ಉಡುಪಿ: ನಿರೀಕ್ಷೆಯಂತೆ ಗೋಪಾಲ ಪೂಜಾರಿ, ಸೊರಕೆಗೆ ಕಾಂಗ್ರೆಸ್ ಟಿಕೆಟ್

ಕುಂದಾಪುರ ಕ್ಷೇತ್ರಕ್ಕೆ ದಿನೇಶ್ ಹೆಗ್ಡೆ ಮೊಳಹಳ್ಳಿ ಹೊಸಮುಖ

Update: 2023-03-25 14:17 GMT

ಉಡುಪಿ, ಮಾ.25: ಶೀಘ್ರದಲ್ಲೇ ಘೋಷಣೆಗೊಳ್ಳುವ ಕರ್ನಾಟಕ ವಿಧಾನಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕಾಂಗ್ರೆಸ್ ಪಕ್ಷದ ಮೊದಲ 124 ಅಭ್ಯರ್ಥಿಗಳ ಪಟ್ಟಿಯಲ್ಲಿ ಉಡುಪಿ ಜಿಲ್ಲೆಯ ಮೂರು ಕ್ಷೇತ್ರಗಳಿಗೆ  ಹೆಸರು ಗಳನ್ನು ಅಂತಿಮಗೊಳಿಸಿ ಪ್ರಕಟಿಸಲಾಗಿದೆ.

ನಿರೀಕ್ಷೆಯಂತೆ ಕಾಪು ವಿಧಾನಸಭಾ ಕ್ಷೇತ್ರದಲ್ಲಿ ಮಾಜಿ ಶಾಸಕ ಹಾಗೂ ಸಚಿವ ವಿನಯ ಕುಮಾರ್ ಸೊರಕೆ ಹಾಗೂ ಬೈಂದೂರು ಕ್ಷೇತ್ರದಲ್ಲಿ ಮಾಜಿ ಶಾಸಕ ಕೆ. ಗೋಪಾಲ ಪೂಜಾರಿ ಅವರು ತಮ್ಮ ಸ್ಥಾನಗಳನ್ನು ಉಳಿಸಿ ಕೊಂಡಿದ್ದಾರೆ.

ಕುಂದಾಪುರ ವಿಧಾನಸಭಾ ಕ್ಷೇತ್ರಕ್ಕೆ ಮಾತ್ರ ಪಕ್ಷ ಹೊಸ ಅಭ್ಯರ್ಥಿಗೆ ಮಣೆ ಹಾಕಿದೆ. ಯುವ ನಾಯಕ ಮೊಳಹಳ್ಳಿ ದಿನೇಶ್ ಹೆಗ್ಡೆ ಅವರು ಮೊದಲ ಬಾರಿ ಶಾಸಕ ಸ್ಥಾನಕ್ಕೆ ಸ್ಪರ್ಧಿಸುವ ಅವಕಾಶವನ್ನು ಪಡೆದಿದ್ದಾರೆ.  

2013ರಲ್ಲಿ ಬಿಜೆಪಿಯ ಲಾಲಾಜಿ ಮೆಂಡನ್‌ರನ್ನು ಸೋಲಿಸಿ ಶಾಸಕರಾಗಿ ಆಯ್ಕೆಯಾಗಿದ್ದ ಸೊರಕೆ, 2018ರಲ್ಲಿ ಅವರಿಂದಲೇ ಪರಾಭವಗೊಂಡಿದ್ದರು. ಇದೀಗ ಮೂರನೇ ಬಾರಿಗೆ ಕಾಪುವಿನಲ್ಲಿ ಸೊರಕೆ ಅದೃಷ್ಟ ಪರೀಕ್ಷೆಗೆ ಮುಂದಾಗಿದ್ದಾರೆ. ಗೆಲುವಿಗಾಗಿ ಅವರು ಕಳೆದೆರಡು ವರ್ಷಗಳಿಂದ ಕ್ಷೇತ್ರದಲ್ಲಿ  ಸಕ್ರಿಯರಾಗಿದ್ದು, ಜನರ ನಿರಂತರ ಸಂಪರ್ಕದಲ್ಲಿದ್ದಾರೆ.

ಈಗಾಗಲೇ ಬೈಂದೂರಿನಿಂದ ಮೂರು ಬಾರಿ ಶಾಸಕರಾಗಿ ಆಯ್ಕೆಯಾಗಿರುವ ಗೋಪಾಲ ಪೂಜಾರಿ ಅವರು ಆರನೇ ಬಾರಿಗೆ ಕ್ಷೇತ್ರದಿಂದ ಸ್ಪರ್ಧಿಸುತಿದ್ದು, ಕಳೆದೆರಡು ವರ್ಷಗಳಿಂದ ಇದಕ್ಕಾಗಿ ತಯಾರಿಯನ್ನೂ ನಡೆಸಿದ್ದಾರೆ.

1999ರ ಚುನಾವಣೆಯ ಬಳಿಕ ಕುಂದಾಪುರ ಕ್ಷೇತ್ರದಲ್ಲಿ ಗೆಲುವೆಂಬುದು ಕಾಂಗ್ರೆಸ್‌ಗೆ ಗಗನಕುಸುಮದಂತಾಗಿದ್ದು, ಈ ಬಾರಿ ಸ್ಥಳೀಯರೇ ಆಗಿರುವ  51ರ ಹರೆಯದ ಎಲ್‌ಎಲ್‌ಬಿ ಪದವೀಧರ ದಿನೇಶ ಹೆಗ್ಡೆ ಮೊಳಹಳ್ಳಿ ಅವರಿಗೆ ಟಿಕೇಟ್ ನೀಡಿರುವ ಕಾಂಗ್ರೆಸ್ ಹೈಕಮಾಂಡ್ ಗೆಲುವಿಗೆ ಪ್ರಯತ್ನ ನಡೆಸಲು ನಿರ್ಧರಿಸಿದೆ. ಮೊಳಹಳ್ಳಿ ಗ್ರಾಪಂನ ಸದಸ್ಯರಾಗಿ ರಾಜಕೀಯದಲ್ಲಿ ಅನುಭವವನ್ನು ಇವರು ಹೊಂದಿದ್ದಾರೆ. 

ಮೊಳಹಳ್ಳಿ ಎಂಬ ಚಿಕ್ಕ ಹಳ್ಳಿಯಲ್ಲಿ ಜಯರಾಮ ಹೆಗ್ಡೆ ಹಾಗೂ ರತ್ನಾವತಿ ಜೆ. ಹೆಗ್ಡೆ ಅವರ ದ್ವಿತೀಯ ಪುತ್ರರಾಗಿ ಜನಿಸಿದ ದಿನೇಶ್ ಹೆಗ್ಡೆ (51) ಅವರು ಎಲ್‌ಎಲ್‌ಬಿ ಪದವೀಧರರು. ಪಿಡಬ್ಲ್ಯೂಡಿ ಗುತ್ತಿಗೆದಾರರಾಗಿ ಮೊಳಹಳ್ಳಿ, ಕಾರ್ಕಳ, ಪೆರ್ಡೂರು, ಗದಗ, ಶಿವಮೊಗ್ಗ ಮುಂತಾದ ಕಡೆಗಳಲ್ಲಿ ತಮ್ಮ ವ್ಯವಹಾರಿಕ ಕ್ಷೇತ್ರವನ್ನು ವಿಸ್ತರಿಸಿಕೊಂಡಿದ್ದಾರೆ.

ಸಮಾಜ ಸೇವೆಯಲ್ಲೂ ತನ್ನನ್ನು ತೊಡಗಿಸಿಕೊಂಡಿರುವ ದಿನೇಶ್ ಹೆಗ್ಡೆ, ಜಯರತ್ನ ಚಾರಿಟೇಬಲ್ ಟ್ರಸ್ಟ್ ಸ್ಥಾಪಿಸಿ ಪ್ರತಿ ವರ್ಷವೂ ಎಸೆಸೆಲ್ಸಿ ಹಾಗೂ ಪಿಯುಸಿಯಲ್ಲಿ ಶೇ.80ಕ್ಕಿಂತ ಅಧಿಕ ಅಂಕಗಳಿಸಿದ ವಿದ್ಯಾರ್ಥಿಗಳಿಗೆ ಆರ್ಥಿಕ ವಾಗಿ ನೆರವಾಗುವುದಲ್ಲದೆ, ಪ್ರತಿ ವರ್ಷವೂ ಆರ್ಥಿಕವಾಗಿ ಹಿಂದುಳಿದ ವಿದ್ಯಾರ್ಥಿಗಳನ್ನು ಪ್ರತಿಷ್ಠಿತ ಕಾಲೇಜಿನಲ್ಲಿ ದಾಖಲಾತಿಗೊಳಿಸಿ ಆ ವಿದ್ಯಾರ್ಥಿ ಗಳ ಸಂಪೂರ್ಣ ಶೈಕ್ಷಣಿಕ ಜವಾಬ್ದಾರಿ ವಹಿಸಿಕೊಳ್ಳುತ್ತಿದ್ದಾರೆ. 

ಶಿಕ್ಷಣ, ಧಾರ್ಮಿಕ, ಕ್ರೀಡಾ ಕ್ಷೇತ್ರಕ್ಕೆ ತನ್ನದೆ ಆದ ಕೊಡುಗೆ ನೀಡುತ್ತಾ ಬಂದಿರುವ ದಿನೇಶ್ ಹೆಗ್ಡೆ, ಮೊಳಹಳ್ಳಿ ಗ್ರಾಮ ಪಂಚಾಯತಿಗೆ ಮೂರು ಬಾರಿ ಸದಸ್ಯರಾಗಿ ಆಯ್ಕೆಯಾಗಿದ್ದು, ಒಮ್ಮೆ ಅಧ್ಯಕ್ಷರಾಗಿಯೂ ಕಾರ್ಯ ನಿರ್ವಹಿಸಿದ್ದಾರೆ. ಸದ್ಯ ಇವರು ಮೊಳಹಳ್ಳಿ ಗ್ರಾಪಂನ ಸದಸ್ಯರಾಗಿದ್ದಾರೆ. ಅಲ್ಲದೇ ಅವರು ಮೊಳಹಳ್ಳಿ ವ್ಯವಸಾಯ ಸೇವಾ ಸಹಕಾರಿ ಬ್ಯಾಂಕ್ ನಿರ್ದೇಶಕರಾಗಿ ಸೇವೆ ಸಲ್ಲಿಸುತಿದ್ದು, ಸಹಕಾರಿ ರಂಗದಲ್ಲೂ ಮುಂಚೂಣಿ ಯಲ್ಲಿದ್ದಾರೆ.

ಉಡುಪಿಗೆ ರಮೇಶ್ ಕಾಂಚನ್?: ಜಿಲ್ಲೆಯಲ್ಲಿ ಇನ್ನು ಉಡುಪಿ ಹಾಗೂ ಕಾರ್ಕಳ ವಿಧಾನಸಭಾ ಕ್ಷೇತ್ರಗಳಿಗೆ ಅಭ್ಯರ್ಥಿಗಳನ್ನು ಹೆಸರಿಸಬೇಕಿದೆ. ಕೊನೆಯ ಕ್ಷಣದ ಬದಲಾವಣೆ ಇಲ್ಲದೇ ಹೋದರೆ ಉಡುಪಿಗೆ ಮೊಗವೀರ ಮುಖಂಡ ರಮೇಶ್ ಕಾಂಚನ್ ಅವರ ಹೆಸರು ಅಂತಿಮಗೊಂಡಿದೆ ಎಂದು ಕಾಂಗ್ರೆಸ್‌ನ ಉನ್ನತ ಮೂಲಗಳು ತಿಳಿಸಿವೆ. ಹಾಲಿ ಉಡುಪಿ ನಗರಸಭಾ ಸದಸ್ಯರಾಗಿರುವ ರಮೇಶ್, ಪಕ್ಷದ ಚಟುವಟಿಕೆಗಳಲ್ಲಿ ಸಕ್ರಿಯರಾಗಿ ಕಾಣಿಸಿ ಕೊಳ್ಳುತಿದ್ದಾರೆ.

ಕಾರ್ಕಳ ಕ್ಷೇತ್ರಕ್ಕೂ ಉದ್ಯಮಿಯಾಗಿರುವ ಮುನಿಯಾಲು ಉದಯ ಕುಮಾರ್ ಶೆಟ್ಟಿ ಅವರ ಹೆಸರು ಅಂತಿಮಗೊಂಡಿದೆ ಎಂದು ತಿಳಿದುಬಂದಿದೆ.

Similar News