೆಸಲಾಯಿತು.

ಹಿಮ್ಮೇಳದಲ್ಲಿ ಕೆ.ಜೆ. ಗಣೇಶ್ (ಭಾಗವತಿಕೆ) ಕೆ.ಜೆ. ಸುಧೀಂದ್ರ (ಮದ್ದಳೆ) ಕೆ.ಜೆ. ಕೃಷ್ಣ (ಚೆಂಡೆ) ಭಾಗವಹಿಸಿದರು.
ಪಾತ್ರವರ್ಗದಲ್ಲಿ ಡಾ. ಎಂ. ಪ್ರಭಾಕರ ಜೋಶಿ (ಕೃಷ್ಣ), ಪ್ರೊ. ಎಂ. ಎಲ್. ಸಾಮಗ (ಧರ್ಮರಾಯ), ಉಜಿರೆ ಅಶೋಕ ಭಟ್ (ವಿದುರ) ಹಾಗೂ ಡಾ. ಜಗದೀಶ ಶೆಟ್ಟಿ ಸಿದ್ದಾಪುರ (ದ್ರೌಪದಿ) ಭಾಗವಹಿಸಿದರು. 

ಆರಂಭದಲ್ಲಿ ಶ್ರೀ ಮಠದ ಮೆನೇಜರ್ ಗೋಪಾಲಕೃಷ್ಣ ಉಪಾಧ್ಯಾಯ ಸ್ವಾಗತಿಸಿ ಕೊನೆಯಲ್ಲಿ  ಕುರಿಯ ಪ್ರತಿಷ್ಠಾನದ ಸಂಚಾಲಕ ಉಜಿರೆ ಅಶೋಕ ಭಟ್ ವಂದಿಸಿದರು.

ಸರಣಿಯ ಐದನೆಯ ತಾಳಮದ್ದಳೆಯನ್ನು ಹೆಬ್ರಿ - ಶಿವಪುರ ಸಮೀಪದ ಕುಂದಾರು, ಕೆರೆಬೆಟ್ಟು ಶ್ರೀ ಗೋಪಾಲಕೃಷ್ಣ ಮಠದ ಧರ್ಮದರ್ಶಿಗಳು, ಕಲಾಪೋಷಕರೂ ಆದ ಸೋಮನಾಥ ಆರ್. ಪೂಜಾರಿಯವರು ಆರ್ಥಿಕ ಸಹಾಯ ನೀಡಿ ಪ್ರಾಯೋಜಿಸಿದರು.

Similar News