ಬಂಟ್ವಾಳ: ಅಕ್ರಮ ಜಾನುವಾರು ಸಾಗಾಟ ಆರೋಪ; ಪಿಕಪ್ ಚಾಲಕ ಸೆರೆ
Update: 2023-03-26 15:36 GMT
ಬಂಟ್ವಾಳ: ಪಿಕಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರು ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸರು ಅಮ್ಮೆಮ್ಮಾರು ರೈಲ್ವೇ ಕ್ರಾಸಿಂಗ್ ಬಳಿ ದಾಳಿ ನಡೆಸಿ ಆರೋಪಿ ಸಹಿತ ವಾಹನದಲ್ಲಿದ್ದ ದನಗಳನ್ನು ವಶಕ್ಕೆ ಪಡೆದುಕೊಂಡು ಪ್ರಕರಣ ದಾಖಲಿಸಿದ್ದಾರೆ.
ಚಾಲಕ ಪ್ರವೀಣ್ ಪ್ರದೀಪ್ ಫೆರ್ನಾಂಡಿಸ್ ಬಂಧಿತ ಆರೋಪಿಯಾಗಿದ್ದು, ಇತರ ಆರೋಪಿಗಳಾದ ರೋಯಲ್ ಸಲ್ದಾನ ಮತ್ತು ಸಮೀಮ್ ಅಡ್ಯಾರ್ ಪದವು ಎಂಬವರು ಪರಾರಿಯಾಗಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಬಂಟ್ವಾಳ ಗ್ರಾಮಾಂತರ ಠಾಣೆ ಪೊಲೀಸ್ ಉಪ ನಿರೀಕ್ಷಕ ಉದಯ ರವಿ ವೈ.ಎಂ. ಅವರು ನಿನ್ನೆ ಫರಂಗಿಪೇಟೆಯಲ್ಲಿ ರೌಂಡ್ಸ್ ನಲ್ಲಿ ಕರ್ತವ್ಯದಲ್ಲಿದ್ದ ವೇಳೆ ಪಿಕ್ ಅಪ್ ವಾಹನದಲ್ಲಿ ಅಕ್ರಮವಾಗಿ ಜಾನುವಾರುಗಳನ್ನು ಸಾಗಾಟ ಮಾಡುತ್ತಿರುವ ಕುರಿತು ಖಚಿತ ಮಾಹಿತಿ ಲಭಿಸಿದ ಹಿನ್ನೆಲೆಯಲ್ಲಿ ಈ ದಾಳಿ ನಡೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.